ಶಿರಸಿ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಪ್ರತಿ ವರ್ಷ ಕೊಡಮಾಡುವ ‘ಮಾಧ್ಯಮ ಶ್ರೀ’ ಪ್ರಶಸ್ತಿಯು ಈ ಬಾರಿ ಹಿರಿಯ ಪತ್ರಕರ್ತ ರಾಘವೇಂದ್ರ ಬೆಟ್ಟಕೊಪ್ಪರಿಗೆ ಒಲಿದಿದೆ.
ಮಂಗಳವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ಸಂಘದ ಅಧ್ಯಕ್ಷ ಸಂದೇಶ ಭಟ್ಟ ಬೆಳಖಂಡ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಒಕ್ಕೊರಲಿನಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ.
ಕಳೆದ 23 ವರ್ಷದಿಂದ ನಿರಂತರ ಪತ್ರಿಕೋದ್ಯಮದಲ್ಲಿ ಉಪ ಸಂಪಾದಕ, ವರದಿಗಾರನಾಗಿ ಸೇವೆ ಸಲ್ಲಿಸುತ್ತಿರುವ ರಾಘವೇಂದ್ರ ಬೆಟ್ಟಕೊಪ್ಪ 1995-96ರ ಹೈಸ್ಕೂಲ್ ವಿದ್ಯಾರ್ಥಿ ಜೀವನದ ವೇಳೆಗೆ ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ನುಡಿಚಿತ್ರ ಬರೆದು ಗಮನ ಸೆಳೆದಿದ್ದರು. 2001ರಿಂದ ವಿಜಯ ಕರ್ನಾಟಕ, ಈ ಟಿವಿ, ಕನ್ನಡ ಜನಾಂತರಂಗ, ಉಷಾಕಿರಣದಲ್ಲಿ ಕೆಲಸ ನಿರ್ವಹಿಸಿದ್ದ ಬೆಟ್ಟಕೊಪ್ಪ ಕಳೆದ 17 ವರ್ಷಗಳಿಂದ ಉದಯವಾಣಿ ವರದಿಗಾರರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸಾಂಸ್ಕೃತಿಕ, ಸಾಹಿತ್ಯ, ಕೃಷಿ, ಗ್ರಾಮೀಣಾಭಿವೃದ್ದಿ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಅವರು ಈಗಾಗಲೇ ಮೂರು ಕೃತಿಗಳನ್ನೂ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ್ದಾರೆ. ಇವರ ಬರಹಗಳಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ರಾಜ್ಯ ಮಟ್ಟದ ಅತ್ಯುತ್ತಮ ನುಡಿಚಿತ್ರ ಪ್ರಶಸ್ತಿ, ಜಿಲ್ಲಾ ಪತ್ರಿಕಾ ಸಂಘ ನೀಡುವ ಅಜ್ಜೀಬಳ ಹೆಗಡೆ ಅವರ ಹೆಸರಿನಲ್ಲಿ ನೀಡುವ ಪ್ರಶಸ್ತಿ ಪ್ರಕಟಗೊಂಡಿದೆ ಎಂದು ಸಂಘದ ಕಾರ್ಯದರ್ಶಿ ಕೃಷ್ಣಮೂರ್ತಿ ಕೆರೆಗದ್ದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಮಾಧ್ಯಮ ಶ್ರೀ’ ಪ್ರಶಸ್ತಿಗೆ ಆಯ್ಕೆಯಾದ ರಾಘವೇಂದ್ರ ಬೆಟ್ಟಕೊಪ್ಪ ಇವರಿಗೆ ‘e – ಉತ್ತರ ಕನ್ನಡ’ ವತಿಯಿಂದ ಹಾರ್ದಿಕ ಅಭಿನಂದನೆಗಳು.