ಶಿರಸಿ: ತೀವ್ರ ಕುತೂಹಲ ಮೂಡಿಸಿರುವ ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ವಿಜಯಮಾಲೆ ಯಾರಿಗೆ ಒಲಿಯಲಿದೆ ಎಂಬುದನ್ನು ಕಾದುನೋಡಬೇಕಿದೆ. ಜೂ. 30, ಭಾನುವಾರ ಧಾರವಾಡದ ಹಾಲು ಒಕ್ಕೂಟದ ಕೇಂದ್ರ ಕಛೇರಿಯಲ್ಲಿ ಚುನಾವಣೆ ನಡೆಯಲಿದ್ದು, ಸಂಜೆ ಫಲಿತಾಂಶ ಹೊರಬೀಳಲಿದೆ. ಶಿರಸಿ ಕ್ಷೇತ್ರದಿಂದ ಹಾಲಿ ನಿರ್ದೇಶಕ ಸುರೇಶ್ಚಂದ್ರ ಕೆಶಿನ್ಮನೆ ಹಾಗು ಹಿರಿಯ ಸಹಕಾರಿ ಪಿಎಲ್ಡಿ ಬ್ಯಾಂಕಿನ ಮಾಜಿ ನಿರ್ದೇಶಕ ಉಮಾಮಹೇಶ್ವರ ಹೆಗಡೆ ಬಿಸ್ಲಕೊಪ್ಪ ಸ್ಪರ್ಧೆಗೆ ಸಜ್ಜಾಗಿದ್ದಾರೆ.
ಅದರಂತೆ ಯಲ್ಲಾಪುರ ಕ್ಷೇತ್ರದಲ್ಲಿ ಪ್ರಶಾಂತ ಸಭಾಹಿತ ಮತ್ತು ಹಾಲಿ ನಿರ್ದೇಶಕ ಶಂಕರ ಹೆಗಡೆ ಕಣದಲ್ಲಿದ್ದಾರೆ. ಸಿದ್ದಾಪುರದಿಂದ ಹಾಲಿ ನಿರ್ದೇಶಕ ಪರಶುರಾಮ ನಾಯ್ಕ, ಬೀರ್ಲಕಟ್ಟೆಯ ಸಾಧನಾ ಭಟ್ಟ ಹಾಗು ಕ್ಯಾದಗಿಯ ಶಿವರಾಮ ಹೆಗಡೆ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಮೂರನೇ ಅವಧಿಗೆ ಗೆಲ್ಲುವರೇ ಸುರೇಶ್ಚಂದ್ರ ?
ಮೊದಲ ಅವಧಿಗೆ ಚುನಾವಣೆ ಎದುರಿಸಿ, ಎರಡನೇ ಬಾರಿಗೆ ಅವಿರೋಧವಾಗುವ ಮೂಲಕ ಕಳೆದ ಎರಡು ಅವಧಿಗೆ ಒಕ್ಕೂಟಕ್ಕೆ ಆಯ್ಕೆಯಾಗಿದ್ದ ಸುರೇಶ್ಚಂದ್ರ ಕೆಶಿನ್ಮನೆ ಕ್ಷೇತ್ರದಲ್ಲಿ ಅಪಾರ ಜನಮನ್ನಣೆಯ ಜೊತೆಗೆ ಜನಪರ ಕೆಲಸಗಳನ್ನೂ ಮಾಡಿದ್ದಾರೆ. ಇವರ ಯಶಸ್ಸು ಹಲವು ಹಿತಶತ್ರುಗಳ ನಿದ್ರೆಯನ್ನು ಕೆಡಿಸಿದ್ದು, ಪ್ರಸ್ತುತ ಸಾಲಿನಲ್ಲಿ ಚುನಾವಣೆಯಲ್ಲಿ ಯಾವ ರೀತಿಯ ಪರಿಣಾಮವನ್ನು ಬೀರಲಿದೆ ಎಂಬುದನ್ನು ಕಾದುನೋಡಬೇಕಿದೆ.
ಕಾಗೇರಿಗೆ ಪ್ರತಿಷ್ಠೆಯ ಪ್ರಶ್ನೆ:
ಸಂಸದ ಕಾಗೇರಿಯವರ ಗೆಲುವಿನಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದ ಕೆಶಿನ್ಮನೆಯ ಗೆಲುವಿಗೆ ತಮ್ಮ ಸಹಕಾರ ನೀಡುವುದು ಹಾಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಅನಿವಾರ್ಯವಾಗಿದೆ. ಕಾಗೇರಿ ಮನಸ್ಸು ಮಾಡಿದ್ದಲ್ಲಿ ಕೆಶಿನ್ಮನೆ ಗೆಲುವು ಸುಲಭವಾಗಲಿದ್ದು, ಪಶ್ಚಿಮ ಭಾಗದ ಎಲ್ಲ ಮತಗಳು ಕೆಶಿನ್ಮನೆ ಪರ ಕ್ರೋಢಿಕರಣಗೊಂಡರೆ, ಪೂರ್ವ ಭಾಗದ ಮತಗಳು ಯಾರಿಗೆ ಎಷ್ಟು ಬೀಳುವುದು ಎಂಬುದು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಈ ನಿಟ್ಟಿನಲ್ಲಿ ಸಂಸದ ಕಾಗೇರಿ ಯಾವ ರೀತಿ ಬೆಂಬಲ ನೀಡಲಿದ್ದಾರೆ ಎಂಬುದನ್ನು ಫಲಿಂತಾಶ ಎತ್ತಿ ಹಿಡಿಯಲಿದೆ.