ಹೊನ್ನಾವರ: ತಾಲೂಕಿನ ಮೋಟೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಮೃತಿ ಫೌಂಡೇಶನ್ ವತಿಯಿಂದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಕಲಿಕಾ ಸಾಮಗ್ರಿ ವಿತರಣಾ ಕಾರ್ಯಕ್ರಮ ಶನಿವಾರ ನೆರವೇರಿತು.
ಕಾರ್ಯಕ್ರಮ ಉದ್ಘಾಟಿಸಿದ ಮೋಟೆ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಗಣೇಶ್ ನಾಯ್ಕ ಮಾತನಾಡಿ, ಸ್ಮೃತಿ ಫೌಂಡೇಶನ್ ಕಾರ್ಯ ಶ್ಲಾಘನೀಯ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಮಾಜ ಮುಖಿ ಕಾರ್ಯಕ್ರಮಗಳು ಸ್ಮೃತಿ ಫೌಂಡೇಶನ್ ವತಿಯಿಂದ ನೆರವೇರಲಿ ಎನ್ನುವ ಪ್ರೋತ್ಸಾಹಕ ಮಾತುಗಳನ್ನಾಡಿದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಗಣಪತಿ ಉಪ್ಪಾರ್ ಮಾತನಾಡಿ, ನೀಡಿರುವಂತಹ ಪರಿಕರಗಳನ್ನು ಸದ್ಭಳಕೆ ಮಾಡಿಕೊಂಡು ಉತ್ತಮ ಪ್ರಜೆಗಳಾಗಿ ಹೊರಹೊಮ್ಮಿ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.ಮಕ್ಕಳಿಗೆ ಕೆಲವು ಶಾರೀರಿಕ ಮತ್ತು ಮಾನಸಿಕ ಸ್ವಾಸ್ಥ್ಯಕ್ಕೆ ಸಂಬಂಧಿಸಿದಂತಹ ಚಟುವಟಿಕೆಗಳನ್ನು ಕೈಗೊಂಡರು.
ಎಸ್. ಡಿ. ಎಮ್.ಸಿ ಅಧ್ಯಕ್ಷ ಹನುಮಂತ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸ್. ಡಿ. ಎಮ್.ಸಿ ಉಪಾಧ್ಯಕ್ಷೆ ದೀಪಾ, ಮೋಟೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ವೃಂದ, ಎಸ್. ಡಿ. ಎಮ್.ಸಿ ಸದಸ್ಯರು, ಸ್ಮೃತಿ ಫೌಂಡೇಶನ್ ಸದಸ್ಯರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.