ಯಲ್ಲಾಪುರ: ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಸಾಮಾನ್ಯ ಜ್ಞಾನ, ಬದುಕುವ ಕಲೆಯನ್ನೂ ರೂಢಿಸಿಕೊಳ್ಳಬೇಕು ಎಂದು ಕಂಚನಳ್ಳಿಯ ಜನಪ್ರಿಯ ಟ್ರಸ್ಟ್ ಅಧ್ಯಕ್ಷ ಮಹೇಶ ಭಟ್ಟ ಹೇಳಿದರು.
ಅವರು ತಾಲೂಕಿನ ನಂದೊಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಜನಪ್ರಿಯ ಟ್ರಸ್ಟ್ನ ದಶಮಾನೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸಿ ಮಾತನಾಡಿದರು. ಗುರುಗಳನ್ನು ಗೌರವಿಸುವ, ಅವರ ಅನುಗ್ರಹ ಪಡೆಯುವ ಪ್ರತಿಯೊಬ್ಬನೂ ಸಾಧಕನಾಗಲು ಸಾಧ್ಯ. ನಮ್ಮ ಸಂಪ್ರದಾಯ, ಆಚರಣೆಗಳನ್ನಹ ತಾತ್ಸಾರದಿಂದ ನೋಡದೇ, ಅವುಗಳನ್ನು ಆಚರಿಸಿಕೊಂಡು ಹೋಗಬೇಕು ಎಂದು ಹೇಳಿದರು.
ಎಸ್.ಡಿ.ಎಂ.ಸಿ ಅಧ್ಯಕ್ಷ ಬಾಲಚಂದ್ರ ಭಟ್ಟ ಬಾಲೀಗದ್ದೆ ಅಧ್ಯಕ್ಷತೆ ವಹಿಸಿ ಮಾತನಾಡಿ, ನೋಟ್ ಬುಕ್ನ್ನು ಮಕ್ಕಳು ಶೈಕ್ಷಣಿಕ ವಿಕಾಸಕ್ಕೆ ಬಳಸಿಕೊಳ್ಳಬೇಕು. ಆಗ ಮಾತ್ರ ಅದನ್ನು ಕೊಟ್ಟವರಿಗೆ ಸಾರ್ಥಕತೆಯ ಭಾವ ತರುತ್ತದೆ ಎಂದರು.
ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಸ್ನೇಹಾ ಭಟ್ಟ, ಮಾಜಿ ಅಧ್ಯಕ್ಷ ಶಿವರಾಮ ಮಡಿವಾಳ, ಪತ್ರಕರ್ತ ಶ್ರೀಧರ ಅಣಲಗಾರ ಇದ್ದರು. ಶಿಕ್ಷಕರಾದ ನಿತೀಶ ತೊರ್ಕೆ ಸ್ವಾಗತಿಸಿ, ನಿರ್ವಹಿಸಿದರು. ದಾಮೋದರ ಗೌಡ ವಂದಿಸಿದರು.