ಹೊನ್ನಾವರ : ತಾಲೂಕಿನಲ್ಲಿ ವರುಣನ ಅಬ್ಬರ ನಿಂತಿಲ್ಲ, ಮೊಗೆ ಮೊಗೆದು ಹೊಯ್ದಷ್ಟು ನೀರು ಸುರಿಯುತ್ತಿದೆ. ಶುಕ್ರವಾರವು ಮಳೆ ಮುಂದುವರಿದಿದ್ದು ಹಾನಿ, ಅವಘಡ ಸಂಭವಿಸಿದ್ದು, ಪ್ರವಾಹ ಪರಿಸ್ಥಿತಿ ಮುಂದುವರಿದಿದ್ದು, ಕಾಳಜಿ ಕೇಂದ್ರದಲ್ಲಿ ನೆರೆ ಸಂತ್ರಸ್ತರು ಆಶ್ರಯ ಪಡೆದಿದ್ದಾರೆ.
ಗುಂಡಬಾಳ, ಬಾಸ್ಕೇರಿ, ಬಡಗಣಿ ಹೊಳೆ ಭರ್ತಿಯಾಗಿ ಮೈದುಂಬಿ ಹರಿದಿದೆ. ನೀರು ತುಂಬಿದ ನದಿ ತಟದ ಮನೆಯ ಒಳಗಡೆ ಪ್ರವೇಶ ಮಾಡಿದೆ. ಸುತ್ತಮುತ್ತಲಿನ ತೋಟಗಳು ಸಂಪೂರ್ಣ ಜಲಾವ್ರತಗೊಂಡಿದೆ. ತಗ್ಗು ಪ್ರದೇಶವಾಗಿದ್ದರಿಂದ ಪ್ರತಿವರ್ಷ ಮಳೆಗಾಲದಲ್ಲಿಯು ಇಲ್ಲಿ ಬಹುಬೇಗ ಪ್ರವಾಹ ಪರಿಸ್ಥಿತಿ ಉಂಟಾಗುತ್ತಿದೆ. ಪಟ್ಟಣದಲ್ಲಿಯು ರಸ್ತೆಯ ಮೇಲೆ ಹರಿದ ನೀರು ಕೃತಕ ಪ್ರವಾಹ ಸೃಷ್ಟಿಸಿದೆ.
ಗ್ರಾಮೀಣ ಮತ್ತು ರಾಷ್ಟ್ರೀಯ ಹೆದ್ದಾರಿಯ ಅಂಚಿನಲ್ಲಿ ವಿವಿಧ ಕಾರಣಕ್ಕೆ ಪೈಪ್ ಲೈನ್ ಮಾಡಲು ಹೊಂಡ ತೋಡಿರುವ ಪರಿಣಾಮ ವಾಹನ ಸಂಚಾರಕ್ಕೆ ಅವಾಂತರ ಉಂಟಾಗುತ್ತಿದೆ. ಈ ಹಿಂದೆ ರಸ್ತೆ ಅಂಚಿನ ಘಟಾರ ಹೊಂಡ ತೆಗೆದವರು ಮಣ್ಣಿನಿಂದ ಮುಚ್ಚಿ ಹಾಕಿದ್ದಾರೆ. ಪರಿಣಾಮ ನೀರು ರಸ್ತೆ ಮೇಲೆ ಹರಿಯುತ್ತಿದೆ.
ತಾಲೂಕಿನ ಕೊಡಾಣಿಯಿಂದ ಬಾಳೆಮೇಟ್ ಹೋಗುವ ರಸ್ತೆ ಹಾಗೂ ಮೇಲ್ಭಾಗದ ಗುಡ್ದ ಕುಸಿತ ಆಗಿ 3 ಗ್ರಾಮಗಳ ಒಟ್ಟು ಅಂದಾಜು 250 ಕುಟುಂಬಕ್ಕೆ ಸಂಪರ್ಕ ಕಡಿತವಾಗಿರುವ ಕುರಿತು ಸ್ಥಳಕ್ಕೆ ಭೇಟಿ ನೀಡಿ ಭಟ್ಕಳ ಸಹಾಯಕ ಆಯುಕ್ತರು ಪರಿಶೀಲನೆ ನಡೆಸಿದ್ದಾರೆ. ಗುಂಡಿಬೈಲ ನಂ 1 ಹಾಗೂ ನಂ 2 ಶಾಲೆಯ ಕಾಳಜಿ ಕೇಂದ್ರಗಳಲ್ಲಿ ಮದ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿರುತ್ತದೆ. ರಾಷ್ಟ್ರೀಯ ಹೆದ್ದಾರಿ 69 ರ ಹೆರಂಗಡಿ ಹತ್ತಿರ ರಸ್ತೆಗೆ ಅದ್ದವಾಗಿ ಮರ ಬಿದ್ದು ಸ್ವಲ್ಪ ಹೊತ್ತು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ತಕ್ಷಣ ಮರ ಕಟಾವು ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಮಾವಿನಕುರ್ವ ಗ್ರಾ. ಪಂ. ವ್ಯಾಪ್ತಿಯ ಗುಡ್ಡದ ಅಂಚಿನಲ್ಲಿ ವಾಸಿಸುವವರಿಗೆ ನೋಟಿಸ್ ನೀಡಿ ಸುರಕ್ಷಿತ ಸ್ಥಳಕ್ಕೆ ತೆರಳಲು ತಿಳಿಸಲಾಗಿದೆ.
ಕಾಳಜಿ ಕೇಂದ್ರದ ಮಾಹಿತಿ :
ಸ. ಹಿ. ಪ್ರಾ ಶಾಲೆ ನಾಥಗೇರಿಯಲ್ಲಿ 53, ಸ. ಹಿ. ಪ್ರಾ ಶಾಲೆ ಗುಡ್ಡೆಬಾಳದಲ್ಲಿ 18. ಸ. ಹಿ. ಪ್ರಾ ಶಾಲೆ ಕಡಗೇರಿಯಲ್ಲಿ 52, ಸ. ಹಿ. ಪ್ರಾ ಶಾಲೆ ಕಡತೋಕದಲ್ಲಿ 150, ಸ. ಹಿ. ಪ್ರಾ ಶಾಲೆ ಭಾಸ್ಕೇರಿಯಲ್ಲಿ 9, ಸ. ಕಿ. ಪ್ರಾ ಶಾಲೆ ಕಲ್ಕಟ್ಟೆಯಲ್ಲಿ 18, ಸ. ಹಿ. ಪ್ರಾ ಶಾಲೆ ಗುಂಡಿಬೈಲ ನಂ. 2 ರಲ್ಲಿ 44, ಸ. ಹಿ. ಪ್ರಾ ಶಾಲೆ ಗುಂಡಾಬಾಳ ನಂ. 1 ರಲ್ಲಿ 1 36, ಸ. ಹಿ. ಪ್ರಾ ಶಾಲೆ ಗುಂಡಬಾಳ ನಂ. 1 ರಲ್ಲಿ 15, , ಸ. ಹಿ. ಪ್ರಾ ಶಾಲೆ ಗುಂಡಬಾಳ ನಂ. 2 ರಲ್ಲಿ 14, ಹೆಬೈಲ್ ಅಂಗನವಾಡಿ ಕೇಂದ್ರದಲ್ಲಿ 12, ಸ. ಹಿ. ಪ್ರಾ ಶಾಲೆ ಹುಡಗೋಡದಲ್ಲಿ 25, ಸ. ಹಿ. ಪ್ರಾ ಶಾಲೆ ಹಡಿನಬಾಳದಲ್ಲಿ 40 ತಾಲೂಕಿನಲ್ಲಿ ಒಟ್ಟು 486 ಜನರು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.