ಹಾಳಾದ ರಸ್ತೆಯಲ್ಲಿ ಸಾಗುವುದೇ ಸವಾಲು: ದುರಸ್ತಿಗೆ ಆಗ್ರಹ
ಯಲ್ಲಾಪುರ: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣಗಳಲ್ಲೊಂದಾದ ಜೇನುಕಲ್ಲುಗುಡ್ಡ ಹಚ್ಚ ಹಸಿರುಮಯವಾಗಿ ಪ್ರವಾಸಿಗರನ್ನು ಸೆಳೆಯುತ್ತಿದೆ. ಆದರೆ ಜೇನುಕಲ್ಲುಗುಡ್ಡ ರಸ್ತೆ ಮಾತ್ರ ಪ್ರವಾಸಿಗರಿಗೆ ನರಕ ದರ್ಶನವನ್ನೇ ಮಾಡಿಸುವಂತಿದೆ.
ಹೆಬ್ಬಾರಮನೆ ಕ್ರಾಸ್‌ನಿಂದ ಜೇನುಕಲ್ಲುಗುಡ್ಡದವರೆಗಿನ 2.5 ಕಿಮೀ ರಸ್ತೆ ಸಂಪೂರ್ಣ ರಾಡಿಯಾಗಿದ್ದು, ವಾಹನಗಳ ಸಂಚಾರ ಕಷ್ಟವಾಗಿದೆ. ರಾಡಿ ಮಣ್ಣಿನಲ್ಲಿ ಹೂತು ಬೀಳುತ್ತ, ಏಳುತ್ತ ವಾಹನಗಳು ಸಾಗಬೇಕಾದ ಸ್ಥಿತಿಯಿದೆ. 3-4 ಕಡೆಗಳಲ್ಲಿ ದೊಡ್ಡ ಹೊಂಡಗಳಿದ್ದು, ಮಳೆಯ ನೀರು ತುಂಬಿ ಕೆರೆಯಂತೆ ಕಾಣುತ್ತದೆ. ದ್ವಿಚಕ್ರ ವಾಹನಗಳು, ಕಾರ್, ಜೀಪ್‌ನಂತಹ ಲಘು ವಾಹನಗಳು ಹಾಗೋ ಹೀಗೋ ಕಷ್ಟಪಟ್ಟು ಸಾಗಿದರೂ, ದೊಡ್ಡ ವಾಹನಗಳು ಮಾತ್ರ ಹೋಗಲು ಸಾಧ್ಯವೇ ಇಲ್ಲ. ಬಸ್ ನಂತರ ದೊಡ್ಡ ವಾಹನಗಳಲ್ಲಿ ಬಂದರೆ ಹೆಬ್ಬಾರಮನೆ ಕ್ರಾಸ್ ಬಳಿಯೇ ವಾಹನ ನಿಲ್ಲಿಸಿ, ಮುಂದಿನ 2.5 ಕಿಮೀ ನಟರಾಜ ಸರ್ವಿಸ್ ಅನಿವಾರ್ಯ.
ಜೇನುಕಲ್ಲುಗುಡ್ಡದಲ್ಲಿ ಯಾವುದೇ ಮೂಲಭೂತ ಸೌಕರ್ಯ ಇರಲಿಲ್ಲ. ಕಳೆದ ವರ್ಷ ನೀರಿನ ವ್ಯವಸ್ಥೆ ಮಾಡಲಾಗಿದೆ. ಶೌಚಗೃಹ ನಿರ್ಮಿಸಲಾಗಿದೆ. ಪ್ರವಾಸಿಗರ ಸುರಕ್ಷತೆಗೆ ರಕ್ಷಣಾ ಬೇಲಿ, ಆಸನಗಳು ಸೇರಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಆದರೆ ರಸ್ತೆ ಮಾತ್ರ ವರ್ಷದಿಂದ ವರ್ಷಕ್ಕೆ ಹಾಳಾಗುತ್ತಲೇ ಇದ್ದು, ಅದರ ದುರಸ್ತಿಗೆ ಯಾವುದೇ ಕ್ರಮ ಆಗಿಲ್ಲ. ಪ್ರತಿನಿತ್ಯ ರಾಜ್ಯದ ವಿವಿಧೆಡೆಯಿಂದ ಇಲ್ಲಿಗೆ ಬರುವ ನೂರಾರು ಪ್ರವಾಸಿಗರು ಈ ಅವ್ಯವಸ್ಥೆಯನ್ನು ಶಪಿಸುತ್ತ ಸಾಗುವಂತಾಗಿದೆ.
ಮಾಗೋಡ ಕಾಲೋನಿಯಿಂದ ಹೆಬ್ಬಾರಮನೆವರೆಗೆ ಕೆಪಿಸಿಯವರು ಮಾಡಿದ ಕೂಡುರಸ್ತೆ ಹದಗೆಟ್ಟಿದ್ದು, ಅದರ ದುರಸ್ತಿಗೆ ಸ್ಥಳೀಯರು ಆಗ್ರಹಿಸಿದ್ದಾರೆ. ಜೇನುಕಲ್ಲುಗುಡ್ಡಕ್ಕೆ ಹೋಗಲು ಹತ್ತಿರದ ರಸ್ತೆಯೂ ಇದಾಗಿದ್ದು, ಸ್ಥಳೀಯರ ಓಡಾಟಕ್ಕೂ ಅನುಕೂಲವಾಗಲಿದೆ.
ನಂದೊಳ್ಳಿಯಿಂದ ಹೆಬ್ಬಾರಮನೆವರೆಗೆ ಮಾಗೋಡ ರಸ್ತೆ ದುರಸ್ತಿಯಾಗಿದೆ. ಇದರಿಂದ ಪ್ರವಾಸಿಗರು ಅತಿವೇಗದಿಂದ ವಾಹನ ಚಲಾಯಿಸುತ್ತಾರೆ. ತಿರುವುಗಳಲ್ಲಿ ಅಪಘಾತವಾಗುವ ಸಾಧ್ಯತೆಯಿದೆ. ತಿರುವುಗಳಲ್ಲಿ ಜಾಗೃತಿ ಫಲಕ ಅಳವಡಿಸಬೇಕಾಗಿದೆ. ಹೆಬ್ಬಾರಮನೆಯಿಂದ ಜೇನುಕಲ್ಲುಗುಡ್ಡದವರೆಗಿನ ರಸ್ತೆ, ಮಾಗೋಡ ಕಾಲೋನಿಯಿಂದ ಹೆಬ್ಬಾರಮನೆವರೆಗಿನ ಕೂಡು ರಸ್ತೆಯೂ ಶೀಘ್ರ ದುರಸ್ತಿ ಆಗಬೇಕು ಎಂದು ಗ್ರಾಮಸ್ಥ ನಾರಾಯಣ ಭಟ್ಟ ದೇವದಮನೆ ಒತ್ತಾಯಿಸಿದ್ದಾರೆ.