ಸಿದ್ದಾಪುರ: ತಾಲೂಕಿನ ದಂಟಕಲ್ ಯಕ್ಷಚಂದನ ಸಂಸ್ಥೆಯ ಅಡಿಯಲ್ಲಿ ಜು.6, ಶನಿವಾರ ಯಕ್ಷಗಾನ ರಂಗ ತರಬೇತಿ ತರಗತಿಯ ಉದ್ಘಾಟನೆ ಸಮಾರಂಭ ನಡೆಯಿತು.
ದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಡಾ ಶಶಿಭೂಷಣ ಹೆಗಡೆಯವರು ಮಾತನಾಡಿ, ಯಕ್ಷಗಾನ ಎನ್ನುವುದು ಉತ್ಕೃಷ್ಟ ಕಲೆ. ಅದನ್ನು ಕಲಿಯುವ ಮೂಲಕ ದೈಹಿಕವಾದ ಆರೋಗ್ಯ ವೃದ್ಧಿಸುತ್ತದೆ. ಸಾಮಾಜಿಕವಾದ ಬೌದ್ಧಿಕವಾದ ಬೆಳವಣಿಗೆ ಕೂಡಾ ಸಾಧ್ಯ. ಯಕ್ಷಗಾನ ತರಬೇತಿ ಯಶಸ್ವಿಯಾಗಿ ಮುಂದುವರಿಯಲಿ ಎಂದರು. ಅತಿಥಿಗಳಾಗಿ ಆಗಮಿಸಿದ್ದ ಯಕ್ಷಗಾನದ ಪ್ರಸಿದ್ಧ ಕಲಾವಿದರಾದ ಅಶೋಕ್ ಭಟ್ ಸಿದ್ದಾಪುರ ಮಾತನಾಡಿ ಯಕ್ಷಗಾನದ ರಂಗ ತರಬೇತಿಗಳು ಇಂತಹ ಶಾಲೆಯಲ್ಲಿ ನಡೆಸುವುದು ಅತ್ಯಗತ್ಯ ಸೂಕ್ತ. ಮೊದಲು ಯಕ್ಷಗಾನ ಕಲಿಯಬೇಕೆಂದರೆ ಹಲವಾರು ಮೈಲಿಗಳ ದೂರ ಹೋಗಬೇಕಿತ್ತು. ಈಗ ಹತ್ತಿರದಲ್ಲೇ ತರಗತಿಗಳು ಪ್ರಾರಂಭ ಆಗಿರುವುದರಿಂದ ಮಕ್ಕಳಿಗೆ ಕಲಿಯಲು ಅವಕಾಶವಿದೆ. ಎಲ್ಲರೂ ಇದರ ಪ್ರಯೋಜನ ಪಡೆದುಕೊಳ್ಳಿ ಎಂದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಯಕ್ಷಚಂದನದ ಸಂಚಾಲಕರಾದ ಸತೀಶ ಹೆಗಡೆ ದಂಟಕಲ್ ಹಾಗೂ ಯಕ್ಷಗಾನ ಕಲಾವಿದರೂ ಯಕ್ಷಗಾನ ಶಿಕ್ಷಕರು ಆಗಿರುವ ನರೇಂದ್ರ ಹೆಗಡೆ ಅತ್ತಿಮುರುಡು ಇವರುಗಳು ಕಾರ್ಯಕ್ರಮಕ್ಕೆ ಶುಭ ಕೋರಿದರು. ಯಕ್ಷಚಂದನ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಸುಜಾತಾ ಎಸ್.ಹೆಗಡೆ ದಂಟಕಲ್ ಇವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಯಕ್ಷಗಾನ ಕಲಾವಿದರೂ ಹಾಗೂ ನಾಟಕ ಪಾತ್ರಧಾರಿಗಳೂ ಆಗಿರುವ ಗಣಪತಿ ಹೆಗಡೆ ಗುಂಜಗೋಡು ಇವರು ನಿರ್ವಹಿಸಿದರು. ಯಕ್ಷಗಾನ ಕಲಾವಿದೆ ಹಾಗೂ ರಂಗ ಕಲಾವಿದೆ ಶ್ರೀಮತಿ ಶುಭಾ ರಮೇಶ್ ಭಟ್ ಅವರು ವಂದಿಸಿದರು. ಕುಮಾರ್ ನಿತಿನ ಹೆಗಡೆ ದಂಟಕಲ್ ಅವರು ಮಕ್ಕಳಿಗೆ ಕಲಿಕಾರ್ಥಿಗಳಿಗೆ ಕೈತಾಳ ಹಾಗೂ ನೃತ್ಯದ ಪ್ರಾರಂಭಿಕ ಹೆಜ್ಜೆ ಕಲಿಸುವ ಮೂಲಕ ಯಕ್ಷಗಾನ ರಂಗ ತರಬೇತಿಗೆ ಚಾಲನೆ ನೀಡಿದರು. ಹಲವು ಗಣ್ಯರ ಸಮ್ಮುಖದಲ್ಲಿ ಯಕ್ಷಗಾನ ರಂಗ ತರಬೇತಿ ತರಗತಿಯ ಉದ್ಘಾಟನಾ ಕಾರ್ಯಕ್ರಮ ಸಂಪನ್ನಗೊಂಡಿತು.