ಹೊನ್ನಾವರ: ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಹಾಗೂ ತಾಲೂಕು ಘಟಕಗಳಿಂದ ಹೊನ್ನಾವರ ತಾಲೂಕು ಮಟ್ಟದಲ್ಲಿ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ಶೇ. ೧೦೦ ರಷ್ಟು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದಿಸುವ ಕಾರ್ಯಕ್ರಮ ಪಟ್ಟಣದ ನ್ಯೂ ಇಂಗ್ಲೀಷ್ ಸ್ಕೂಲ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಡಾ. ಶ್ರೀಪಾದ ಶೆಟ್ಟಿ ಉದ್ಘಾಟಿಸಿ ಮಾತನಾಡಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ನೂರು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸುವ ಕೆಲಸವನ್ನು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಮಟ್ಟದಲ್ಲಿ ಮಾಡುತ್ತಿರುವುದು ಖುಷಿ ನೀಡಿದೆ. ಹೊಸ ಪರಂಪರೆ ಹುಟ್ಟು ಹಾಕಿದೆ. ಪ್ರತಿಭೆ ಅನ್ನೋದು ಎಲ್ಲರಲ್ಲೂ ಇರುವುದಿಲ್ಲ. ಕನ್ನಡ ಭಾಷೆ, ಶಾಲೆ, ನಾಡು-ನುಡಿ ಉಳಿಸಿ ಬೆಳೆಸುವ ಕೆಲಸ ಮಾಬೇಕಿದೆ. ಕನ್ನಡ ಭಾಷೆಯನ್ನು ನಮ್ಮೊಳಗೆ ಆಹ್ವಾನಿಸಿಕೊಳ್ಳಬೇಕು. ಮಕ್ಕಳಿಗಾಗಿ ಆಸ್ತಿ ಮಾಡಬೇಡಿ- ಮಕ್ಕಳನ್ನು ಆಸ್ತಿ ಮಾಡಿ. ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಿ ಎಂದು ಪಾಲಕರಿಗೆ ಕಿವಿ ಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ನಾಯ್ಕ ಮಾತನಾಡಿ ಮಾತೃಭಾಷೆಯನ್ನು ಎಷ್ಟು ಪ್ರೀತಿಸುತ್ತಿವೋ ನಾಡ ಭಾಷೆಯನ್ನು ಕೂಡ ಅಷ್ಟೇ ಪ್ರೀತಿಸಬೇಕು. ಯಾಕೆಂದರೆ ರಾಜ್ಯದಲ್ಲೇ ಕನ್ನಡ ಭಾಷೆಯ ಸ್ಥಾನಮಾನ ಕಡಿಮೆಯಾಗಿದೆ. ಆದ್ದರಿಂದ ಸನ್ಮಾನಿತ ಮಕ್ಕಳು ಮುಂದಿನ ದಿನಗಳಲ್ಲಿ ಕಸಾಪ ನಿಮ್ಮನ್ನು ಸನ್ಮಾನಿಸಿದ್ದನ್ನು ಮರೆಯಬೇಡಿ. ಕನ್ನಡಕ್ಕಾಗಿ ಕೆಲಸ ಮಾಡಿ ಅದರ ಋಣ ತೀರಿಸಿ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ಮಾತನಾಡಿ ಕಳೇದ ಮೂರು ವರ್ಷಗಳಿಂದ ಕಾರ್ಯಕ್ರಮವನ್ನು ಮಾಡಿಕೊಂಡು ಬಂದಿದ್ದೇವೆ. ಕನ್ನಡ ಮಕ್ಕಳನ್ನು ಪ್ರೋತ್ಸಾಹಿಸುವುದು. ಕೆಲ ಪ್ರಾಂತ್ಯಗಳಲ್ಲಿ ನಮ್ಮ ಭಾಷೆಯ ಅಂತ್ಯವಾಗುತ್ತಿದೆ ಎಂದು ಎನ್ನಿಸುತ್ತದೆ. ಆದರಿಂದ ಈ ಕಾರ್ಯಕ್ರಮದ ಮೂಲಕ ನಿಮ್ಮ ಎದೆಯಲ್ಲಿ ಕನ್ನಡದ ಬೀಜವನ್ನು ಬಿತ್ತುವ ಮೂಲಕ ಮುಂದಿನ ದಿನಗಳಲ್ಲಿ ಕನ್ನಡ ಹೆಚ್ಚೆಚ್ಚು ಬೆಳೆಸುವಂತಾಗಲಿ ಎನ್ನುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ. ಪ್ರತಿಭೆ ಯಾರ ಸ್ವತ್ತಲ್ಲ ಎಲ್ಲರಲ್ಲೂ ಕೂಡ ಪ್ರತಿಭೆಯಿದೆ. ನಮ್ಮ ಭಾಷೆಯ ಬಗ್ಗೆ ಇರುವ ಕೀಳರಿಮೆಯನ್ನು ತೆಗದು ಹಾಕಬೇಕು. ಸಾಧನೆಗೆ ಯಾವ ಮನೆಭಾಷೆಯೂ ಅಡ್ಡಬರುವುದಿಲ್ಲ. ಈ ಕಾರ್ಯಕ್ರಮ ಸಾರ್ಥಕತೆಯಾಗಬೇಕಾದರೆ ಸನ್ಮಾನಿತರು ಮುಂದಿನ ದಿನಗಳಲ್ಲಿ ಸಾಧಕರಾಗಿ ಈ ವೇದಿಕೆಮೇಲಿದ್ದರೆ ಅದು ಈ ಕಾರ್ಯಕ್ರಮದ ಸಾರ್ಥಕತೆ ಎಂದು ಹೇಳಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ಶೇ. ೧೦೦ ರಷ್ಟು ಅಂಕ ಪಡೆದ ವಿದ್ಯಾರ್ಥಿಗಳಿಗನ್ನು ಸನ್ಮಾನಿಸಲಾಯಿತು.
ಕಿತ್ತೂರ ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತ ಸಾಹಿತಿ ಶುಭಾ ಸಭಾಹಿತ ಹಾಗೂ ಪಿಯುಸಿಯಲ್ಲಿ ರಾಜ್ಯಮಟ್ಟದ ರ‍್ಯಾಂಕ್ ಪಡೆದ ಸಾನ್ವಿ ರಾವ್ ಅವರನ್ನು ಸನ್ಮಾನಿಸಲಾಯಿತು.
ಸಾಹಿತಿ ಸುರೇಶ ನಾಯ್ಕ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಪಿ.ಆರ್.ನಾಯ್ಕ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಟಿ.ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಸುಧೀಶ ನಾಯ್ಕ, ತಾಲೂಕು ಅಧ್ಯಕ್ಷ ಎಂ.ಜಿ.ನಾಯ್ಕ, ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಲ್.ಎಂ.ಹೆಗಡೆ, ಪಿಡಿಒ ಸಂಘದ ಅಣ್ಣಪ್ಪ ಮುಕ್ರಿ, ಮುಖ್ಯಾಧ್ಯಾಪಕ ಜಯಂತ ನಾಯ್ಕ ಉಪಸ್ಥಿತರಿದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಎಸ್.ಎಚ್.ಗೌಡ ಪ್ರಾಸ್ತಾವಿಕ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಗೌರವ ಕಾರ್ಯದರ್ಶಿ ಎಚ್.ಎಂ.ಮಾರುತಿ ಸ್ವಾಗತಿಸಿದರು. ಗಜಾನನ ನಾಯ್ಕ ವಂದಿಸಿದರು. ಸುರೇಶ ನಾಯ್ಕ ನಿರ್ವಹಿಸಿದರು.