ಎಲ್ಲೆಡೆ ಅವೈಜ್ಞಾನಿಕ ಕಾಮಗಾರಿ ಆರೋಪ | ಸಂಸದ ಕಾಗೇರಿ, ರೂಪಾಲಿ ಭೇಟಿ, ಸಾಂತ್ವನ
ಕಾರವಾರ: ಕಳೆದೊಂದು ದಶಕದಲ್ಲಿ ಕಂಡು ಕೇಳರಿಯದ ಭೂಕುಸಿತಕ್ಕೆ ಉತ್ತರ ಕನ್ನಡ ಜಿಲ್ಲೆ ತತ್ತರಿಸಿದೆ. ಹಲವು ಕಡೆ ಭೂಕುಸಿತ ಮುಖ್ಯವಾಗಿ ಹಾನಿಯೆಸಗಿದೆ. ಇಂದು ಒಂದೇ ಕಡೆ ಭೂಕುಸಿತ ಉಂಟಾಗಿ 7ಕ್ಕೂ ಅಧಿಕ ಮಂದಿ ಸಾವನ್ನಪಿದ್ದಾರೆ. ಇದುವರೆಗೂ ನಾನಾ ಕಡೆ ಭೂಕುಸಿತದಿಂದ ಮೃತಪಟ್ಟವರ ಸಂಖ್ಯೆ 11 ದಾಟಿದೆ ಎನ್ನಲಾಗಿದೆ. ಜಿಲ್ಲೆಯ ನಾನಾ ಕಡೆ ನದಿಗಳು ಉಕ್ಕೇರಿ ಹರಿದು ಆಸ್ತಿಪಾಸ್ತಿ ಹಾನಿಯಾಗಿದೆ, ರಸ್ತೆಗಳು ಮುಳುಗಿವೆ. ಜನ ತತ್ತರಿಸಿಹೋಗಿದ್ದು, ಪರಿಹಾರ ಶಿಬಿರಗಳಲ್ಲೂ ನೂರಾರು ಮಂದಿ ಆಶ್ರಯ ಪಡೆದಿದ್ದಾರೆ.
ಭಾರಿ ಮಳೆಗೆ ರಾಷ್ಟ್ರೀಯ ಹೆದ್ದಾರಿ 66ರ ಶಿರೂರು ಬಳಿ ಭಾರೀ ಗುಡ್ಡಕುಸಿತ ಉಂಟಾಗಿದೆ. ಗುಡ್ಡದ ಮಣ್ಣಿನಡಿ 10ಕ್ಕೂ ಅಧಿಕ ಮಂದಿ ಸಿಲುಕಿರುವ ಶಂಕೆ ಇದ್ದು, ಒಂದೇ ಕುಟುಂಬದ ಐವರು ಸೇರಿ ಹತ್ತಕ್ಕೂ ಅಧಿಕ ಮಂದಿ ಕಣ್ಮರೆಯಾಗಿದ್ದಾರೆ. ಗುಡ್ಡ ಕುಸಿದ ರಭಸಕ್ಕೆ ನದಿಗೆ ಗ್ಯಾಸ್ ಟ್ಯಾಂಕರ್ಗಳು ಕೊಚ್ಚಿ ಹೋಗಿದೆ. ಗುಡ್ಡದ ಕೆಳಗಿದ್ದ ಲಾರಿ, ಮತ್ತೊಂದು ಟ್ಯಾಂಕರ್ ಹಾಗೂ ಚಾಲಕರು ಪಾರಾಗಿದ್ದಾರೆ. ತುರ್ತು ಕಾರ್ಯಾಚರಣೆಗೆ ಪೊಲೀಸರು ಧಾವಿಸಿದ್ದಾರೆ. ಸ್ಥಳದ ಪರಿಸ್ಥಿತಿ ಭೀಕರವಾಗಿದ್ದು, ಹೆದ್ದಾರಿ ಸಂಪೂರ್ಣ ಕತ್ತರಿಸಿಹೋಗಿ ಈ ರಸ್ತೆಯಲ್ಲಿ ವಾಹನ ಸಂಚಾರ ನಿಂತೇ ಹೋಗಿದೆ, ಇದನ್ನು ಸರಿಪಡಿಸಲು ವಾರವಾದರೂ ಬೇಕು ಎಂದು ಕಾರ್ಯಾಚರಣೆ ನಿರತರ ಅಭಿಪ್ರಾಯ. ಎಡೆಬಿಡದೆ ಸುರಿಯುತ್ತಿರುವ ಮಳೆ, ಕಾರ್ಯಾಚರಣೆಯನ್ನು ಇನ್ನಷ್ಟು ಕಷ್ಟಗೊಳಿಸಿದೆ.
ಕಾರವಾರ ತಾಲೂಕಿನ ಕಿನ್ನರ ಗ್ರಾಮದಲ್ಲಿ ಭಾರಿ ಮಳೆಗೆ ಮನೆ ಮೇಲೆ ಗುಡ್ಡ ಬಿದ್ದ ಪರಿಣಾಮ ಗೋಡೆ ಕುಸಿದಿದೆ. ಮಣ್ಣಿನಡಿ ಸಿಲುಕಿದ್ದ ವ್ಯಕ್ತಿಯೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ಕಾರವಾರ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 66 ಜಲಾವೃತವಾದ ಪರಿಣಾಮ ಚಿಕಿತ್ಸೆಗೆ ಹೊರಟಿದ್ದ ಪಾಶ್ವವಾಯು ಪೀಡಿತರೊಬ್ಬರು ರಸ್ತೆಯಲ್ಲೇ ಲಾಕ್ ಆದರು. ಕಾರವಾರ-ಕೈಗಾ ರಸ್ತೆಯ ಮಂದ್ರಾಳಿ ಬಳಿ ರಸ್ತೆಗೆ ಗುಡ್ಡ ಕುಸಿದಿದ್ದು, ಮನೆಗಳಿಗೂ ಹಾನಿಯಾಗಿತ್ತು. ಸದ್ಯ 2 ದಿನ ಕಾರವಾರ-ಕೈಗಾ ರಸ್ತೆ ಸಂಚಾರ ಬಂದ್ ಆಗಿದೆ. ಅನೇಕ ಕಡೆ ಭೂಕುಸಿತದ ಪರಿಣಾಮ ರಸ್ತೆಗಳು ಅಂಚು ಕುಸಿದು ವಾಹನ ಓಡಾಟಕ್ಕೆ ದುಸ್ತರವಾಗಿವೆ. ಹಲವು ಕಡೆ ಸೇತುವೆಗಳ ಮೇಲೆ ನೀರು ಹರಿಯುತ್ತಿದೆ. ಇನ್ನೂ ಹಲವು ಕಡೆ ತೋಟಗಳು ಮುಳುಗಡೆಯಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಭೂಕುಸಿತಕ್ಕೆ ಸಾವು, ರಸ್ತೆಗಳೇ ಮಾಯ, ತೋಟ ಗದ್ದೆ ಮುಳುಗಡೆ:
ಉತ್ತರ ಕನ್ನಡ ಜಿಲ್ಲೆ ಕಳೆದ ಒಂದು ವಾರದ ಮಳೆಗೆ ತಲ್ಲಣಿಸಿದೆ. ಭೂಕುಸಿತದಿಂದ ಹತ್ತಾರು ಸಾವುಗಳು, ನದಿಗಳು ಉಕ್ಕೇರಿ ಸೇತುವೆ- ರಸ್ತೆ ಮುಳುಗಡೆ, ಆಸ್ತಿಪಾಸ್ತಿ ಹಾನಿ, ಶಾಲೆಗಳಿಗೆ ರಜೆ, ಮನೆಗಳಿಗೆ ಹಾನಿಯಾಗಿ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದ ಜನ- ಇದು ಜಿಲ್ಲೆಯ ಚಿತ್ರಣ.
ಶಾಲೆ ಕಾಲೇಜುಗಳಿಗೆ ರಜೆ:
ಕಳೆದೆರಡು ದಿನಗಳಿಂದ ಜಿಲ್ಲೆಯ 10 ತಾಲೂಕುಗಳ ಎಲ್ಲ ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕೆ. ರಜೆ ಘೋಷಿಸಿದ್ದಾರೆ. ಮಳೆಯ ಭೀಕರತೆ ಇನ್ನೂ ಮುಂದುವರಿಯುತ್ತಿದ್ದು, ಗುಡ್ಡಗಾಡು ಪ್ರದೇಶಗಳ ಜನತೆ ಮಕ್ಕಳನ್ನು ಶಾಲೆಗೆ ಕಳಿಸಲು ತಾವೇ ಅಂಜುತ್ತಿದ್ದಾರೆ. ಹೆಚ್ಚಿನ ಕಡೆ ಹೊಳೆ ಹಳ್ಳಗಳನ್ನು ದಾಟಿಕೊಂಡು ಮಕ್ಕಳು ಬರಬೇಕಿದ್ದು, ಸೇತುವೆಗಳು ಇಲ್ಲದ ಕಡೆಯಲ್ಲಿ ರಿಸ್ಕ್ ತೆಗೆದುಕೊಳ್ಳಲು ಮಕ್ಕಳ ಪೋಷಕರು ಮುಂದಾಗುತ್ತಿಲ್ಲ.
ರೆಡ್ ಅಲರ್ಟ್
ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜಿಲ್ಲೆಯಲ್ಲಿ ಜುಲೈ 18ರ ವರೆಗೆ ರೆಡ್ ಅಲರ್ಟ್ ಘೋಷಣೆಯಾಗಿದೆ. ಈ ಅವಧಿಯಲ್ಲಿ ಪ್ರಾಕೃತಿಕ ವಿಕೋಪದಿಂದ ಯಾವುದೇ ರೀತಿಯ ಸಮಸ್ಯೆಯಾಗದಂತೆ ಜಿಲ್ಲೆಯ ಸಾರ್ವಜನಿಕರ ರಕ್ಷಣೆಗಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ 24×7 ಕಾರ್ಯ ನಿರ್ವಹಿಸುವ ತುರ್ತು ಕಾರ್ಯಾಚರಣೆ ಕೇಂದ್ರವನ್ನು ತೆರೆಯಲಾಗಿದೆ. ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಮಳೆಯಿಂದಾಗಿ 2 ಮನೆಗಳು ಸಂಪೂರ್ಣ ನಾಶ, 2 ಮನೆಗಳಿಗೆ ತೀವ್ರ ಹಾನಿ ಮತ್ತು 18 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಕಾರವಾರದಲ್ಲಿ 2, ಕುಮಟಾದಲ್ಲಿ 1 ಹಾಗೂ ಹೊನ್ನಾವರದಲ್ಲಿ 2 ಸೇರಿದಂತೆ ಒಟ್ಟು 5 ಕಾಳಜಿ ಕೇಂದ್ರಗಳನ್ನು ತೆರೆದಿದ್ದು ಒಟ್ಟು 93 ಜನರಿಗೆ ಆಶ್ರಯ ಒದಗಿಸಿ ಅಗತ್ಯ ಉಟೋಪಚಾರ ಮತ್ತು ವೈದ್ಯಕೀಯ ನೆರವು ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.