ಯಲ್ಲಾಪುರ: ಇಡಗುಂದಿ ವಿಶ್ವದರ್ಶನ ಪ್ರೌಢಶಾಲೆಯಲ್ಲಿ ನೇತಾಜಿ ಸಮಾಜ ವಿಜ್ಞಾನ ಸಂಘ ಹಾಗೂ ಮತದಾರರ ಸಾಕ್ಷರತಾ ಕ್ಲಬ್ ಅಡಿಯಲ್ಲಿ ಶಾಲಾ ಸಂಸತ್ ಚುನಾವಣೆ ನಡೆಸಲಾಯಿತು. ಚುನಾವಣೆಗಳ ಕುರಿತಾದ ಅರಿವು ವಿದ್ಯಾರ್ಥಿಗಳಿಗೆ ಶಾಲಾ ಹಂತದಲ್ಲಿಯೇ ಮೂಡಿದರೆ ಭಾವೀ ಮತದಾರರಾಗಿ ತಮ್ಮ ಜವಾಬ್ದಾರಿಯನ್ನು ಅರಿಯಲು ಇದು ಮಹತ್ತರ ಕಾರ್ಯವಾಗಿದೆ. ವಿದ್ಯಾರ್ಥಿಗಳಿಗೆ ಚುನಾವಣಾ ಪ್ರಕ್ರಿಯೆಯ ಅರಿವು ಮೂಡಿಸುವುದಕ್ಕಾಗಿ ಚುನಾವಣಾ ಅಧಿಸೂಚನೆ ಹೊರಡಿಸುವುದರೊಂದಿಗೆ ಪ್ರಾರಂಭವಾದ ಚುನಾವಣಾ ಪ್ರಕ್ರಿಯೆಯು ನಾಮಪತ್ರ ಸಲ್ಲಿಕೆ, ನಾಮಪತ್ರ ಹಿಂತೆಗೆದುಕೊಳ್ಳುವಿಕೆ,ನಾಮಪತ್ರ ಪರಿಶೀಲನೆ, ಚುನಾವಣಾ ಪ್ರಚಾರ ಮುಂತಾದ ಎಲ್ಲಾ ಚುನಾವಣಾ ಪ್ರಕ್ರಿಯೆಗಳನ್ನು ಒಳಗೊಂಡಿತ್ತು. ವಿದ್ಯಾರ್ಥಿಗಳಲ್ಲಿ ಮತದಾನದ ಕುರಿತಾದ ಜಾಗೃತಿ ಮೂಡಿಸಲು ಹಾಗೂ ಚುನಾವಣೆಗಳ ಮಹತ್ವ ಹಾಗೂ ಚುನಾವಣಾ ಪ್ರಕ್ರಿಯೆಗಳ ಅರಿವು ಮೂಡಿಸಲು ಈ ಪ್ರಕ್ರಿಯೆ ಸಹಕಾರಿಯಾಗಿದೆ.ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಚುನಾವಣೆಯಲ್ಲಿ ಸಂಭ್ರಮದಿಂದ ಪಾಲ್ಗೊಂಡಿದ್ದರು.ಸಮಾಜ ವಿಜ್ಞಾನ ಶಿಕ್ಷಕರಾದ ರಾಘವೇಂದ್ರ ಹೆಗಡೆ ನೇತೃತ್ವದಲ್ಲಿ ನಡೆದ ಈ ಚುನಾವಣೆಯಲ್ಲಿ ಮುಖ್ಯಾಧ್ಯಾಪಕರಾದ ಪ್ರಸನ್ನ ಹೆಗಡೆಯವರು ಮುಖ್ಯ ಚುನಾವಣಾಧಿಕಾರಿಗಳಾಗಿ ಹಾಗೂ ಶಿಕ್ಷಕ ವೃಂದದವರು ಹಾಗೂ ಸಿಬ್ಬಂದಿಗಳು ಚುನಾವಣಾ ಸಿಬ್ಬಂದಿಗಳಾಗಿ ಕಾರ್ಯನಿರ್ವಹಿಸಿದರು. ಸಾರ್ವತ್ರಿಕ ಚುನಾವಣಾ ಮಾದರಿಯಲ್ಲಿ ನಡೆದ ಈ ಚುನಾವಣೆಯಲ್ಲಿ ವಿದ್ಯಾರ್ಥಿಗಳು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು.
ಕುಮಾರಿ ಪ್ರಣತಿ ಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿ, ಕುಮಾರ ಚೈತನ್ಯ ಕೃಷ್ಣ ಭಟ್ಟ ಕ್ರೀಡಾ ಮಂತ್ರಿಯಾಗಿ, ಕುಮಾರಿ ವೈಷ್ಣವಿ ವಿಶ್ವನಾಥ ಭಟ್ಟ ಸಾಂಸ್ಕೃತಿಕ ಮಂತ್ರಿಯಾಗಿ, ಕುಮಾರ ವಿನಯ ಭಂಡಾರಿ ಸ್ವಚ್ಚತಾ ಮಂತ್ರಿಯಾಗಿ,ಕುಮಾರ ಸುಮಂತ ಸತೀಶ ಭಟ್ಟ ಪ್ರಾರ್ಥನಾ ಮಂತ್ರಿಯಾಗಿ ಹಾಗೂ ಕುಮಾರ ಅಕ್ಷಯ ನಾಗರಾಜ ನಾಯ್ಕ ಅಕ್ಷರ ದಾಸೋಹ ಮಂತ್ರಿಯಾಗಿ ಅಯ್ಕೆಯಾದರು.