ಸಿದ್ದಾಪುರ: ಶ್ರೀ ಮಹಾಸತಿ ದೇವಸ್ಥಾನ ಮುಟ್ಟಾ ಗುಂಡಬಾಳ ಇವರ ಮೊಕ್ತೇಸರವಾಗಿ ಕಾರ್ಯ ನಿರ್ವಹಿಸುತ್ತಿದ್ದ ಬಾಳಗೋಡ ತಿಮ್ಮಣ್ಣ ಮಹಾಬಲೇಶ್ವರ ಹೆಗಡೆ ಅವರಿಗೆ ಬಾಳೇಸರ ಮಾ.ಮಾ ಹೆಗಡೆ ಅವರ ಪುಣ್ಯತಿಥಿಯಂದು ಸನ್ಮಾನ ಕಾರ್ಯಕ್ರಮ ನೆರವೇರಿತು.
ಅಧ್ಯಕ್ಷತೆಯನ್ನು ಇಟಗಿ ಶ್ರೀ ರಾಮೇಶ್ವರ ದೇವಸ್ಥಾನದ ಆಡಳಿತ ಸಮಿತಿ ಮಾಜಿ ಅಧ್ಯಕ್ಷ ಆರ್.ವಿ. ಹೆಗಡೆ ಕೆಳಗಿನ ಮನೆ ವಹಿಸಿದ್ದರು. ತಿಮ್ಮಣ್ಣ ಹೆಗಡೆ ತಮ್ಮ ತಂದೆ ಮಹಾಬಲೇಶ್ವರ ಹೆಗಡೆ ಅವರಿಂದ ಬಂದ ಗಿಡ ಮೂಲಿಕೆ ಔಷಧಿಗಳನ್ನು ಹಲವಾರು ಜನರಿಗೆ ನೀಡಿ ಗುಣಪಡಿಸಿದ್ದಾರೆ. ಉತ್ತಮ ಕೃಷಿಕರು ಎಂದು ಬಣ್ಣಿಸಿ ಅವರ ಸೇವೆಯನ್ನು ಶ್ಲಾಘಿಸಿದರು.
ಮುಖ್ಯ ಅತಿಥಿಯಾಗಿ ಧಾರವಾಡ ಹೈಕೋರ್ಟ ವಕೀಲರಾದ ಎಸ್.ಆರ್.ಹೆಗಡೆ ನೈಗಾರ ಅವರು ಮಾತನಾಡಿ, ಯಾವ ಸದ್ದು ಗದ್ದಲವಿಲ್ಲದೇ ಅನೇಕರು ಸೇವಾ ನಿರತರಾಗಿದ್ದು ಅಂತಹವರನ್ನು ಗುರುತಿಸಿ ಸನ್ಮಾನಿಸುವುದು ಒಳ್ಳೆಯ ಕೆಲಸ ಎಂದರು. ಕೆ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ರಾಘವೇಂದ್ರ ಶಾಸ್ತ್ರಿ ಬಿಳಗಿ ಅತಿಥಿಯಾಗಿ ಮಾತನಾಡಿ ಜೀವನೋತ್ಸಾಹ ಒಳ್ಳೆಯ ಬೆಳವಣಿಗೆ. 88 ವರುಷ ವಯಸ್ಸಿನ ತಿಮ್ಮಣ್ಣ ಹೆಗಡೆ ಅವರ ಉತ್ಸಾಹ, ಜೀವನ ಪ್ರೀತಿ ಕಂಡಾಗ ಸಂತಸ ಎನ್ನಿಸುತ್ತದೆ ಎಂದು ಹೇಳಿ ಅಭಿನಂದಿಸಿದರು.
ಟಿ.ಎಂ.ಎಸ್ ನಿರ್ದೇಶಕ, ಎಂ.ಎನ್.ಹೆಗಡೆ ತಲೆಕೇರಿ, ಕಾವಂಚೂರು ಸೇವಾ ಸಹಕಾರಿ ಸಂಘದ ಅಧ್ಯಕ್ಷ ವಿಜೇತ ಷಣ್ಮುಖ ಗೌಡರ್ ಕಲ್ಲೂರು, ವೇದಮೂರ್ತಿ, ತಿಮ್ಮಪ್ಪ ಭಟ್ಟ ಸಾರಂಗ ಹಾಗೂ ಮಹಾಬಲೇಶ್ವರ ಹೆಗಡೆ ಬಾಳೇಸರ, ಗಣಪತಿ ಹೆಗಡೆ ವರಗದ್ದೆ, ಲೀಲಾವತಿ ಹೆಗಡೆ ಬಾಳಗೋಡ ವೇದಿಕೆಯಲ್ಲಿದ್ದರು.
ತಮಗಿತ್ತ ಸನ್ಮಾನಕ್ಕೆ ತಿಮ್ಮಣ್ಣ ಹೆಗಡೆ ಮಾತನಾಡಿ ಕೃತಜ್ಞತೆ ಹೇಳಿದರು.
ತಿಮ್ಮಪ್ಪ ಭಟ್ಟ ಸಾರಂಗ ವೇದಘೋಷ ನಡೆಸಿ ಕೊಟ್ಟರು. ಟಿ.ಎಂ.ಎಸ್ ಅಧ್ಯಕ್ಷ ಆರ್.ಎಂ ಹೆಗಡೆ ಬಾಳೇಸರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಎಲೆಯ ಮರೆಯ ಕಾಯಿಯಾಗಿ ಅನೇಕರು ಸೇವಾ ನಿರತರಾಗಿದ್ದಾರೆ. ಅಂತಹವರನ್ನು ಸನ್ಮಾನಿಸುವುದು, ಅದರಲ್ಲೂ ತಮ್ಮ ತಂದೆಯವರ ಪುಣ್ಯ ತಿಥಿಯ ಅಂಗವಾಗಿ ಸನ್ಮಾನಿಸುವುದು ಸಂತಸದ ವಿಷಯ ಎಂದು ಹೇಳಿದರು. ನಾರಾಯಣ ಹೆಗಡೆ ಬಾಳೇಸರ ಸನ್ಮಾನ ಪತ್ರ ವಚನಗೈದರು. ಜಿ.ಜಿ. ಹೆಗಡೆ ಬಾಳಗೋಡ ನಿರೂಪಿಸಿ ವಂದಿಸಿದರು.