ಜನರೊಂದಿಗೆ ಸರಿಯಾಗಿ ಸ್ಪಂದಿಸದ ಹೆಸ್ಕಾಂ ಸೆಕ್ಷನ್ ಆಫೀಸರ್ ವರ್ಗಾವಣೆಗೆ ಆಗ್ರಹ
ಅಂಕೋಲಾ: ನಿರಂತರ ವಿದ್ಯುತ್ ಕಡಿತದಿಂದ ಉಂಟಾಗುತ್ತಿರುವ ಸಮಸ್ಯೆ ಹಾಗು ರಸ್ತೆ ವಿಚಾರಕ್ಕೆ ಸಂಬಂಧಪಟ್ಟಂತೆ ಚರ್ಚಿಸಲು ಶನಿವಾರದಂದು ತಾಲೂಕಿನ ಸುಂಕಸಾಳ ಗ್ರಾ.ಪಂ ದಲ್ಲಿ ಹೆಸ್ಕಾಂ ಹಾಗು ಲೋಕೋಪಯೋಗಿ ಇಲಾಖೆಯ ವಿಶೇಷ ಗ್ರಾಮಸಭೆಯನ್ನು ನಡೆಸಲಾಯಿತು.
ಮೊದಲಿಗೆ ಕೋಟೆಪಾಲ್‌ನಲ್ಲಿ ನಿರ್ಮಿಸಿದ ಅಸಮರ್ಪಕ ರಸ್ತೆ ಕಾಮಗಾರಿಯ ವಿಚಾರವನ್ನು ಕೈಗೆತ್ತಿಕೊಂಡ ಗ್ರಾಮಸ್ಥರು ಇಲಾಖೆಯ ಎಇಇ ಇಸಾಕ್ ಸೈಯದ್ ಅವರನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಹೆಸ್ಕಾಂಗೆ ಸಂಬಂಧಿಸಿದಂತೆ ಜನರು ತಮ್ಮ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಪ್ರಾರಂಭಿಸಿದರು. ಈ ನಡುವೆ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಪ್ರವೀಣ ನಾಯ್ಕ ಮಾತನಾಡುತ್ತಿರುವಾಗ ಮಧ್ಯ ಮೈಕ್ ಕೈಗೆತ್ತಿಕೊಂಡ ಹೆಸ್ಕಾಂ ಸೆಕ್ಷನ್ ಆಫಿಸರ್ ಹರೀಶ ವಿರುದ್ಧ ಜನರು ಕೆಂಡಾಮಂಡಲಗೊಂಡರು. ಜನರೊಂದಿಗೆ ಸರಿಯಾಗಿ ಸ್ಪಂದಿಸದೇ ಉಡಾಫೆ ಉತ್ತರ ಕೊಡುವ ನಿಮ್ಮಂತ ಅಧಿಕಾರಿಗಳಿಂದಲೇ ನಮಗೆ ಸಮಸ್ಯೆ ಆಗುತ್ತಿದೆ. ಕರೆ ಮಾಡಿ ವಿದ್ಯುತ್ ಬಗ್ಗೆ ವಿಚಾರಿಸಿದರೇ ಆಫೀಸಿಗೆ ಬಂದು ಮಾತಾಡಿ ಎಂದು ಸೆಕ್ಷನ್ ಆಫಿಸರ್ ಹೇಳ್ತಾರೆ. ಜನ ಸಾಮಾನ್ಯರು ವಿದ್ಯುತ್ ಸಮಸ್ಯೆ ಬಗ್ಗೆ ಕರೆ ಮಾಡಿದರೆ ಜನರೊಂದಿಗೆ ಉಡಾಫೆಯಾಗಿ ಉತ್ತರಿಸುತ್ತಾರೆ ಎಂದು ವಿಲ್ಸನ್ ಡಿಕೋಸ್ತಾ ಆಕ್ರೋಶ ವ್ಯಕ್ತಪಡಿಸಿದರು.
ಹೆಸ್ಕಾಂ ವಿರುದ್ಧ ಇದೇ ಮೊದಲ ಬಾರಿಗೆ ಗ್ರಾಮಸ್ಥರು ಗ್ರಾಮಸಭೆಯಲ್ಲಿ ಈ ಪರಿ ಮುಗಿಬಿದ್ದಿದ್ದಾರೆ. ವಿದ್ಯುತ್ ಸಮಸ್ಯೆಗಳಿಂದ ಗ್ರಾಮಸ್ಥರು ರೋಸಿಹೋಗಿದ್ದಾರೆ. ನಿನ್ನೆ ನಡೆದ ಗ್ರಾಮಸಭೆಯಲ್ಲಿ ಕೋಲಾಹಲವೇ ಸೃಷ್ಠಿಯಾಯಿತು. ಸ್ಥಳಕ್ಕೆ ದೌಡಾಯಿಸಿದ ಅಂಕೋಲಾ ಪಿಎಸ್ಐ ಸುಹಾಸ್ ಆರ್. ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಹೆಸ್ಕಾಂ ಸೆಕ್ಷನ್ ಆಫೀಸರ್ ನ್ನು ತಕ್ಷಣ ವರ್ಗಾವಣೆ ಮಾಡುವಂತೆ ಗ್ರಾಮಸ್ಥರು ಗ್ರಾ.ಪಂ ಗೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ರಮೀಜಾ ಸೈಯದ್, ಉಪಾಧ್ಯಕ್ಷ ಸದಾನಂದ ನಾಯಕ, ಸದಸ್ಯರಾದ ಚಂದು ನಾಯ್ಕ, ನಾಗರಾಜ ಹೆಗಡೆ, ಪ್ರಭಾವತಿ ನಾಯ್ಕ, ಉಮಾ ಸಿದ್ದಿ ಪಿಡಿಓ ಭೋಗೇಂದ್ರ ನಾಯ್ಕ, ಸಮಸ್ತ ನಾಗರಿಕರು ಇದ್ದರು.