ಉತ್ತರ ಕನ್ನಡ ಸಾವಯವ ಒಕ್ಕೂಟದಿಂದ ಆಯೋಜನೆ | ಮೆಚ್ಚುಗೆ ಗಳಿಸಿದ ಹಲಸಿನ ಕ್ಯಾಂಟೀನ್, ಖಾದ್ಯ ಸ್ಪರ್ಧೆ | ಹಲಸು ಅಭಿವೃದ್ಧಿ ಮಂಡಳಿ ರಚನೆಗೆ ಆಗ್ರಹ
ಶಿರಸಿ: ಜಿಲ್ಲೆಯ ಜನರನ್ನು ಸದಾ ಒಂದಿಲ್ಲೊಂದು ನೂತನ ಕಾರ್ಯಚಟುವಟಿಕೆಯ ಮೂಲಕ ತನ್ನತ್ತ ಬೆರಗು ಕಣ್ಣಿನಿಂದ ನೋಡುವಂತೆ ಮಾಡುವ ಉತ್ತರ ಕನ್ನಡ ಸಾವಯವ ಒಕ್ಕೂಟ ಸಂಸ್ಥೆಯು ಇದೀಗ ಮಲೆನಾಡು ಹಾಗು ಹಲಸು ಮೇಳದ ಮೂಲಕ ಮತ್ತೊಮ್ಮೆ ಜನರಿಂದ ಮೆಚ್ಚುಗೆ ಗಳಿಸಿದೆ.
ಉತ್ತರ ಕನ್ನಡ ಸಾವಯುವ ಒಕ್ಕೂಟ, ಜೀವ ವೈವಿಧ್ಯಮಂಡಳಿ ತಾಲೂಕು ಪಂಚಾಯತ್ ಶಿರಸಿ ಹಾಗೂ ವನಸ್ತ್ರೀ, ತೋಟಗಾರಿಕಾ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಎರಡು ದಿನಗಳ ಕಾಲ ನಡೆಯುವ ಮೇಳ ಶನಿವಾರ ಬೆಳಿಗ್ಗೆ ಶಿರಸಿಯ ಎ.ಪಿ.ಎಮ್.ಸಿ ಆವಾರದಲ್ಲಿನ ಪಿ.ಎಲ್.ಡಿ ಬ್ಯಾಂಕ್ ಕಟ್ಟಡದಲ್ಲಿರುವ ನೆಲಸಿರಿ ಆರ್ಗ್ಯಾನಿಕ ಹಬ್ ನಲ್ಲಿ ಉದ್ಘಾಟನೆಗೊಂಡಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕೇಂದ್ರ ಜೀವ ವೈವಿಧ್ಯ ಮಂಡಳಿ ಸದಸ್ಯ ಅನಂತ ಹೆಗಡೆ ಅಶೀಸರ ಮಾತನಾಡಿ, ಹಲಸಿಗೆ ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುರುತು ಸಿಗುವಂತೆ ಮಾಡಿರುವ ಪ್ರಯತ್ನ ಮೆಚ್ಚುವಂತದ್ದು. ಹಲಸಿನ ಮೌಲ್ಯವರ್ಧನೆ ಕುರಿತಾಗಿ ಹೆಚ್ಚು ಗಮನನೀಡಬೇಕು. ಹಲಸಿನಲ್ಲಿ ವೈವಿಧ್ಯತೆಯಿದೆ. ಆ ವೈವಿದ್ಯಮಯವನ್ನು ನಾವು ಉಳಿಸಬೇಕು ಎಂದರು. ಗೃಹೋದ್ಯಮಗಳಿಗೆ ಸೋಲಾರ್ ಚಾಲಿತ ಯಂತ್ರಗಳನ್ನು ನೀಡಿ, ಉದ್ಯಮಿಗಳನ್ನು ಉತ್ತೇಜಿಸುತ್ತಿರುವ ಸೆಲ್ಕೊ ಸೋಲಾರ್ ಫೌಂಡೇಶನ್ ಕಾರ್ಯ ಸ್ಮರಿಸುವಂತದ್ದು ಎಂದರು.
ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ ಮಾತನಾಡಿ, 2008 ರಲ್ಲಿ ಹಲಸು ಮತ್ತು ಮಲೆನಾಡು ಮೇಳವನ್ನು ಶಿರಸಿಯಲ್ಲಿ ಪ್ರಥಮವಾಗಿ ಆಯೋಜಿಸಲಾಗಿತ್ತು. ತಮಿಳುನಾಡಿನ ಫನರೊತ್ತಿ ತಾಲೂಕು ನಮಗೆ ಹಲಸಿನ ಮೇಳಕ್ಕೆ ಪ್ರೇರಣೆಯಾಗಿದೆ. ಹಲಸನ್ನು ಉಳಿಸಿ, ಬೆಳೆಸುವ ಪ್ರಯತ್ನ ನಮ್ಮಿಂದಾಗಬೇಕು. ಸಾಂಪ್ರದಾಯಿಕ ಬೆಳೆಗಳನ್ನು ಸಮಾಜಕ್ಕೆ ಪರಿಚಯಿಸುವ ಕೆಲಸ ವನಸ್ತ್ರೀ ಸಂಸ್ಥೆಯಿಂದಾಗುತ್ತಿದೆ. ಇಂತಹ ಮೇಳಗಳು ಹೊಸ ಹೊಸ ಉದ್ಯಮದಾರರನ್ನು ಸೃಷ್ಟಿಸುವಂತಾಗಲಿ, ಆ ಮೂಲಕ ಮೇಳ ಸಾರ್ಥಕತೆಯನ್ನು ಪಡೆದುಕೊಳ್ಳಲಿ ಎಂದು ಅವರು ಆಶಿಸಿದರು.
ವನಸ್ತ್ರೀ ಸಂಸ್ಥೆಯ ನಿರ್ದೇಶಕರಾದ ಶೈಲಜಾ ಗೋರ್ನಮನೆ ಮಾತನಾಡಿ, 1999ರಲ್ಲಿ ಬೀಜಮೇಳವನ್ನು ಆಯೋಜಿಲಾಗಿದೆ. ಜೀವ ವೈವಿಧ್ಯತೆಯನ್ನು ಪ್ರತಿನಿಧಿಸುವ ಮಲೆನಾಡು ಮೇಳವನ್ನು ನಡೆಸಲಾಗುತ್ತಿದೆ. ಇಂದು 60 ಕ್ಕೂ ಹೆಚ್ಚು ಸಾಂಪ್ರದಾಯಿಕ ಬೀಜವನ್ನು, ಸಂರಕ್ಷಿಸಿ, ಸಾವಯವ ರೀತಿಯಲ್ಲಿ ಬೆಳೆಸುವ ಕೆಲಸ ಸಂಸ್ಥೆಯಿಂದಾಗುತ್ತಿದೆ. ನಮ್ಮ ಸಂಸ್ಥೆಯಲ್ಲಿ 20 ಕ್ಕೂ ಹೆಚ್ಚು ಬೀಜ ಸಂರಕ್ಷಿಸುವ ಮಾಸ್ಟರ್ ಗಳು ನಮ್ಮೊಂದಿಗೆ ಇದ್ದಾರೆ ಎಂಬ ಹೆಮ್ಮೆ ನಮ್ಮದು. ಎಲ್ಲ ಸಾಂಪ್ರದಾಯಿಕ ಬೀಜಗಳನ್ನು ಎಲ್ಲರ ಸಹಕಾರದಿಂದ ಕಾದುಕೊಳ್ಳುತ್ತೇವೆ, ಬೆಳೆಸಿಕೊಳ್ಳುತ್ತೇವೆ, ಬಳಸಿಕೊಳ್ಳುತ್ತೇವೆ ಎಂದರು.
ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರಾದ ಗಣೇಶ ಹೆಗಡೆ ಮಾತನಾಡಿ, ಸರಕಾರದ ಇಲಾಖೆಯು ಜನತೆಯ ಜೊತೆಗಿದೆ. ಇಲಾಖೆಯಲ್ಲಿ ಸಿಗಯವ ಸೌಲಭ್ಯಗಳನ್ನು ಕಾಲಕಾಲಕ್ಕೆ ಸದುಪಯೋಗ ಪಡೆದುಕೊಳ್ಳಿ ಎಂದರು.
ಸ್ಕೊಡವೆಸ್ ಮುಖ್ಯಸ್ಥರು, ಉತ್ತರ ಕನ್ನಡ ಸಾವಯವ ಒಕ್ಕೂಟದ ಉಪಾಧ್ಯಕ್ಷ ವೆಂಕಟೇಶ ನಾಯ್ಕ ಮಾತನಾಡಿ, ರಾಜ್ಯದಲ್ಲಿ ಯಾರೂ ಮುಟ್ಟದ ಜಾಗದಲ್ಲಿ ಸ್ಕೊಡ್ವೆಸ್ ಸಂಸ್ಥೆ ಕೆಲಸ ಮಾಡುತ್ತಿದೆ. ಜಿಲ್ಲೆಯ ಡಿಗ್ಗಿಯಂತಹ ಪ್ರದೇಶದಲ್ಲಿ ವೈದ್ಯಕೀಯ ಚಿಕಿತ್ಸೆಯನ್ನು ನೀಡುವ ಕೆಲಸ ಸ್ಕೊಡ್ವೆಸ್ ಸಂಸ್ಥೆಯಿಂದಾಗುತ್ತಿದೆ. ಸಣ್ಣ ಮತ್ತು ಅತಿಸಣ್ಣ ಹಿಡುವಳಿದಾರರ ಬದುಕಿನ ಹಲಸನ್ನು ಹಲಸು ನೀಗಿಸುವಂತಾಗಬೇಕು. ಅಂತಹ ಮಹತ್ವದ ಕೆಲಸಕ್ಕೆ ಇಂತಹ ಮೇಳಗಳು ಮಾದರಿಯಾಗಲಿ ಎಂದರು ಅಸ್ಸಾಂ ಭಾಗಕ್ಕೆ ಮತ್ತು ಉತ್ತರ ಕನ್ನಡ ಜಿಲ್ಲೆಯ ಭೌಗೋಳಿಕ ಪ್ರದೇಶಕ್ಕೆ ಸಾಮ್ಯತೆಯಿದೆ. ಆ ನಿಟ್ಟಿನಲ್ಲಿ ಉತ್ತರ ಕನ್ನಡಿಗರ ಕೆಲಸ ದೇಶ ಕಟ್ಟುವ ಕೆಲಸವಾಗಿದೆ ಎಂದರು.
ಉತ್ತರ ಕನ್ನಡ ಸಾವಯವ ಒಕ್ಕೂಟದ ಅಧ್ಯಕ್ಷ ವಿಶ್ವೇಶ್ವರ ಭಟ್ಟ ಅಧ್ಯಕ್ಷೀಯ ನುಡಿಗಳನ್ನಾಡಿ, ಸೋಲಾರ್ ಬಳಕೆಯ ಮೂಲಕ ಗೃಹೋದ್ಯಮಕ್ಕೆ ಶಕ್ತಿಯನ್ನು ತುಂಬುವ ಪ್ರಯತ್ನ ಸೆಲ್ಕೋ ಸೋಲಾರ್ ಸಹಯೋಗದಿಂದ ಮಾಡಲಾಗುತ್ತಿದೆ. ಒಕ್ಕೂಟದ ಯಶಸ್ಸಿನಲ್ಲಿ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ಪಾತ್ರ ಮಹತ್ವದ್ದಾಗಿದೆ. ಎಲ್ಲರ ಸಹಕಾರದಿಂದ ಒಕ್ಕೂಟ ಯಶಸ್ವಿಯಾಗಿ ನಡೆಯುತ್ತಿದೆ ಎಂದರು. ಸಂಸ್ಥೆಯ ವತಿಯಿಂದ ಸದ್ಯದಲ್ಲಿಯೇ ರಪ್ತು ಪ್ರಕ್ರಿಯೆಯೂ ನಡೆಯುವುದಿದೆ ಎಂದು ಅವರು ಹೇಳಿದರು.
ಸಂಸ್ಥೆಯ ನಿರ್ದೇಶಕ ರಾಘವ ಹೆಗಡೆ ಕೊರ್ಸೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿ, ಕಳೆದ ಎರಡು ದಶಕಗಳ ಹಿಂದೆ ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಆ ಸಮಯದಲ್ಲಿ ಸ್ಥಾಪನೆಯಾದ ಉತ್ತರ ಕನ್ನಡ ಸಾವಯವ ಒಕ್ಕೂಟ ರಾಜ್ಯಕ್ಕೆ ಮಾದರಿಯಾಗಿ ಇಂದಿಗೂ ಸಹ ಅತ್ಯುತ್ತಮವಾಗಿ ಕೆಲಸ ನಿರ್ವಹಿಸುತ್ತಾ ಬಂದಿದೆ. ಜಿಲ್ಲೆಯಲ್ಲಿ ಸಾಂಬಾರ ಬೆಳಡಗಳಿಗೆ ವಿಪುಲ ಅವಕಾಶವಿದ್ದು ನಾವೆಲ್ಲರು ಆ ನಿಟ್ಟಿನಲ್ಲಿ ಯೋಚಿಸಬೇಕಿದೆ. ಪ್ರಸ್ತುತ ವರ್ಷದಲ್ಲಿ ಹಲಸಿನ ಮೇಳದಲ್ಲಿ ಹಲಸಿನ ಬೀಜದ ಉಪಯುಕ್ತತೆ ಕುರಿತಾಗಿ ಹೆಚ್ಚು ಮಹತ್ವ ನೀಡಲಾಗಿದೆ. ಪ್ರೋಟೀನಯುಕ್ತ ಹಲಸಿನ ಬೀಜದ ಪದಾರ್ಥಗಳ ಮೌಲ್ಯವರ್ಧನೆ ಕುರಿತಾಗಿ ನಾವು ಹೆಚ್ಚು ಗಮನ ವಹಿಸಬೇಕಿದೆ ಎಂದರು.
ಸಂಸ್ಥೆಯ ನಿರ್ದೇಶಕ ನಾರಾಯಣ ಹೆಗಡೆ ಗಡಿಕೈ ವಂದಿಸಿದರು. ಕಾರ್ಯಕ್ರಮದಲ್ಲಿ ಕೆವಿಕೆ ಮುಖ್ಯಸ್ಥರಾದ ರೂಪಾ ಪಾಟೀಲ್, ಸೆಲ್ಕೋ ಸೋಲಾರ್ ಫೌಂಡೇಶನ್ ಪದಾಧಿಕಾರಿಗಳು ಇದ್ದರು. ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಚ್ ಎನ್ ವಿಕಾಸ್ ನಿರ್ವಹಿಸಿದರು.
ಜನ ಮೆಚ್ಚುಗೆ ಗಳಿಸಿದ ಹಲಸಿನ ಬೀಜದ ಖಾದ್ಯ ಸ್ಪರ್ಧೆ
ಜಿಲ್ಕೆಯ ವಿವಿಧೆಡೆಯಿಂದ 48 ಕ್ಕಿಂತಲೂ ಅಧಿಕ ಮಹಿಳೆಯರಿಂದ ಹಲಸಿನ ಹಣ್ಣು, ಬೀಜದಿಂದ ತಯಾರಿಸಿದ ಉತ್ಪನ್ನಗಳ ಸ್ಪರ್ಧೆಗೆ ಹಲಸಿನ ಬೇಳೆ ಕಾರದ ಪುಡಿ, ಚುಡುವಡ, ತೊಕ್ಕು, ವಡಾ, ಹಣ್ಣಿನ ಶಾವಿಗೆ, ಹಣ್ಣಿನ ಹೋಳಿಗೆ, ಕೋಡುಬಳೆ, ಬೀಜದ ತಂಬುಳಿ ಸೇರಿದಂತೆ ಬಗೆಬಗೆಯ ಪದಾರ್ಥಗಳು ಸ್ಪರ್ಧೆಯಲ್ಲಿ ಕಂಡುಬಂದವು. ಖಾದ್ಯ ಸ್ಪರ್ಧೆಯ ನಿರ್ಣಾಯಕರಾಗಿ ಮಮತಾ ಹೆಗಡೆ ಶಮೆಮನೆ ಹಾಗು ಭುವನೇಶ್ವರಿ ಜೋಷಿ ಇದ್ದರು.
ಇಂದು ಸಂಜೆ 4 ಕ್ಕೆ ಸಮಾರೋಪ;
ಎರಡು ದಿನಗಳ ಕಾಲ ನಡೆಯುತ್ತಿರುವ ಮೇಳದಲ್ಲಿ ವಿಶೇಷವಾಗಿ ಹಲಸಿನ ಕ್ಯಾಂಟೀನ್ ಪ್ರಮುಖ ಜನಾಕರ್ಷಣೆಯಾಗಿದೆ. ಭಾನುವಾರ ಸಂಜೆ 4 ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಮುಂಜಾನೆಯಿಂದಲೇ ವಿಶೇಷ ಆಕರ್ಷಣೆಯಾದ ಹಲಸಿನ ಕ್ಯಾಂಟೀನ್ ಸೇವೆ ಇರಲಿದೆ. ಹೆಚ್ಚಿನ ಜನರು ಅದರ ಉಪಯೋಗ ಪಡೆದುಕೊಳ್ಳಬಹುದು.
ಜಿಲ್ಲೆಯ ಪ್ರತಿ ಮನೆಯಲ್ಲಿ ಗೃಹೋದ್ಯಮಗಳು ನಡೆಯಬೇಕು. ಆ ಮೂಲಕ ಸ್ವಾವಲಂಬಿ ಜೀವನ ನಡೆಸಬೇಕು. ನಮ್ಮ ಜಿಲ್ಲೆಯ ಉತ್ಪನ್ನಗಳು ಗುಣಮಟ್ಟದ ಉತ್ಪನ್ನವಾಗುವಂತಾಗಬೇಕು. ಬದ್ಧತೆಯಿಂದ ಕೆಲಸ ಮಾಡಿದಲ್ಲಿ ಯಶಸ್ಸು ದೊರೆಯುತ್ತದೆ. ಇದು ನಮ್ಮ ಮುಖ್ಯ ಉದ್ಧೇಶವಾಗಿದೆ.– ವಿಶ್ವೇಶ್ವರ ಭಟ್ಟ, ಕೋಟೆಮನೆ, ಅಧ್ಯಕ್ಷರು, ಉತ್ತರ ಕನ್ನಡ ಸಾವಯವ ಒಕ್ಕೂಟ
ಹಲಸು ಅಭಿವೃದ್ಧಿ ಮಂಡಳಿ ರಚನೆಗೆ ಆಗ್ರಹ:
ನಿಂಬೆ, ಮಾವು ಅಭಿವೃದ್ಧಿ ಮಂಡಳಿ ಇರುವಂತೆ, ಹಲಸು ಅಭಿವೃದ್ಧಿ ಮಂಡಳಿ ಮಾಡುವಂತೆ ಸರಕಾರಕ್ಕೆ ಆಗ್ರಹ ಮಾಡಬೇಕು. ಸರಕಾರಕ್ಕೆ ನಮ್ಮ ಧ್ವನಿ ಮುಟ್ಟುವ ಕೆಲಸ ಮಾಡಬೇಕಿದೆ. – ಅನಂತ ಅಶೀಸರ, ಕೇಂದ್ರ ಜೀವ ವೈವಿಧ್ಯ ಮಂಡಳಿ ಸದಸ್ಯ