ಯಲ್ಲಾಪುರ: ಮುಂದಿನ ಪೀಳಿಗೆಗೆ ಜ್ಞಾನ ಸಂಪತ್ತನ್ನು ವರ್ಗಾಯಿಸುವ ಕಾರ್ಯವನ್ನು ಪತ್ರಿಕೋದ್ಯಮ ಮಾಡುತ್ತಿದೆ ಎಂದು ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.
ಅವರು ಪಟ್ಟಣದ ಸಂಕಲ್ಪ ಸಂಸ್ಥೆಯ ಮೌನ ಗ್ರಂಥಾಲಯದಲ್ಲಿ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಡಾ. ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್ ವಿದ್ಯಾರ್ಥಿಗಳೊಂದಿಗೆ ಹಮ್ಮಿಕೊಂಡ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ಸಂಸ್ಥೆಗಳನ್ನು ಪ್ರಸಿದ್ಧಿ, ಪ್ರಚಾರಕ್ಕಾಗಿ ಕಟ್ಟುವುದಲ್ಲ, ಸಮಾಜಕ್ಕೆ ಪ್ರಯೋಜನವಾಗುವ ಉದ್ದೇಶ ಹೊಂದಿರಬೇಕು ಎಂದರು.
ಸೋಲು, ಬಡತನ ಶಾಪವಲ್ಲ. ಕೀಳರಿಮೆ, ಆತ್ಮವಿಶ್ವಾಸದ ಕೊರತೆಯೇ ದೊಡ್ಡ ಶಾಪ. ಆತ್ಮಸ್ಥೈರ್ಯ, ಛಲದಿಂದ ಶ್ರಮಿಸಿದರೆ ಎಲ್ಲವನ್ನೂ ಮೀರಿ ಬೆಳೆದು, ಸಾಧಿಸಲು ಸಾಧ್ಯ. ವಿದ್ಯಾರ್ಥಿಗಳಲ್ಲಿ ಓದುವ ಅಭಿರುಚಿ ಬೆಳೆಸಬೇಕು. ಹೆಚ್ಚು ಅಧ್ಯಯನ ಮಾಡಿದಷ್ಟು ಹೆಚ್ಚು ಬೆಳೆಯಬಹುದು ಎಂದರು. ಮೌನ ಗ್ರಂಥಾಲಯದಲ್ಲಿನ ಪುಸ್ತಕ ಸಂಗ್ರಹದ ಕುರಿತು, ಗ್ರಂಥಾಲಯ ತೆರೆಯುವ ಕುರಿತಾದ ಹಿನ್ನೆಲೆಗಳ ಬಗ್ಗೆ ಪ್ರಮೋದ ಹೆಗಡೆ ವಿವರಿಸಿದರು. ವಿದ್ಯಾರ್ಥಿಗಳು ಆಸಕ್ತಿಯಿಂದ ಸಂವಾದದಲ್ಲಿ ಭಾಗವಹಿಸಿದ್ದರು.
ಉಪನ್ಯಾಸಕರಾದ ಬೀರಣ್ಣ ನಾಯಕ ಮೊಗಟಾ, ಸ್ಫೂರ್ತಿ ಹೆಗಡೆ ಇತರರಿದ್ದರು. ಮೀಡಿಯಾ ಸ್ಕೂಲ್ ಪ್ರಾಂಶುಪಾಲ ನಾಗರಾಜ ಇಳೆಗುಂಡಿ ಸ್ವಾಗತಿಸಿದರು. ವಿದ್ಯಾರ್ಥಿ ನಾಗರಾಜ ವಂದಿಸಿದರು.
ಜ್ಞಾನ ಸಂಪತ್ತು ವರ್ಗಾಯಿಸುವ ಕಾರ್ಯ ಪತ್ರಿಕೋದ್ಯಮದ್ದು: ಪ್ರಮೋದ ಹೆಗಡೆ
![](https://euttarakannada.in/wp-content/uploads/2024/07/IMG-20240706-WA0048-730x438.jpg)