Slide
Slide
Slide
previous arrow
next arrow

ಭೈರುಂಬೆ ಶ್ರೀ ಶಾರದಾಂಬಾ ಶಿಕ್ಷಣ, ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಂಸ್ಥಾಪನಾ ದಿನಾಚರಣೆ

300x250 AD

ಶಿರಸಿ: ತಾಲೂಕಿನ ಭೈರುಂಬೆಯ ಶ್ರೀ ಶಾರದಾಂಬಾ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಸ್ಥಾಪನಾ ದಿನಾಚರಣೆಯನ್ನು ಜೂ.24, ಸೋಮವಾರದಂದು ಸಂಸ್ಥೆಯ ಸಭಾಭವನದಲ್ಲಿ ನಡೆಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಅದಮ್ಯ ಚೇತನ ಮುಖ್ಯಸ್ಥೆ ಶ್ರೀಮತಿ ತೇಜಸ್ವಿನಿ ಅನಂತಕುಮಾರ ಬೆಂಗಳೂರು ಮಾತನಾಡಿ, ನಾವು ಉತ್ಪಾದಿಸುವ ಸ್ಟೀಲ್, ಪ್ಲಾಸ್ಟಿಕ್, ಪೇಪರ್ ಮುಂತಾದ ಪ್ರತಿಯೊಂದು ವಸ್ತುವಿನಿಂದ ಪರಿಸರಕ್ಕೆ ಹಾನಿ ಉಂಟಾಗುತ್ತದೆ. ಆದ್ದರಿಂದ ಅವುಗಳನ್ನು ಸಂಸ್ಕರಣ ಮಾಡುವ ಬಗ್ಗೆ ಜಾಗೃತಿ ಅತ್ಯಗತ್ಯ. ನಾವು ಬಳಸುವ ಪೇಪರ್-ಲೋಟಗಳಲ್ಲಿ ಬಳಸುವ ಮೈಕ್ರೋ ಪ್ಲಾಸ್ಟಿಕ್ ಇಂದು ನಮ್ಮ ಆಹಾರ ಸರಪಳಿಯನ್ನು ಸೇರಿಕೊಂಡಿದೆ ಹಾಗೂ ಇನ್ನೂ ಸರಿಯಾದ ಜೀರ್ಣ ಪ್ರಕ್ರಿಯೆ ಅಭಿವೃದ್ಧಿ ಆಗಿರದ ಮಕ್ಕಳ ಮೇಲೆ ಅವುಗಳ ದುಷ್ಪರಿಣಾಮ ಅತ್ಯಧಿಕ ಎಂದು ನಮ್ಮ ಉಳಿವಿನ ದೃಷ್ಟಿಯಿಂದ ಪರಿಸರ ಕಾಳಜಿಯ ಅವಶ್ಯಕತೆಯನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ಅದಮ್ಯ ಚೇತನ ಹೆಸರಿನ ಪರಿಸರಕ್ಕೆ ಸಂಬಂಧಿಸಿದ ಗೋಡೆ ಪತ್ರಿಕೆಯನ್ನೂ ಅನಾವರಣ ಮಾಡಲಾಯಿತು.

ಮುಖ್ಯ ಅತಿಥಿಯಾಗಿ ಮಾತನಾಡಿದ ಜೀವ ವೈವಿಧ್ಯತಾ ಮಂಡಳಿ ನಿಕಟಪೂರ್ವ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿ, ಶ್ರೀಮತಿ ತೇಜಸ್ವಿನಿಯವರ ಪರಿಸರ ಪೂರಕ ಚಟುವಟಿಕೆಗಳು ನಮ್ಮ ಭಾಗದಲ್ಲೂ ವಿಸ್ತರಣೆ ಆಗುವುದು ಅತ್ಯಗತ್ಯ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ಶಾ.ಶಿ.ಗ್ರಾ.ಅ.ಸಂಸ್ಥೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಬೊಮ್ಮನಳ್ಳಿ ಅವರು ನಮ್ಮ ಭಾಗದಲ್ಲಿ ಪರಿಸರ ಸಂರಕ್ಷಣೆ ಹಾಗೂ ಅಭಿವೃದ್ಧಿಯ ಬಗ್ಗೆ ರಚನಾತ್ಮಕ ಕೆಲಸ ಮಾಡಿರುವ ಅನಂತ ಅಶೀಸರ ಹಾಗೂ ನಮ್ಮೆಲ್ಲರಿಗೂ ಪರಮ ಪೂಜ್ಯರು ಮತ್ತು ಮಾರ್ಗದರ್ಶಕರಾಗಿರುವ ಸ್ವರ್ಣವಲ್ಲೀಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳವರು ಈ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ಎನ್ನುವುದು ಅಭಿಮಾನದ ಸಂಗತಿ. ನಮ್ಮಲ್ಲಿ ಕಲಿತ ಮಕ್ಕಳು ಉನ್ನತ ಶಿಕ್ಷಣ ಪಡೆದು ಸಮಾಜಕ್ಕೆ ಉಪಯುಕ್ತವಾದ ಕಾರ್ಯದಲ್ಲಿ ನಿರತರಾದರೆ ಶಿಕ್ಷಣ ಸಂಸ್ಥೆಗೆ ಸಾರ್ಥಕತೆ, ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಕೋಶಾಧ್ಯಕ್ಷ ಅನಂತ ಭಟ್ಟ ಹುಳಗೋಳ ಅವರು “ತಮ್ಮ ಅನಕ್ಷರತೆ, ಕಡು ಬಡತನ, ಸಂಪನ್ಮೂಲಗಳ ಕೊರತೆ, ಮುಂತಾದ ಎಲ್ಲ ಪ್ರತಿಕೂಲತೆಗಳ ನಡುವೆ ಈ ಭಾಗದ ಹಿರಿಯರು ಮಾಡಿದ ದೂರದೃಷ್ಟಿ ಹಾಗೂ ತ್ಯಾಗದ ಪ್ರತಿಫಲವಾಗಿ ಈ ಶಿಕ್ಷಣ ಸಂಸ್ಥೆ 67 ಸಂವತ್ಸರಗಳ ಕಾಲ ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗಿದೆ” ಎಂದು ಹೇಳಿದರು.

300x250 AD

ಅತಿಥಿಗಳ ಸ್ವಾಗತ & ಪರಿಚಯ ಮಾಡಿದ ಸಂಸ್ಥೆಯ ಉಪಾಧ್ಯಕ್ಷ ನಾರಾಯಣ ಹೆಗಡೆ ಗಡಿಕೈ, ಅವರು ಪ್ರತಿದಿನ ಎರಡು ಲಕ್ಷ ಮಕ್ಕಳಿಗೆ ಶುಚಿ-ರುಚಿಯಾದ ಬಿಸಿಯೂಟ ಒದಗಿಸುತ್ತಿರುವ ಅದಮ್ಯ ಚೇತನದ ಮಾದರಿಯಲ್ಲಿ ಹಾಗೂ ಮಾರ್ಗದರ್ಶನದಲ್ಲಿ ನಮ್ಮ ಭಾಗದ ಎಲ್ಲ ಶಾಲಾ ಮಕ್ಕಳಿಗೂ ಬಿಸಿಯೂಟ ಒದಗಿಸಲು, ಈಗಾಗಲೇ ಸಂಸ್ಥೆಯ ಆವಾರದಲ್ಲಿ ಇರುವ ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿ ಘಟಕವನ್ನು ಯಶಸ್ವಿಗೊಳಿಸಲು ಹಾಗೂ ಪ್ಲಾಸ್ಟಿಕ್ ಮುಕ್ತ ಸಾರ್ವಜನಿಕ ಊಟೋಪಚಾರ ವ್ಯವಸ್ಥೆಗೆ ಪ್ಲೇಟ್ ಬ್ಯಾಂಕ್ ಸ್ಥಾಪನೆ ಮಾಡಲು ಶ್ರೀಮತಿ ತೇಜಸ್ವಿನಿ ಅನಂತಕುಮಾರ ಅವರ ಸಹಕಾರವನ್ನು ಈ ಸಂಸ್ಥೆ ಅಪೇಕ್ಷಿಸುತ್ತದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ “ಸಾಧಕಿಯರಿಗೆ ಸನ್ಮಾನ” ಕಾರ್ಯಕ್ರಮ ನಡೆಸಲಾಯಿತು. ಉದ್ಯಮಶೀಲ ಮಹಿಳೆ, ಸಾತ್ವಿಕ ಫುಡ್ಸ್, ಬೆಳ್ಳೆಕೇರಿ ಇದರ ಮಾಲಕಿ ಶ್ರೀಮತಿ ಪೂರ್ಣಿಮಾ ಹೆಗಡೆ ಬೆಳ್ಳೆಕೇರಿ, ಹಾಗೂ ಅವರ ಪತಿ ಸಹಕಾರಿ ನೇತಾರ ಗಣಪತಿ ಹೆಗಡೆ ಬೆಳ್ಳೆಕೇರಿ, ಚಾರ್ಟರ್ಡ್ ಅಕೌಂಟೆಂಟ್ ಮತ್ತು ಕಂಪನಿ ಸೆಕ್ರೆಟರಿ, ಶ್ರೀಮತಿ ಮಂಗಲಾ ಭಟ್ಟ, ಬೆಂಗಳೂರು, ಹೋಮಿಯೋಪಥಿ ವೈದ್ಯೆ – ಡಾ.ದೀಪ್ತಿ ದೇವ, ಬೆಳಲೆ, ಬೆಂಗಳೂರು, ಸಂಶೋಧಕಿ – ಡಾ.ಮೇಧಾ ಭಟ್ಟ, ಹುಳಗೋಳ, ಮತ್ತು ಬೆಂಗಳೂರು, ಡಿಸಿಎಸ್ ಅಡ್ವೈಸರ್ಸ್ ಸಂಸ್ಥೆಯ ಸಂಸ್ಥಾಪಕಿ – ಶ್ರೀಮತಿ ರಂಜನಾ ಭಟ್ಟ, ತಾರಗೋಡು ಇವರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಶ್ರೀಮತಿ ಪೂರ್ಣಿಮಾ ಹೆಗಡೆ ಹಾಗೂ ಶ್ರೀಮತಿ ಮಂಗಲಾ ಭಟ್ಟ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಶಾಲಾ ಮಕ್ಕಳ ಪ್ರಾರ್ಥನೆಯೊಡನೆ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಶಿಕ್ಷಕಿ ಅಖಿಲಾ ಭಟ್ಟ ಇಳೇಹಳ್ಳಿ ನಿರ್ವಹಣೆ ಮಾಡಿದರು. ಕನ್ನಡ ಮಾಧ್ಯಮದ ಮುಖ್ಯಾಧ್ಯಾಪಕ ವಿನಾಯಕ ಹೆಗಡೆ ವಂದನಾರ್ಪಣೆ ಮಾಡಿದರು.

Share This
300x250 AD
300x250 AD
300x250 AD
Back to top