ಹೊನ್ನಾವರ: ತಾಲೂಕಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಖರ್ವಾ ನಾಥಗೇರಿ ಇದರ ಶತಮಾನೋತ್ಸವ ನೆನಪು ‘ಶತಶೃಂಗ’ ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ಜೋಕಾಲಿ,ಜಾರುಬಂಡಿ,ಆಟಿಕೆ ಸಾಮಗ್ರಿಗಳ ಲೋಕಾರ್ಪಣೆ ಕಾರ್ಯಕ್ರಮ ಶನಿವಾರ ನಡೆಯಿತು.
ಖರ್ವಾ ಗ್ರಾಮ ಪಂಚಾಯತ ಅಧ್ಯಕ್ಷ ಶ್ರೀಧರ್ ನಾಯ್ಕ ‘ಶತಶೃಂಗ ‘ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿ, ಶಾಲೆಯ ಶತಮಾನೋತ್ಸವ ಕಾರ್ಯಕ್ರಮ ನಡೆಸಿದಾಗ ಎಲ್ಲಾ ಸಮಾಜ ಬಾಂಧವರು, ಶಿಕ್ಷಣ ಪ್ರೇಮಿಗಳು,ಊರನಾಗರಿಕರು ಸಹಾಯ,ಸಹಕಾರ ನೀಡಿದ್ದರು. ಎಲ್ಲರು ಶ್ರಮಪಟ್ಟು ಹಬ್ಬದಂತೆ ಶತಮಾನೋತ್ಸವ ಆಚರಿಸಿದ್ದರು.ಆ ಒಂದು ಸವಿನೆನಪಿಗಾಗಿ ಇಂದು ಶತಶೃಂಗ ಸ್ಮರಣ ಸಂಚಿಕೆ ಹೊರತರಲಾಗಿದೆ. ಶಾಲೆಯ ವಿಚಾರದಲ್ಲಿ ಯಾವುದೇ ರಾಜಕೀಯವಾಗದಂತೆ ಮುಂದೆಯು ಸಹ ಎಲ್ಲರು ಕೈಜೋಡಿಸಿ ಎಂದು ಕರೆನೀಡಿದರು.
ಜೋಕಾಲಿ,ಜಾರುಬಂಡಿ,ಆಟಿಕೆ ಸಾಮಗ್ರಿಗಳ ಉದ್ಘಾಟಿಸಿದ ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ರಾಮಪ್ಪ ನಾಯ್ಕ ಮಾತನಾಡಿ,ಶಾಲೆಯ ಶಿಕ್ಷಣಪ್ರೇಮಿ ದಿವಂಗತ ದುರ್ಗಪ್ಪ ನಾಯ್ಕರು ಶಾಲೆಯ ಬಗ್ಗೆ ಬಹಳಷ್ಟು ಅಭಿಮಾನ ಹೊಂದಿದ್ದರು.ಅವರ ನೆನಪು ಸದಾ ಇರುತ್ತದೆ ಎಂದು ಶಾಲೆಗೆ ಸ್ಥಳದಾನ ನೀಡಿದ ದೊಡ್ಮನೆ ಕುಟುಂಬದವರ ಕೊಡುಗೆಯನ್ನು ಸಹ ಸ್ಮರಿಸಿದರು.ಅದೇ ರೀತಿ ಎಲ್ಲರು ಶಾಲೆಯ ಬಗ್ಗೆ ಅಭಿಮಾನ ಹೊಂದಬೇಕು.ಶತಮಾನೋತ್ಸವಕ್ಕೆ ಎಲ್ಲರು ದೇಣಿಗೆ ನೀಡಿದ್ದರಿಂದ ಕಾರ್ಯಕ್ರಮವು ಸುಂದರವಾಗಿ ನಡೆಯಿತು. ಇಂದು ಶಾಲೆಗೆ ಆಟಿಕೆ ಪರಿಕರ ತರಲು ಅನುಕೂಲವಾಯಿತು. ವರ್ಷಕ್ಕೊಮ್ಮೆಯಾದರು ಊರಜನರ ಸಹಭಾಗಿತ್ವದಲ್ಲಿ ಶಾಲೆಯಲ್ಲಿ ಕಾರ್ಯಕ್ರಮಗಳು ಆಯೋಜನೆಯಾಗಬೇಕೆಂದು ಅನಿಸಿಕೆ ವ್ಯಕ್ತಪಡಿಸಿದರು.
‘ಶತಶೃಂಗ’ ಸ್ಮರಣ ಸಂಚಿಕೆ ಕುರಿತು ನಿವೃತ್ತ ಬಿಎಸ್ಎನ್ಎಲ್ ನೌಕರರಾದ ಟಿ.ಎಚ್.ಗೌಡ ಮಾತನಾಡಿ,ನಾವು ನಡೆದ ಬಂದ ದಾರಿಯನ್ನು ತಿಳಿದರೆ ಶಾಲೆಯ ಮಹತ್ವ ತಿಳಿಯುತ್ತದೆ ಎನ್ನುವ ದೃಷ್ಟಿಯಿಂದ ಸ್ಮರಣಸಂಚಿಕೆ ರಚನೆಯಾಯಿತು.ಇದು ಅತ್ಯಗತ್ಯವಾಗಿದೆ.ಅಂದು ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗಿತ್ತು. ಇಂದು ಶಾಲೆಗಳು ಹೆಚ್ಚಳವಾಗಿದ್ದು,ಜತೆಗೆ ಆಂಗ್ಲ ಮಾಧ್ಯಮದ ಶಾಲೆಗಳಿಗೆ ಹಂಚಿಹೋಗಿರುವುದರಿಂದ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕ್ಷಿಣಿಸುತ್ತಿದೆ.ಇದರಿಂದ ನಾವು ಎಣಿಸಿದ ಮಟ್ಟಿಗೆ ವಿದ್ಯಾರ್ಥಿಗಳ ಕರೆತರುವಲ್ಲಿ ಅಸಮರ್ಥರಾಗಿದ್ದೇವೆ.ಇರುವಷ್ಟು ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವಲ್ಲಿ ಈ ಶಾಲೆ ಮುಂದುವರೆದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
‘ಶತಶೃಂಗ’ ಸ್ಮರಣ ಸಂಚಿಕೆ ಸಹಸಂಪಾದಕರಾದ ಮೋಹನ್ ನಾಯ್ಕ ಮಾತನಾಡಿ, ಸ್ಮರಣೆ ಸಂಚಿಕೆ ಹೊರತರುವುದೇ ಕಷ್ಟಕರ ಎಂದೆನಿಸಿದ್ದೆವು. ಹಲವಾರು ವಿಘ್ನಗಳು ಎದುರಾದವು. ಆದರೆ ಎಲ್ಲರ ಸಹಾಯ, ಸಹಕಾರದಿಂದ ಇಂದು ಶತಶೃಂಗ ಸ್ಮರಸಂಚಿಕೆ ಪುಸ್ತಕ ಹೊರಬಂದಿದೆ.ಯಾರು ಶಾಶ್ವತರಲ್ಲ.ನಾವು ಮಾಡಿದ ಸೇವೆ ಶಾಶ್ವತ.ಅಚ್ಚಳಿಯದೇ ಉಳಿಯುವಂತಹದ್ದು ಎಂದರು.
ಶಾಲಾ ಮುಖ್ಯೋಪಾಧ್ಯಾಯೆ,ಸ್ಮರಣ ಸಂಚಿಕೆ ಸಂಪಾದಕರಾದ ಸುಧಾ ಭಂಡಾರಿ ಮಾತನಾಡಿ,ಶಾಲಾ ಶತಮಾನೋತ್ಸವದ ನೆನಪಿಗಾಗಿ ಇಂದು ಶತಶೃಂಗ ಬಿಡುಗಡೆಗೊಳಿಸಲಾಗಿದೆ. ಕೃತಿಗಳು,ಪುಸ್ತಕಗಳು ದಾಖಲಿಕರಣವಾಗಿರುತ್ತದೆ.ಅದು ಸಾರ್ವಕಾಲಿಕವಾಗಿರುತ್ತದೆ ಎಂದರು. ನಿವೃತ್ತ ಶಿಕ್ಷಕರಾದ ಸತ್ಯಪ್ಪ ನಾಯ್ಕ ಅಭಿನಂದನಾ ನುಡಿಗಳನ್ನಾಡಿದರು.
ಎಸ್ ಡಿ ಎಮ್ ಸಿ ಅಧ್ಯಕ್ಷ ವೆಂಕಟೇಶ ನಾಯ್ಕ ಮಾತನಾಡಿ,2023ರ ಡಿಸೆಂಬರ್ ನಲ್ಲಿ ನಡೆದ ಶಾಲಾ ಶತಮಾನೋತ್ಸವ ಕಾರ್ಯಕ್ರಮದಲ್ಲಿ ದಾನಿಗಳಿಂದ ಸಂಗ್ರಹವಾದ ಹಣದಲ್ಲಿ ಶತಮಾನೋತ್ಸವ ನಡೆಸಿದ್ದು,ಹೆಚ್ಚುಳಿದ ಹಣದಲ್ಲಿ ಶಾಲಾ ಮಕ್ಕಳಿಗೆ ಅವಶ್ಯಕವಿರುವ ಆಟಿಕೆ ಸಾಮಗ್ರಿ ಶಾಲೆಗೆ ಲಭಿಸಿದೆ. ಸ್ಮರಣ ಸಂಚಿಕೆಗೆ ಸಹಕರಿಸಿದವರು, ಶತಮಾನೋತ್ಸವಕ್ಕೆ ದೇಣಿಗೆ ನೀಡಿದ ದಾನಿಗಳನ್ನು ಸ್ಮರಿಸಿದರು.
ಇದೇ ವೇಳೆ ವಲ್ಕಿಯ ಶಿಕ್ಷಣಪ್ರೇಮಿ ತಬ್ರೇಜ್ ಅವರು ಮುಂದಿನ ವರ್ಷದ ಶಾಲಾ ಕಾರ್ಯಕ್ರಮ ಆಯೋಜನೆಯಾದಲ್ಲಿ ಉಟೋಪಹಾರದ ಖರ್ಚುವೆಚ್ಚ ಭರಿಸುವುದಾಗಿ ಹೇಳಿದರು.
ವೇದಿಕೆಯಲ್ಲಿ ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷ ವಿಶ್ವನಾಥ ಭಟ್, ಗ್ರಾಮ ಪಂಚಾಯತ ಸದಸ್ಯೆ ಶೈನಜಾ,ಶಾಲಾ , ಎಸ್ ಡಿ ಎಮ್ ಸಿ ಉಪಾಧ್ಯಕ್ಷೆ ಚೇತನಾ ನಾಯ್ಕ,ಖರ್ವಾ ವಿಎಸ್ ಎಸ್ ನಿರ್ದೇಶಕ ಗಜಾನನ ನಾಯ್ಕ,ತಬ್ರೇಜ್ ವಲ್ಕಿ,ಸಲೀಂ,ಮುಕ್ತಾರ್ ಮತ್ತಿತರಿದ್ದರು.ಶತಮಾನೋತ್ಸವ ಸಮಿತಿ ಪದಾಧಿಕಾರಿಗಳು,ಶಾಲಾಭಿವೃದ್ಧಿ ಸಮಿತಿ ಮತ್ತು ಶಿಕ್ಷಕ ವೃಂದದವರು ಹಾಜರಿದ್ದರು.