ಕುಮಟಾ: ಅಂಕೋಲಾ ತಾಲೂಕಿನ ಶಿರೂರಿನ ಗುಡ್ಡ ಕುಸಿತದಿಂದ ನಿರಾಶ್ರಿತರಾಗಿರುವ ಹಾಗೂ ಗಾಯಗೊಂಡು ಕುಮಟಾ ಸರಕಾರಿ ಆಸ್ಪತ್ರೆ ಸೇರಿರುವ ಗಾಯಾಳುಗಳನ್ನು ಸಂತೈಸಿದ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಹಾಗೂ ಕೆಡಿಸಿಸಿ ಬ್ಯಾಂಕಿನ ನಿರ್ದೇಶಕ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಗಜಾನನ ಪೈ ಮತ್ತು ಕುಮಟಾ ಬಿಜೆಪಿ ಮಂಡಲ ಅಧ್ಯಕ್ಷ ಜಿ.ಐ ಹೆಗಡೆ ಮತ್ತು ಇತರರು ನಿರಾಶ್ರಿತರಿಗೆ ವಸ್ತ್ರ ನೀಡುವುದರ ಮೂಲಕ ಮಾನವೀಯತೆ ಮೆರೆದರು.
ಗುರುವಾರ ಕುಮಟಾದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಅನಂತಮೂರ್ತಿ ಹೆಗಡೆ ನಿರಾಶ್ರಿತರಿಗೆ ವಸ್ತ್ರ ಹಾಗೂ ಅಗತ್ಯ ಪರಿಕರಗಳನ್ನು ವಿತರಿಸಿ ಮಾತನಾಡಿ, ಘಟನೆಯಿಂದ ಹಲವರು ನಿರಾಶ್ರಿತರಾಗಿದ್ದಾರೆ. ಚಿಕಿತ್ಸೆ ಪಡೆದು ನಾಳೆ ಎಲ್ಲಿಗೆ ಹೋಗಬೇಕು ಎನ್ನುವ ಚಿಂತೆ ಅವರನ್ನು ಕಾಡುತ್ತಿದೆ. ಹೀಗಾಗಿ ಸರ್ಕಾರ ಮತ್ತು ಆಡಳಿತದವರು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಅವರ ಕಷ್ಟವನ್ನು ಅರಿಯಲು ಮುಖ್ಯಮಂತ್ರಿಗಳು ಜಿಲ್ಲೆಗೆ ಬರಬೇಕು. ನಾವು ನಮ್ಮ ಜಿಲ್ಲೆಯಿಂದ ನಾಲ್ಕು ಜನ ಶಾಸಕರನ್ನು ನಿಮಗೆ ಕೊಟ್ಟಿದ್ದೇವೆ ನೀವು ಬಂದು ಜನರಿಗೆ ಧೈರ್ಯ ತುಂಬುವ ಕಾರ್ಯ ಮಾಡಿ ಎಂದು ಅನಂತಮೂರ್ತಿ ಹೆಗಡೆ ಆಗ್ರಹಿಸಿದ್ದರು.
ಮನೆಯ ಎಲ್ಲ ವಸ್ತುಗಳು, ಮನೆ ಹಾಗೂ ನನ್ನ ಆಹಾರಗಳನ್ನು ಕಳೆದುಕೊಂಡು ನಿರಾಶ್ರಿತರಾದವರು ಮುಂದೆ ಎಲ್ಲಿ ಸಾಗಬೇಕು ಎಂಬುದು ಅವರಿಗೆ ತಿಳಿದಿಲ್ಲ. ನಾವು ಅವರ ಜೊತೆಗಿರುತ್ತೇವೆ ಆದರೆ ಸರ್ಕಾರ ಇವರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕೆಡಿಸಿಸಿ ಬ್ಯಾಂಕಿನ ನಿರ್ದೇಶಕ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಗಜಾನನ ಪೈ ಮತ್ತು ಕುಮಟಾ ಬಿಜೆಪಿ ಮಂಡಲಾ ಅಧ್ಯಕ್ಷ ಜಿ.ಐ ಹೆಗಡೆ, ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಅಧ್ಯಕ್ಷ ಉಮೇಶ ಹರಿಕಾಂತ, ಅಳಕೋಡ ಪಂಚಾಯತ ಅಧ್ಯಕ್ಷ ದೇವು ಗೌಡ, ಅಳಕೋಡ ಪಂಚಾಯತದ ಸದಸ್ಯ ವಿನಾಯಕ ನಾಯ್ಕ ಹಾಗೂ ಇತರರು ಇದ್ದರು.