ಠರಾವು ದಾಖಲೆಕೊಟ್ಟು ಭ್ರಷ್ಟಾಚಾರದ ಆರೋಪ ಸುಳ್ಳೆಂದ ಕಡವೆ | ಎಲ್ಲಿ ಬೇಕಾದರೂ ಪ್ರಮಾಣಕ್ಕೆ ಸಿದ್ಧ ಎಂದ ರವೀಶ ಹೆಗಡೆ
ಶಿರಸಿ: ನನ್ನ ಆಡಳಿತಾವಧಿಯಲ್ಲಿ ಯಾವ ಭ್ರಷ್ಟಾಚಾರವೂ ಆಗಿಲ್ಲ, ವಯಕ್ತಿಕ ದ್ವೇಷದ ಕಾರಣಕ್ಕೆ ನನ್ನ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ನನ್ನ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ವಿರೋಧಿಗಳಿಂದಾಗಿದೆ. ಆದರೆ ನ್ಯಾಯಾಂಗದಲ್ಲಿ ನಮಗೆ ವಿಶ್ವಾಸವಿದ್ದು, ಎಲ್ಲವನ್ನೂ ಎದುರಿಸಿ, ಪರಿಶುದ್ಧರಾಗಿ ನಿಲ್ಲುತ್ತೇವೆ ಎಂದು ಟಿಎಸ್ಎಸ್ ಮಾಜಿ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ವಾಗ್ದಾಳಿ ನಡೆಸಿದರು.
ಅವರು ಸೋಮವಾರ ನಗರದ ಟಿಆರ್ಸಿ ಸಭಾಭವನದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ, ಟಿಎಸ್ಎಸ್ ನ ಹಾಲಿ ಆಡಳಿತ ಮಂಡಳಿಯವರು ನನ್ನ ಹೆಸರನ್ನು ಕೆಡಿಸುವ ದುರುದ್ಧೇಶದಿಂದ ಯಾವುದೇ ಭ್ರಷ್ಟಾಚಾರ ಆಗದೇ ಇದ್ದರೂ ಸಹ, ಪ್ರಕರಣ ದಾಖಲಿಸಿದ್ದರು. ಆಗ ಕೆಲವು ದಿನಗಳ ಕಾಲ ಕೋರ್ಟ್ ಗೆ ರಜೆ ಇದ್ದ ಕಾರಣ ತಮ್ಮೆಲ್ಲರ ಎದುರು ಬರಲು ಸ್ವಲ್ಪ ತಡವಾಯಿತು. ಸುದೀರ್ಘ ಕಾನೂನು ಹೋರಾಟದ ಮೂಲಕ ಇದೀಗ ಎಲ್ಲ ಪ್ರಕರಣಗಳಿಗೆ ಜಾಮೀನು ದೊರೆತಿದೆ. ಮತ್ತು ನ್ಯಾಯ ನಮ್ಮ ಜೊತೆಗಿದೆ ಎಂಬ ದೃಢ ವಿಶ್ವಾಸವೂ ನಮಗಿದೆ. ಆ ಕಾರಣಕ್ಕೆ ಜನರೆದುರು ಧೈರ್ಯವಾಗಿ ನಿಲ್ಲುವ ನೈತಿಕತೆ ನಮಗಿದೆ. ನಾವು ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ಕೇವಲ ಸ್ವಾರ್ಥಿಗಳ ರಾಜಕೀಯ ಸ್ವಾರ್ಥ ಮತ್ತು ವಯಕ್ತಿಕ ದ್ವೇಷದ ಕಾರಣಕ್ಕೆ ಪ್ರಕರಣ ದಾಖಲಿಸಲಾಗಿದ್ದು, ನಾವೂ ಸಹ ಕಾನೂನು ಹೋರಾಟಕ್ಕೆ ಸಜ್ಜಾಗಿದ್ದೇವೆ ಎಂದರು.
ಅಧ್ಯಕ್ಷರ ಮಾರ್ಗದರ್ಶನದಲ್ಲಿಯೇ ಕಾರ್ಯಾಧ್ಯಕ್ಷನಾಗಿ ಕಾರ್ಯ ನಿರ್ವಹಣೆ:
ನಾನು ಕಾರ್ಯಾಧ್ಯಕ್ಷನಾಗಿ ಅಧಿಕಾರ ವಹಿಸಿಕೊಳ್ಳುವ ಪೂರ್ವದ ಆಡಳಿತ ಮಂಡಲಿಯ ಸಭೆಯಲ್ಲಿ ರವೀಶ ಹೆಗಡೆಯವರು ಅನಾರೋಗ್ಯ ಕಾರಣದಿಂದ ವಿಶೇಷ ನಿವೃತ್ತಿ ಕೋರಿಕೊಂಡಂತೆ ಮಂಜೂರಿ ನೀಡಲಾಗಿತ್ತು. ಆದರೆ ಅಧ್ಯಕ್ಷರಾದ ದಿ. ಶಾಂತಾರಾಮ ಹೆಗಡೆ ಶೀಗೇಹಳ್ಳಿಯವರು ನನ್ನನ್ನು ಕರೆದು ಚರ್ಚಿಸಿ, ಆರಂಭಿಕ ಹಂತದಲ್ಲಿರುವ ಮತ್ತು ಅನುಷ್ಠಾನಗೊಳ್ಳಬೇಕಿರುವ ಹಲವು ಯೋಜನೆಗಳ ಸುಗಮ ಅನುಷ್ಠಾನ ಮತ್ತು ಸಂಘದ ಅಭಿವೃದ್ಧಿ ದೃಷ್ಟಿಯಿಂದ ರವೀಶ ಹೆಗಡೆಯವರನ್ನು ಸಂಘದ ಪ್ರಧಾನ ವ್ಯವಸ್ಥಾಪಕ ಹುದ್ದೆಯಲ್ಲಿ ಮುಂದುವರೆಸಲು ಅಧ್ಯಕ್ಷರೇ ಸೂಚಿಸಿದಂತೆ ಅವರ ಸೇವಾ ಅವಧಿ ಪೂರ್ಣಗೊಳ್ಳುವವರೆಗೂ ಪ್ರಧಾನ ವ್ಯವಸ್ಥಾಪಕ ಹುದ್ದೆಯಲ್ಲಿ ಮುಂದುವರೆಯುವಂತೆ ಸರ್ವ ಸದಸ್ಯರೂ ಒಪ್ಪಿ ಸರ್ವಾನುಮತದಿಂದ ನಿರ್ಣಯಿಸಲಾಗಿತ್ತು.
ಅಪಪ್ರಚಾರ, ಸುಳ್ಳು ಆಪಾದನೆ ಸಾಕಾಗದು ಎಂದು ನಮ್ಮ ಮೇಲೆ ಐಟಿ ದಾಳಿ ಸಹ ನಡೆಸಿದರು. ಆದರೆ ಇದರಿಂದ ನಮಗೆ ಒಳ್ಳೇಯದೇ ಆಯಿತು. ಇವರು ಯಾವ ಆರೋಪ ಮಾಡುತ್ತಿದ್ದರೋ, ಅದಕ್ಕೆ ಐಟಿಯವರು ಬರಿಗೈಲಿ ಹಿಂದಿರುಗಿರುವುದೇ ಸಾಕ್ಷಿಯಾಗಿದೆ. ನಮ್ಮ ಮೇಲೆ ದಾಖಲಿಸಿರುವ ಪ್ರಕರಣಕ್ಕೆ ಸದ್ಯದಲ್ಲಿಯೇ ಮತ್ತೆ ಉತ್ತರ ಕೊಡಲಿದ್ದೇನೆ ಎಂದರು.
ಟಿಎಸ್ಎಸ್ ಮಾಜಿ ಜನರಲ್ ಮ್ಯಾನೇಜರ್ ರವೀಶ ಹೆಗಡೆ ಮಾತನಾಡಿ, ಮೂರು ಕೋಟಯಿದ್ದ ಸಂಸ್ಥೆಯ ಲಾಭ 22 ಕೋಟಿ ಮಾಡಲಾಗಿದೆ. 75 ಕೋಟಿಗಳಷ್ಟಿದ್ದ ಸಂಸ್ಥೆಯ ಸ್ಥಿರಾಸ್ತಿ 350 ಕೋಟಿಗಳಷ್ಟಾಗಿದೆ. ಇದ್ಯಾವುದೂ ಯಾರೂ ಕಿಸೆಯಲ್ಲಿ ಹಾಕಿಕೊಂಡು ಹೋಗುವಂಥದ್ದಲ್ಲ. ನಮ್ಮ ಅವಧಿಯಲ್ಲಿ ಯಾವುದೇ ರೈತರಿಗೆ ತೊಂದರೆ ಮಾಡಿಲ್ಲ. ನಮ್ಮ ಕೈಲಾದ ಉಪಕಾರವನ್ನು ಮಾಡಿದ್ದೇವೆಯೇ ಹೊರತು ಅಪಕಾರವನ್ನಲ್ಲ. ವಿಶೇಷವಾಗಿ ಎಲ್ಲ ವಿಭಾಗದಲ್ಲಿಯೂ ಸಂಸ್ಥೆಯನ್ನು ಅಭಿವೃದ್ಧಿ ಮಾಡಲಾಗಿತ್ತು ಎಂದರು. ಹಾಲಿ ಆಡಳಿತ ಮಂಡಳಿಯವರು ಸುಮಾರು 75-80 ಏಜೆಂಟರ್ ಬಳಿ ನನ್ನ ಬಗ್ಗೆ ವಿಚಾರಿಸಿದ್ದಾರೆ. ಆದರೆ ಅವರಿಗೆ ಯಾವುದೇ ಅವ್ಯವಹಾರ, ಕಮಿಷನ್ ವ್ಯವಹಾರದ ಮಾಹಿತಿ ಸಿಗಲಿಲ್ಲ. ಸುಮ್ಮನೇ ಆರೋಪ ಮಾಡಿದ್ದಷ್ಟೇ ಆಯಿತು ಎಂದರು.
ಈ ವೇಳೆ ದಿ. ಶ್ರೀಪಾದ ಹೆಗಡೆ ಕಡವೆಯವರ ಪುತ್ರಿ ಪಾರ್ವತಿ ಹೆಗಡೆ, ಟಿಎಸ್ಎಸ್ ಶೇರು ಸದಸ್ಯ ಪ್ರಶಾಂತ ಕಲ್ಲಗದ್ದೆ ಇದ್ದರು.
ಸದಸ್ಯರು ಬಯಸಿದರೆ ಯಾವ ದೇವರೆದುರು ನಿಂತಾದರೂ ಪ್ರಮಾಣ ಮಾಡಲು ಸಿದ್ಧ:
ನಮ್ಮ ಅವಧಿಯಲ್ಲಿ ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ಸದಸ್ಯರು ಬಯಸಿದರೆ ಯಾವ ದೇವರ ಮುಂದೆ ನಿಂತೂ ಪ್ರಮಾಣ ಮಾಡಲು ನಾವು ಸಿದ್ಧರಿದ್ದೇವೆ. ಸುಮ್ಮನೇ ಅಪಪ್ರಚಾರಕ್ಕೆ ಕಿವಿಗೊಡಬೇಡಿ. ಸತ್ಯ ನಿಮ್ಮ ಎದುರಿಗೆ ಬಂದೇ ಬರುತ್ತದೆ ಎಂದರು.
ಅಭಿವೃದ್ಧಿ ಮಾಡಿದ್ದನ್ನ ಹೇಳಬೇಕೇ ಹೊರತು, ಬಂದ್ ಮಾಡಿದ್ದನ್ನು ಹೇಳಿಕೊಳ್ಳುವುದು ಸಾಧನೆ ಆಗಬಾರದಿತ್ತು. ರೈತ ಸದಸ್ಯರಿಗೆ ತೊಂದರೆ ಮಾಡಿ ನಡೆಸುವ ಅಧಿಕಾರ ಪ್ರಯೋಜನಕ್ಕೆ ಬಾರದು.–ರಾಮಕೃಷ್ಣ ಹೆಗಡೆ ಕಡವೆ, ಟಿಎಸ್ಎಸ್ ನಿಕಟಪೂರ್ವ ಕಾರ್ಯಾಧ್ಯಕ್ಷರು
ರವೀಶ ಹೆಗಡೆಗೆ ವಿಶೇಷ ಸೌಲಭ್ಯ ಸಭೆಗೆ ಅಧ್ಯಕ್ಷರ ಉಪಸ್ಥಿತಿಯಿತ್ತು, ಎಲ್ಲ ನಿರ್ದೇಶಕರ ನಿರ್ಣಯ:
ನಾನು ಕಾರ್ಯಾಧ್ಯಕ್ಷನಾಗುವ ಪೂರ್ವದಲ್ಲಿ ಅಧ್ಯಕ್ಷರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಳ್ಳಲಾದ ತೀರ್ಮಾನದಂತೆ ವಿಶೇಷ ನಿವೃತ್ತಿ ಪ್ರಕ್ರಿಯೆಯಲ್ಲಿ ಹಲವು ಸೌಲಭ್ಯಗಳನ್ನು ನೀಡಲಾಗಿತ್ತು. ಈ ಸೌಲಭ್ಯಗಳ ಭಾಗವಾಗಿ ರವೀಶ ಹೆಗಡೆಯವರ ಹೆಸರಿಗೆ ವರ್ಗಾವಣೆಗೊಂಡಿರುವ ವೋಲ್ವೋ ಕಾರನ್ನು ನಿವೃತ್ತಿ ನಂತರ ಅವರ ಹೆಸರಿಗೆ ವರ್ಗಾವಣೆ ಮಾಡುವ ಕುರಿತು, ಕಾರನ್ನು ಖರೀದಿಸುವ ವೇಳೆಯಲ್ಲಿಯೇ ಅನುಮೋದನೆ ಆಗಿರುವ ಹಿನ್ನಲೆಯಲ್ಲಿ, ಅವರ ಹೆಸರಿನಲ್ಲಿಯೇ ಮುಂದುವರೆಯುವಂತೆ ಅನುಮೋದನೆ ನೀಡಿ ಮತ್ತು ಅವರನ್ನು ಪ್ರಧಾನ ವ್ಯವಸ್ಥಾಪಕ ಹುದ್ದೆಯಲ್ಲಿಯೇ ಮುಂದುವರಿಸಲು ಆಗಿನ ಆಡಳಿತ ಮಂಡಳಿಯು ಅಧ್ಯಕ್ಷರ ಸೂಚನೆಯಂತೆ ಸರ್ವಾನುಮತದಿಂದ ಒಪ್ಪಿಗೆ ನೀಡಿದೆ. ಆದರೆ ಇದಕ್ಕೆ ನಾನೊಬ್ಬನೇ ಕಾರಣ ಎಂದು ಸದಸ್ಯರಿಗೆ ತಪ್ಪು ಕಲ್ಪನೆ ಬರುವಂತೆ ಬಿಂಬಿಸಲಾಗಿದೆ. ಇದು ಅಂದಿನ ಎಲ್ಲ ನಿರ್ದೇಶಕರು ಕೈಗೊಂಡ ನಿರ್ಧಾರವಾಗಿದೆ. ಇದರಲ್ಲಿ ನನ್ನ ಪಾತ್ರವೇನೂ ಇರುವುದಿಲ್ಲ. ಬಹುಕೋಟಿ ಹಗರಣಗಳ ಕುರಿತು ಇಂದಿನ ಆಡಳಿತ ಮಂಡಲಿ ದೂರುತ್ತಿದೆ. ಆದರೆ ಇದು ಹಗರಣವಲ್ಲ. ಈ ಎಲ್ಲ ಪ್ರಕರಣಗಳು ನನ್ನ ಕಾರ್ಯಾಧ್ಯಕ್ಷ ಅವಧಿಗಿಂತ ಮೊದಲೇ ಆಡಳಿತ ಮಂಡಲಿಯ ಸಭೆಯಲ್ಲಿ ಎಲ್ಲ ನಿರ್ದೇಶಕರುಗಳು ಒಪ್ಪಿ ಕೈಗೊಂಡ ನಿರ್ಣಯಗಳಾಗಿವೆ. ನನ್ನ ಕಾರ್ಯಾಧ್ಯಕ್ಷ ಅವಧಿಯದ್ದಲ್ಲ. ಆದರೆ ಜವಾಬ್ದಾರಿಯುತ ಆಡಳಿತ ಸ್ಥಾನದಲ್ಲಿದ್ದು ದೂರುತ್ತಿರುವುದು ಸಂಘದ ಘನತೆಗೆ ಅತ್ಯಂತ ಕಳಂಕ ತರುತ್ತಿದೆ. ಓವರ್ ಫೈನಾನ್ಸ್ ಕುರಿತು ಸಹ ಸಾಕಷ್ಟು ತಪ್ಪು ಕಲ್ಪನೆ ನೀಡಲಾಗಿದೆ. ನನ್ನ ಅವಧಿಯಲ್ಲಿ ಅಗತ್ಯ ಇದ್ದವರಿಗೆ ಮಾತ್ರ ನೀಡಲಾಗಿದೆ ಎಂದರು.
ಕಡವೆ ಕುಟುಂಬದ ವರ್ಚಸ್ಸಿಗೆ ಮಸಿ ಬಳಿಯುವ ಯತ್ನ: ಕಡವೆ ಕುಟುಂಬದ ಕುರಿತು ಮಾನ್ಯ ಸದಸ್ಯರಲ್ಲಿರುವ ಅಭಿಮಾನವನ್ನು ಒಂದಿನಿತು ಕೆಡಿಸಲು ಸಾಧ್ಯವಿಲ್ಲ. ತಮ್ಮ ಸ್ವಾರ್ಥಕ್ಕಾಗಿ ಜನರಿಗೆ ಮೋಸ ಮಾಡುವ ವ್ಯಕ್ತಿತ್ವ ನಮ್ಮದೆಂದಿಗೂ ಅಲ್ಲ. ಜನರ ಕಷ್ಟ ನಿವಾರಣೆಗಾಗಿ ನಮ್ಮ ಕೈಲಾದ ಸಹಕಾರ ಸದಾ ಮಾಡುತ್ತೇವೆ ಎಂದರು.