ಯಾವುದಕ್ಕೂ ಕ್ಯಾರೇ ಎನ್ನುತ್ತಿಲ್ಲ ಅಂಕೋಲಾ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು
ಅಕ್ಷಯ ಶೆಟ್ಟಿ ರಾಮನಗುಳಿ
ಅಂಕೋಲಾ: ಸುಂಕಸಾಳ ಗ್ರಾ.ಪಂ ವ್ಯಾಪ್ತಿಯ ಕೋಟೆಪಾಲ್‌ಗೆ ತೆರಳುವ ಸಿಮೆಂಟ್ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ಮನಸ್ಸಿಗೆ ಕಂಡಂತೆ ಅವೈಜ್ಞಾನಿಕವಾಗಿ ನಿರ್ಮಿಸಿದ್ದು ವಾಹನಸವಾರರು ನಿತ್ಯವು ಸಂಕಷ್ಟ ಎದುರಿಸುವ ಸ್ಥಿತಿ ನಿರ್ಮಾಣಗೊಂಡಿದೆ ಎಂದು ಸುಂಕಸಾಳ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಮಂಜುನಾಥ ಭಟ್ಟ ಇಲಾಖೆ ಕಾರ್ಯವೈಖರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋಟೆಪಾಲ್‌ಗೆ ತೆರಳುವ ಸಿಮೆಂಟ್ ರಸ್ತೆಯನ್ನು ಕಿರಿದಾಗಿ ನಿರ್ಮಿಸಿದ್ದಾರೆ. ರಸ್ತೆಯ ಎರಡು ಬದಿಗಳಲ್ಲಿ ಮಣ್ಣನ್ನು ಅಗೆದು ಹೊಂಡ ಮಾಡಿದ್ದಾರೆ. ಒಂದು ವಾಹನ ಎದುರಿನಿಂದ ಬರುತ್ತಿದ್ದರೆ ಇನ್ನೊಂದು ವಾಹನ ಪಾಸ್ ಆಗುವುದಿಲ್ಲ. ಸುಮಾರು ಒಂದು ಕಿ.ಮೀ ರಿವರ್ಸ್ ತೆರಳಿ ಮುಂದೆ ಬರುವ ವಾಹನಕ್ಕೆ ದಾರಿ ಬಿಟ್ಟುಕೊಡಬೇಕಾದ ಸ್ಥಿತಿ ಇದೆ.
ರಸ್ತೆಯ ಎರಡು ಬದಿಯಲ್ಲಿ ಸರಿಯಾಗಿ ಮಣ್ಣು ಬರಾವ್ ಮಾಡದೇ ಅಪಾಯಕಾರಿ ಸನ್ನಿವೇಶವನ್ನು ನಿರ್ಮಾಣ ಮಾಡಿದ್ದಾರೆ. ಇದರಿಂದಾಗಿ ವಾಹನವನ್ನು ರಸ್ತೆ ಬಿಟ್ಟು ಕೆಳಗಿಳಿಸಲು ಸಾಧ್ಯವಾಗುತ್ತಿಲ್ಲ. ತರಾತುರಿಯಲ್ಲಿ ಮನಸ್ಸೋ ಇಚ್ಚೆ ಕಾಮಗಾರಿ ಮಾಡಿದ್ದಾರೆ.
ಅವಶ್ಯವಿದ್ದ ಕಡೆ ನೀರು ಹರಿಯಲು ಸೇತುವೆ ನಿರ್ಮಿಸಿಲ್ಲ. ರಾತ್ರಿಹೊತ್ತು ಈ ದಾರಿಯಲ್ಲಿ ಸಂಚರಿಸುವುದು ಅಪಾಯಕಾರಿಯಾಗಿದೆ. ಸುಮಾರು 400 ಕ್ಕೂ ಹೆಚ್ಚು ಮನೆಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಇದಾಗಿದ್ದು ಅಸಮರ್ಪಕ ಕಾಮಗಾರಿಯಿಂದ ನಿತ್ಯವೂ ಜನರು ನರಕಯಾತನೆ ಅನುಭವಿಸುತ್ತಿದ್ದಾರೆ. ಕಾಮಗಾರಿಯ ಬಿಲ್ ಆಗುವ ಪೂರ್ವದಲ್ಲಿ ಕೊನೆಯ ಪಕ್ಷ ಎರಡು ವಾಹನಗಳು ಸರಾಗವಾಗಿ ಚಲಿಸುವಂತೆ ಕಾಮಗಾರಿಯನ್ನು ಸರಿಪಡಿಸಬೇಕು. ಇಲ್ಲದೇ ಹೋದಲ್ಲಿ ಲೋಕೋಪಯೋಗಿ ಇಲಾಖೆಯ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಲು ಸಿದ್ಧ ಎಂದು ಮಂಜುನಾಥ ಭಟ್ಟ ಲೋಕೋಪಯೋಗಿ ಇಲಾಖೆಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ರಮೀಜಾ ಸೈಯದ್, ರಾಘು ಭಟ್ಟ, ಮಾಣಿ ಹೆಗಡೆ, ವಿಲ್ಸನ್ ಡಿಕೋಸ್ತಾ, ಸಂದೀಪ ನಾಯ್ಕ, ವಿನೋದ ಶೆಟ್ಟಿ, ಪ್ರಸನ್ನ ಭಟ್ಟ, ಶಿವಾನಂದ ನಾಯಕ ಮುಂತಾದವರು ಇದ್ದರು.
ಶಾಸಕರು, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಗಮನಹರಿಸುತ್ತಿಲ್ಲ. ಈ ರಸ್ತೆ ಕಾಮಗಾರಿಯ ಕುರಿತು ಸರ್ಕಾರ ಪರಿಶೀಲನೆ ನಡೆಸಬೇಕಿದೆ. ಗ್ರಾ.ಪಂ ಗಾಗಲಿ, ಸ್ಥಳೀಯರಿಗಾಗಲಿ ಮಾಹಿತಿ ನೀಡದೇ ಲೋಕೋಪಯೋಗಿ ಇಲಾಖೆ ಕಾಮಗಾರಿ ಮಾಡಿದೆ. ನಮಗೆ ಎರಡು ವಾಹನ ಸಂಚಾರವಾಗುವ ಯೋಗ್ಯವಾದ ರಸ್ತೆಯನ್ನು ನಿರ್ಮಿಸಿಕೊಡಬೇಕು. ಸುಮ್ಮನೆ ಕೂರುವ ಪ್ರಶ್ನೆಯೇ ಇಲ್ಲ. ಕ್ರಮ ಕೈಗೊಳ್ಳದೇ ಇದ್ದಲ್ಲಿ ರಸ್ತೆ ಕಾಮಗಾರಿಯ ವಿರುದ್ಧ ನ್ಯಾಯಾಲಯಕ್ಕೆ ಹೋಗುತ್ತೇವೆ.
– ಮಂಜುನಾಥ ಭಟ್ಟ (ಮಾಜಿ ಗ್ರಾ.ಪಂ ಉಪಾಧ್ಯಕ್ಷ ಸುಂಕಸಾಳ)