ಜೊಯಿಡಾ: ಮಕ್ಕಳು ಅಪೌಷ್ಟಿಕತೆಯಿಂದ ಬಳಲುವುದನ್ನು ತಪ್ಪಿಸಲು ಅವರಿಗೆ ಪೌಷ್ಟಿಕ ಆಹಾರ ನೀಡಿ ಸದೃಢ ಪ್ರಜೆಗಳನ್ನಾಗಿ ರೂಪಿಸಬೇಕೆಂದು ಉತ್ತರ ಕನ್ನಡ ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿಗಳಾದ ವಿನೋದ್ ಅಣ್ವೇಕರ ಹೇಳಿದರು.
ಅವರು ಶುಕ್ರವಾರ ಜೋಯಿಡಾ ತಾಲೂಕ ಆಸ್ಪತ್ರೆಯಲ್ಲಿ ನಡೆದ ಸ್ವಾಮಿ ವಿವೇಕಾನಂದ ಯುತ್ ಮೂವ್‌ಮೆಂಟ್ ಹಾಗೂ ಎಲ್‌ಟಿಇ ಮೈಂಡ್ ಟ್ರೀ ಫೌಂಡೇಶನ್ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಸಮಗ್ರ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಪೌಷ್ಟಿಕ ಮಕ್ಕಳಿಗೆ ಪೌಷ್ಟಿಕ ಆಹಾರದ ಆಹಾರ ಧಾನ್ಯದ ಕಿಟ್ ವಿತರಣೆ ಹಾಗೂ ತಪಾಸಣಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಇಂದಿನ ಮಕ್ಕಳು ನಾಳಿನ ಪ್ರಜೆಗಳಾಗುವುದರಿಂದ ಅವರನ್ನು ಸದೃಢ ಪ್ರಜೆಗಳನ್ನಾಗಿಸಬೇಕು. ಸದೃಢ ಪ್ರಜೆಗಳಿಂದ ಮಾತ್ರ ದೇಶ ಸುಭಿಕ್ಷವಾಗಲು ಸಾಧ್ಯ ಎಂದು ಹೇಳಿದ ಅವರು ಅಭಿವೃದ್ಧಿ ಸರ್ಕಾರದಿಂದ ಮಾತ್ರವಲ್ಲ ಸರ್ಕಾರ ಸಂಘ-ಸಂಸ್ಥೆಗಳು ಹಾಗೂ ಸಮಾಜ ಸೇರಿದಾಗ ಮಾತ್ರ ಅಭಿವೃದ್ಧಿ ವೇಗವಾಗಿ ಆಗಲು ಸಾಧ್ಯ ಎಂದು ಹೇಳುತ್ತಾ ಸ್ವಾಮಿ ವಿವೇಕಾನಂದ ಯುತ್ ಮೂವ್‌ಮೆಂಟ್ ಅವರ ಕಾರ್ಯಕ್ರಮವನ್ನು ತುಂಬು ಮನಸ್ಸಿನಿಂದ ಶ್ಲಾಘಿಸಿದರು.
ಜೋಯಿಡಾ ತಾಲೂಕಾ ಪಂಚಾಯತ್‌ನ ಕಾರ್ಯನಿರ್ವಾಹಕ ಅಧಿಕಾರಿಗಳಾದ ಆನಂದ್ ಬಡಕುಂದ್ರಿ ಸರ್ಕಾರದಿಂದ ಈಗಾಗಲೇ ನಮಗೆ ಜೋಯಿಡಾ ತಾಲೂಕಿನಲ್ಲಿ ಆಗಬೇಕಾದಂತ ಸಾಮಾಜಿಕ ಅಭಿವೃದ್ಧಿಯ ಕುರಿತು ಸೂಚ್ಯಂಕಗಳನ್ನು ನೀಡಿದೆ. ಈ ಒಂದು ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮದಲ್ಲಿ ನಾವು ಸ್ವಾಮಿ ವಿವೇಕಾನಂದ ಯುತ್ ಮೂವ್‌ಮೆಂಟ್ ಅವರ ಜೊತೆಗೆ ಯಾವತ್ತೂ ಇದ್ದು ನಮ್ಮ ಸಹಕಾರವನ್ನು ನೀಡುತ್ತೇವೆ ಎಂದು ಭರವಸೆಯನ್ನು ನೀಡಿದರು. ಹಾಗೆ ಕಾರ್ಯಕ್ರಮದ ಅತಿಥಿಗಳಾದ ಸ್ವಾಮಿ ವಿವೇಕಾನಂದ ಯುತ್ ಮೂವ್‌ಮೆಂಟ್ ಇದರ ಪ್ರತಿನಿಧಿಯಾಗಿ ಮೈಸೂರಿನಿಂದ ಆಗಮಿಸಿದಂತಹ ಡಾಕ್ಟರ್ ಮೋಹನ್ ಸ್ವಾಮಿ ವಿವೇಕಾನಂದ ಯುತ್ ಮೂವ್‌ಮೆಂಟ್ ಸಂಸ್ಥೆಯು ಬೆಳೆದು ಬಂದ ದಾರಿಯನ್ನು ಹಾಗೂ ಮಾಡುತ್ತಿರುವ ಈಗಿನ ಸಮಾಜ ಸೇವೆಯನ್ನು ಕುರಿತು ಪ್ರಸ್ತಾವಿಕವಾಗಿ ಮಾತನಾಡಿದರು. ಹಳಿಯಾಳದ ಮಕ್ಕಳ ತಜ್ಞರಾದ ಮಾದಣ್ಣವರ ವೈದ್ಯರು ಬಂದಂತಹ ಮಕ್ಕಳ ಆರೋಗ್ಯ ತಪಾಸಣೆ ಮಾಡಿ ಅವರಿಗೆ ಔಷಧ ಉಪಚಾರವನ್ನು ಮಾಡಿದರು. ಕಾರ್ಯಕ್ರಮದಲ್ಲಿ ದೆಹಲಿಯಿಂದ ಆಗಮಿಸಿದ ನೀತಿ ಆಯೋಗದ ಪ್ರತಿನಿಧಿಯಾದ ರಿಷಬ್ ಜೈನ್, ತಾಲೂಕ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳಾದ ಆನಂದ್ ಬಡಕುಂದ್ರಿ, ತಾಲೂಕು ಪಂಚಾಯತ್ ಜೇಡ ಸಹಾಯಕ ನಿರ್ದೇಶಕರಾದ ನಜೀರ್ ಸಾಬ್ ಅಕ್ಕಿ, ತಾಲೂಕ ವೈದ್ಯಾಧಿಕಾರಿಗಳಾದ ಶ್ರೀಮತಿ ಸುಜಾತ ಒಕ್ಕಲಿ ಹಾಗೂ ಜೋಯಿಡಾ ತಾಲೂಕ ಆಸ್ಪತ್ರೆ ಆಡಳಿತ ಅಧಿಕಾರಿಗಳಾದ ವಿಜಯ ಕೊಚ್ಚರಗಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಶ್ರೀಮತಿ ಕಲ್ಪನಾ, ಶಿವಂ ನಾಯ್ಕ ತಾಲೂಕಾ ಸಂಯೋಜಕರು ಅಭಿವೃದ್ಧಿ ಆಕಾಂಕ್ಷಿ ಕಾರ್ಯಕ್ರಮ ಜೋಯಿಡಾ, ಮತ್ತು ತಾಲೂಕ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗಳು, ಶಿಕ್ಷಕರು, ಇಲಾಖೆಯ ಸಿಬ್ಬಂದಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿಗಳು ಹಾಗೂ ಅಪೌಷ್ಟಿಕ ಮಕ್ಕಳು ಹಾಗೂ ಅವರ ಪಾಲಕರು ಹಾಗೂ ಇತರೆ ಸಂಘ ಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದರು. ಚಂದ್ರಶೇಖರಯ್ಯ ಯೋಜನಾಧಿಕಾರಿಗಳು ಐವಿಡಿಪಿ ಜೋಯಿಡಾ ತಾಲೂಕು ವಿವೇಕಾನಂದ ಯುತ್ ಮೂವ್‌ಮೆಂಟ್ ಇವರು ಕಾರ್ಯಕ್ರಮವನ್ನು ನಿರ್ವಹಿಸಿದರು.