ಶಿರಸಿ: ಬರಹಯಾನವೆನ್ನುವುದೇ ಒಂದು ಸುಂದರ ಅನುಭವ. ಹೋರಾಟದ ವೇದಿಕೆಯಲ್ಲಿ ಬದುಕು ಅರಳಿ ಬೆಳಗಬೇಕು, ಜೀವನ ಹೂದೋಟವಾಗಿ ಅರ್ಥಪೂರ್ಣವಾಗಿ ಬಾಳಿದರೆ ಅದಕ್ಕೊಂದು ಅರ್ಥ ಬಂದು ಸಾರ್ಥಕತೆಯನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಬರಹಗಾರ, ಸಾಹಿತಿ, ಖ್ಯಾತ ವೈದ್ಯ ಡಾ.ಅಜಿತ್ ಹರೀಶಿ ಹೇಳಿದರು.
ಸಾಹಿತ್ಯ ಸಂಚಲನ ಶಿರಸಿ ಮತ್ತು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು, ಶಿರಸಿ ತಾಲೂಕು ಘಟಕ, ಜಿಲ್ಲಾ ಉತ್ತರ ಕನ್ನಡ ಹಾಗೂ ನೆಮ್ಮದಿಯ ಓದುಗರ ಬಳಗದ ಸಂಯುಕ್ತ ಆಶ್ರಯದಲ್ಲಿ ನಗರದ ರಂಗಧಾಮದಲ್ಲಿ ಜರುಗಿದ ಕೃತಿ ಅವಲೋಕನ, ಕವಿಗೋಷ್ಠಿ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸೃಜನಶೀಲತೆಯು ಕಥೆ, ಕವನ, ಸಾಹಿತ್ಯಕ್ಕೆ ಪೂರಕವಾಗಿ ಒಟ್ಟಾರೆ ಫಲಶ್ರುತಿಯೊಂದಿಗೆ ಸಾಹಿತ್ಯ ಸಮೃದ್ಧ ಬರಹಗಳು ಇಂದಿಗೂ ಎಂದೆಂದಿಗೂ ವಾಸ್ತವಿಕ ಅಂಶಗಳಿಂದ ಕೂಡಿ ಸಮಾಜಮುಖಿಯಾಗಿ ಮನೋಲ್ಲಾಸವನ್ನು ನೀಡುವ ಪ್ರಕ್ರಿಯೆಗೆ ನಾಂದಿ ಆಗಬೇಕು. ಜೀವನಪಥದಲ್ಲಿ ಸಾಗುವವರಿಗೆ ಕೈ ದೀವಿಗೆಯಾಗಿ, ದಾರಿದೀಪವಾಗಬೇಕು. ಪೌರಾಣಿಕ ಅಂಶಗಳನ್ನು ಪರಿಗಣಿಸುವುದಾದರೆ ಅದರ ಹುಟ್ಟು ಗಣಪತಿ ಪ್ರಜ್ಞೆ ಮತ್ತು ಷಣ್ಮುಖ ಪ್ರಜ್ಞೆಯನ್ನು ಉಲ್ಲೇಖಿಸಬಹುದಾಗಿದೆ. ಗಣಪತಿ ಬುದ್ಧಿಮತ್ತೆ ಚೌಕಟ್ಟನ್ನು ಪ್ರತಿನಿಧಿಸಿರೆ, ಷಣ್ಮುಖ ಓಡಾಟ, ಒಡನಾಟ ಸಂಗಮಿಸುತ್ತಾನೆ. ಹನುಮಂತನ ಎರಡು ವಿಶೇಷ ಗುಣಗಳೆಂದರೆ, ಅಣಿಮಾ ಮತ್ತು ಗರಿಮಾ. ಸಾಹಿತಿ ಈ ಎರಡು ಗಣಗಳನ್ನು ತಮ್ಮ ಬರಹಗಳಲ್ಲಿ ಅಭಿವ್ಯಕ್ತಿಪಡಿಸುವ ಕಲಾತ್ಮಕತೆಯನ್ನು ಹೊಂದಿರಬೇಕು ಎಂದರು.
ಜೀವನ ಸಂಕಷ್ಟಗಳ ಸರಮಾಲೆಯಾದರೂ ಅದನ್ನು ನಿವಾರಿಸಿಕೊಂಡು ಹೋಗುವಲ್ಲಿ ಜಾಣತನ, ಸಂಯಮ, ಸ್ನೇಹಶೀಲ ವ್ಯಕ್ತಿತ್ವ, ಮೌಲ್ಯಯುತ ತತ್ವ, ಮಾನವೀಯತೆ, ವಿಶ್ವಬಂಧುತ್ವವನ್ನು ರೂಢಿಸಿಕೊಳ್ಳಬೇಕು. ಇವೆಲ್ಲದಕ್ಕೂ ಸಾಹಿತ್ಯ ಬೆನ್ನೆಲುಬಾಗಿರಬೇಕು. ಸಾಹಿತ್ಯ ಚಿಂತನ-ಮಂಥನದ ವಸ್ತುವಾಗಿ ಜನಮಾನಸದಲ್ಲಿ ನೆಲೆಗೊಂಡು ವ್ಯಕ್ತಿತ್ವ ವಿಕಸನವಾಗಬೇಕು ಎಂದು ತಮ್ಮ “ಉಪರಿ” ಕೃತಿಯ ಕುರಿತು ಮನೋಜ್ಞವಾಗಿ ಮಾತನಾಡಿದರು.
ಡಾ.ಅಜಿತ ಹರೀಶಿಯವರ “ಉಪರಿ” ಕೃತಿಯ ಅವಲೋಕನ ಮಾಡಿದ ಅಪರ್ಣ ಹೆಗಡೆ, ಮನುಷ್ಯ ತನ್ನೆಲ್ಲ ಆಸೆ-ಆಕಾಂಕ್ಷೆ, ಕಾಮನೆಗಳನ್ನು ಈಡೇರಿಸಿಕೊಳ್ಳಲು ತಿಳುವಳಿಕೆ ರಹಿತವಾದ ಮಾರ್ಗದಲ್ಲಿ ಉಪಕ್ರಮಿಸಿ ಅನಾಹುತದ ಪರಂಪರೆಯನ್ನು ಸೃಷ್ಟಿಸುತ್ತಾನೆ. ಅರಿವು ಮುಖ್ಯ. ಅದು ಯಾವುದೇ ವಿಷಯದಲ್ಲಿ ಹೆಚ್ಚಾದರೂ ಹುಚ್ಚಿಗೆ ಕಾರಣ. ಇದನ್ನು ಕೃತಿಕಾರರು ತಮ್ಮ ಕಥೆಗಳಲ್ಲಿ ವ್ಯಕ್ತಪಡಿಸಿದ್ದಾರೆ. ಎಂಟು ಕಥೆಗಳಿದ್ದ ಕೂಡಿದ ಈ ‘ಉಪರಿ’ ಕೃತಿ ಕೆಲವು ವೈವಿಧ್ಯತೆ, ವೈಶಿಷ್ಟ್ಯತೆಗಳಿಂದ ಹೂಡಿದ್ದು ಓದುಗರ ಗಮನವನ್ನು ತನ್ನತ್ತ ಸೆಳೆಯಬಲ್ಲುದಾಗಿದೆ. ಈ ಕಥಾ ಸಂಕಲನ ವಾಸ್ತವಿಕ ಸಂಗತಿಗಳಾದ ನೋವು-ನಲಿವು, ಸೋಲು-ಗೆಲುವು ಸಹಜ, ಇದ್ದಂತೆ ಅನುಭವಿಸುವುದು ಇದರ ಸಂದೇಶವಾಗಿದೆ ಎಂದು ಸುಂದರವಾಗಿ ಅವಲೋಕನೆ ಮಾಡಿದರು.
ಜಿ.ಎನ್.ಬಣಗಿಯವರ ‘ಬಾಳ ನರ್ತಕ’ ಕವನ ಸಂಕಲನದ ಅವಲೋಕವನ್ನು ಚಿಂತಕ ಗಣಪತಿ ಭಟ್ಟ ವರ್ಗಾಸರ ಮಾಡಿಕೊಡುತ್ತಾ ಕವಿತ್ವ ಗುಣವೇ ಪ್ರೇರಣೆಗೆ ಕಾರಣ ಎಂದು ಹೇಳಿ, 35 ಕವನಗಳಿಂದ ಅಲಂಕೃತವಾದ ಈ ಕವನ ಸಂಕಲನ ಕೃಷಿ, ಬೇಸಾಯ, ಸಾಮಾಜಿಕ ಅಂಶಗಳಿಂದ ಕೂಡಿದ್ದ ಗುಣಗ್ರಾಹ್ಯವಾಗಿದ್ದು ಸಾಹಿತ್ಯದ ದೃಷ್ಟಿಯಿಂದ ಉನ್ನತ ಸ್ಥಾನದಲ್ಲಿದೆ ಎಂದರು.
ಕಥೆಗಾರ, ನಿವೃತ್ತ ಶಿಕ್ಷಕ ಜಿ.ಎನ್.ಹೆಗಡೆ ಬಣಗಿ,14 ವರ್ಷಗಳ ನಂತರ ಈ ನನ್ನ ಕವನ ಸಂಕಲನ ಅವಲೋಕನೆಯಾಗಿದ್ದು ನನಗೆ ಸಂತೋಷ ತಂದಿದೆ ಎಂದರು.
ನಂತರ ನಡೆದ ಕವಿಗೋಷ್ಠಿಯಲ್ಲಿ ಜಲಜಾಕ್ಷಿ ಶೆಟ್ಟಿ, ಸುವರ್ಣ ಭಟ್, ಯಶಸ್ವಿನಿ ಶ್ರೀಧರಮೂರ್ತಿ, ಮನೋಹರ ಮಲ್ಮನೆ, ಲತಾ ಹೆಗಡೆ, ಮಂಗಳಗೌರಿ ಭಟ್, ಉಮೇಶ, ದೈವಜ್ಞ, ಹನುಮಂತ ಸಾಲಿ, ಜಗದೀಶ್ ಭಂಡಾರಿ, ಅಪರ್ಣ ಹೆಗಡೆ, ಡಿ.ಎಂ.ಭಟ್ ಇವರುಗಳು ತಮ್ಮ ಸ್ವರಚಿತ ಕವನಗಳನ್ನು ಸಾದರಪಡಿಸಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಡಾ. ಶೈಲಜಾ ಮಂಗಳೂರು, ಜಗದೀಶ ಭಂಡಾರಿ ರಚಿಸಿದ ದೇವಿ ಸ್ತೋತ್ರವನ್ನು ಸುಶ್ರಾವ್ಯವಾಗಿ, ಭಕ್ತಿಪೂರ್ವಕವಾಗಿ ಪ್ರಸ್ತುತಪಡಿಸಿದ್ದರು. ಸಾಹಿತ್ಯ ಸಂಚಲನದ ಅಧ್ಯಕ್ಷರು ಮತ್ತು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ತಾಲ್ಲೂಕು ಅಧ್ಯಕ್ಷರಾದ ಕೃಷ್ಣ ಪದಕಿ ಅವರು ಎಲ್ಲರನ್ನೂ ಸ್ವಾಗತಿಸಿ, ಪರಿಚಯಿಸಿ, ಪ್ರಸ್ತಾವಿಕ ನುಡಿಗಳನ್ನಾಡಿದರು.
ಹಿರಿಯ ಕಥೆಗಾರ ಡಿ. ಎಸ್. ನಾಯ್ಕ ಗಿಡಕ್ಕೆ ನೀರೆರೆಯುವುದರ ಮೂಲಕ ವಿದ್ಯುಕ್ತವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕಥೆಗಾರ ಅಳವಡಿಸಿಕೊಳ್ಳಬೇಕಾದ ಕಥನ ಕೌಶಲ್ಯಗಳ ಕುರಿತು ವಿವರಿಸಿ, ವರದಿಗೆ ಮತ್ತು ಕಥೆಗಿರುವ ವ್ಯತ್ಯಾಸವನ್ನು ತಿಳಿಸಿಕೊಟ್ಟರು.
ಡಾ.ಅಜಿತ ಹರೀಶಿ, ಅಪರ್ಣಾ ಹೆಗಡೆ ಮತ್ತು ಜಿ.ಎನ್. ಹೆಗಡೆ ಬಣಗಿಯವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಅಧ್ಯಕ್ಷೀಯ ಭಾಷಣದಲ್ಲಿ ಪ್ರೊ. ಡಿ.ಎಂ.ಭಟ್ ಕುಳವೆ ಎಲ್ಲರನ್ನೂ ಅಭಿನಂದಿಸುತ್ತಾ, ಇರುವಂತೆ ಇರಬೇಕು ಇರಲು ಸಾವಿರ ಚಿಂತೆ ನಮ್ಮ ಜೀವನ ಸಂಜೀವನವಾಗಲು ಮಾನವೀಯ ಗುಣಗಳನ್ನು ಅಳವಡಿಸಿಕೊಂಡು ಸ್ನೇಹಜೀವಿ, ಮಾನವ ಪ್ರೇಮಿಯಾಗಿ, ವಿಶ್ವ ಬಂಧುಗಳಾಗಿ, ಸಾಧಕರಾಗಿ ಮನುಜ ಮತದ ಕಡೆಗೆ ಒಲವನ್ನಿರಿಸಿಕೊಂಡು ಸರ್ವಜನ ಸುಖಾಯ ಸರ್ವಜನ ಹಿತಾಯ ಎಂಬ ಘೋಷ ವಾಕ್ಯದೊಂದಿಗೆ ಸಮಾಜಮುಖಿ ಸಾಹಿತ್ಯ ಕೃಷಿಯನ್ನು ಮಾಡಬೇಕು ಎಂದರು.
ಹಿರಿಯ ಸಾಹಿತಿ ಮನೋಹರ ಮಲ್ಮನೆ ಎಲ್ಲರನ್ನೂ ವಂದಿಸಿದರು. ಕವಿಯತ್ರಿ ರೋಹಿಣಿ ಹೆಗಡೆ ಅತ್ಯಂತ ಅಚ್ಚುಕಟ್ಟಾಗಿ ವಿಶ್ಲೇಷಣಾಪೂರ್ಣವಾಗಿ ಕಾರ್ಯಕ್ರಮವನ್ನು ನಿರೂಪಿಸಿದರು.