ಕಾರವಾರ: ಪರಿಸರದಲ್ಲಿನ ಸೂಕ್ಷ್ಮ ಬದಲಾವಣೆಗಳನ್ನು ಅರಿತು ಜೀವನ ಶೈಲಿ ಬದಲಾಯಿಸಿಕೊಂಡು ಪರಿಸರ ಸಂರಕ್ಷಣೆಗೆ ಪಣತೊಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಅತ್ಯಂತ ಗಂಭೀರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಉಪ ಪರಿಸರ ಅಧಿಕಾರಿ ಸಿ, ಡಾ. ಗಣಪತಿ ಹೆಗಡೆ ಹೇಳಿದರು.
ಅವರು ಮಂಗಳವಾರ ಯಲ್ಲಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಛೇರಿ, ಕಾರವಾರ ಹಾಗೂ ಸಂಗಮ ಸೇವಾ ಸಂಸ್ಥೆ (ರಿ) ಬಾಳೇಗುಳಿ, ಅಂಕೋಲಾ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಾಲಾ ವಿದ್ಯಾರ್ಥಿಗಳು ಪ್ರತಿದಿನ ಶಾಲೆಗೆ ಬರುವಾಗ ಮತ್ತು ಹೋಗುವಾಗ ಪರಿಸರವನ್ನು ಗಮನಿಸಬೇಕು ಹಾಗೂ ಸಸ್ಯ ಸಂಕುಲಗಳ ಬಗ್ಗೆ, ಪ್ರಾಣಿ ವೈವಿಧ್ಯತೆಗಳ ಬಗ್ಗೆ ಅರಿತು ಪರಿಸರ ಪೂರಕ ಚಟುವಟಿಕೆಯಲ್ಲಿ ತೊಡಗಿಕೊಂಡು ಪ್ರಕೃತಿಯಲ್ಲಿನ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಅಂಶಗಳ ಬಗ್ಗೆ ಜ್ಞಾನಾರ್ಜನೆ ಮಾಡಿಕೊಳ್ಳುವಂತೆ ಹಾಗೂ ತಮ್ಮ ಮುಂದಿನ ಜೀವನದಲ್ಲಿ ಪರಿಸರ ಸಂರಕ್ಷಣೆಯ ತೊಡಗಿಸಿಕೊಳ್ಳಬೇಕು . ಪ್ಲಾಸ್ಟಿಕ್‌ನಿಂದ ಪರಿಸರದ ಮೇಲಿನ ದುಷ್ಪರಿಣಾಮಗಳು ಹಾಗೂ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧ ಮತ್ತು ತ್ಯಾಜ್ಯ ನಿರ್ವಹಣೆಯಲ್ಲಿ ಹಾಗೂ ಮಾಲಿನ್ಯ ತಡೆಗಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ ಅಪಾರ ಎಂದು ಹೇಳಿದರು.ಜಲ ಮಾಲಿನ್ಯ, ವಾಯು ಮಾಲಿನ್ಯ, ಭೂ ಮಾಲಿನ್ಯ, ಘನತ್ಯಾಜ್ಯ ವಿಂಗಡಣೆ, ಜೀವ ವೈದ್ಯಕೀಯ ತ್ಯಾಜ್ಯ ನಿರ್ವಹಣೆ ಮತ್ತು ಮನೆ ಮನೆಗಳಲ್ಲಿ ಉತ್ಪತ್ತಿಯಾಗುವ ಅಪಾಯಕಾರಿ ರಾಸಾಯನಿಕ ತ್ಯಾಜ್ಯಗಳ ಬಗ್ಗೆ ತಿಳಿಸಿ ವಿದ್ಯಾರ್ಥಿಗಳು ದಿನನಿತ್ಯದ ಚಟುವಟಿಕೆಯಲ್ಲಿ ಅರಿತು ಪರಿಸರ ಸಂರಕ್ಷಣೆಗೆ ಕೈಜೋಡಿಸಿ ಪರಿಸರ ಸಂರಕ್ಷಣೆಯ ಯೋಧರಾಗಬೇಕು ಎಂದರು.
ಯಲ್ಲಾಪುರದ ಸರಕಾರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ನಾರಾಯಣ ನಾಯಕ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತು ರೂಢಿಸಿಕೊಂಡು ಜೀವನ ಶೈಲಿಯನ್ನು ಪರಿಸರ ಪೂರಕವಾಗಿ ಬದಲಾಯಿಸಿಕೊಳ್ಳಬೇಕು ಎಂದರು. ಅಂಕೋಲಾದ ಸಂಗಮ ಸೇವಾ ಸಂಸ್ಥೆ (ರಿ) ಬಾಳೆಗುಳಿ ಅಧ್ಯಕ್ಷ ರವೀಂದ್ರ ಎನ್.ಶೆಟ್ಟಿ ಸ್ವಾಗತಿಸಿದರು. ಜ್ಯೋತಿ ನಾಯಕ ನಿರೂಪಿಸಿದರು. ಸಂಗೀತಾ ವೈದ್ಯ ಹಾಗೂ ಸರ್ಕಾರಿ ಪ್ರೌಢಶಾಲೆ ಯಲ್ಲಾಪುರದ ಶಿಕ್ಷಕರು ಉಪಸ್ಥಿತರಿದ್ದರು.