ಶಿರಸಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರ (ಬೆಂಗಳೂರು) ಸಹಕಾರದಲ್ಲಿ ಯಕ್ಷಚಂದನ (ರಿ) ದಂಟಕಲ್ ಅಡಿಯಲ್ಲಿ ಜು.14ರಂದು ಸಂಜೆ 4.00 ರಿಂದ 7.00 ರವರೆಗೆ ಶಿರಸಿಯ ನೆಮ್ಮದಿ ಕುಟೀರದಲ್ಲಿ ಪಂಚವಟಿ ತಾಳಮದ್ದಲೆ ನಡೆಯಲಿದೆ.
ಅನಂತಮೂರ್ತಿ ಚ್ಯಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಯಕ್ಷಗಾನ ವಿದ್ವಾಂಸ ಡಾ|| ಜಿ.ಎ. ಹೆಗಡೆ ಸೋಂದಾ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತ ಗುರು ಅಡಿ, “ಸಂಪದ ಸಾಲು” ಸಂಪಾದಕ ವೆಂಕಟೇಶ್ ಎನ್. ಸಂಪ ಆಗಮಿಸಲಿದ್ದು 4.15 ರಿಂದ ತಾಳ ಮದ್ದಲೆ ಆರಂಭವಾಗಲಿದೆ.
ಹಿಮ್ಮೇಳದಲ್ಲಿ ಸತೀಶ ಹೆಗಡೆ ದಂಟಕಲ್, ಖ್ಯಾತ ಮದ್ದಲೆ ವಾದಕ ಶಂಕರ ಭಾಗ್ವತ ಯಲ್ಲಾಪುರ, ನಂದನ್ ದಂಟಕಲ್ ಭಾಗಿಯಾಗಿ ರಸದೌತಣ ನೀಡಲಿದ್ದಾರೆ. ಮುಮ್ಮೇಳದಲ್ಲಿ ಶ್ರೀರಾಮನಾಗಿ ಡಾ|| ಜಿ.ಎ. ಹೆಗಡೆ ಸೋಂದಾ, ಮಾಯಾಂಗನೆ ಶೂರ್ಪನಖಿಯಾಗಿ ಶ್ರೀಮತಿ ಗೀತಾ ಹೆಗಡೆ ಬೆಳಸಲಿಗೆ, ಲಕ್ಷ್ಮಣನಾಗಿ ಸುಜಾತಾ ದಂಡಕಲ್, ಸೀತೆಯಾಗಿ ಶ್ರೀಮತಿ ಕಾತ್ಯಾಯಿನಿ ಹೆಗಡೆ ಅತ್ತಿಕೊಪ್ಪ, ಋಷಿಯ ಪಾತ್ರದಲ್ಲಿ ರತ್ನಾ ಹೆಗಡೆ ಅತ್ತಿಕೊಪ್ಪ ಮಿಂಚಲಿದ್ದಾರೆ.ಅನುಭವಿ ಅರ್ಥಧಾರಿಗಳಿಂದ ಶಿರಸಿ ನಗರದಲ್ಲಿ ನಡೆಯುವ ಮಳೆಗಾಲದ ಈ ತಾಳಮದ್ದಲೆಗೆ ಆಸಕ್ತರನ್ನು ಆದರ ಪೂರ್ವಕವಾಗಿ ಯಕ್ಷಚಂದನಾ (ರಿ) ದಂಟಕಲ್ ಮತ್ತು ನೆಮ್ಮದಿ ಬಳಗ ಆಮಂತ್ರಿಸಿದೆ.