ಸಿದ್ದಾಪುರ: ಅಡಕೆ ಬೆಳೆಯುವ ಪ್ರದೇಶ ದಿನದಿಂದ ದಿನಕ್ಕೆ ಸಾವಿರಾರು ಎಕರೆ ವಿಸ್ತರಣೆಯಾಗುತ್ತಿದೆ. ಮುಂದೊಂದು ದಿನ ಅಡಿಕೆ ದರ ಪಾತಾಳಕ್ಕೆ ಕುಸಿಯುವ ಆತಂಕವಿದ್ದು, ರೈತರು ಅಡಿಕೆ ಜತೆಗೆ ಉಪಬೆಳೆಗಳನ್ನು ಬೆಳೆಯುವಂತೆ ಶಿರಸಿ-ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ ಸಲಹೆ ನೀಡಿದರು.
ಸಿದ್ದಾಪುರ ತಾಲೂಕಾ ಪಂಚಾಯತ ಸಭಾಭವನದಲ್ಲಿ ಸೋಮವಾರ ತ್ರೈಮಾಸಿಕ ಕೆಡಿಪಿ ಸಭೆ ನಡೆಸಿ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯಲ್ಲದೇ ಇಡೀ ರಾಜ್ಯದಲ್ಲಿ ಅಡಿಕೆ ಬೆಳೆಯುವ ಪ್ರದೇಶ ದಿನೇ ದಿನೇ ವಿಸ್ತರಣೆಯಾಗುತ್ತಿದೆ. ಕಳೆದ ಐದಾರು ವರ್ಷಗಳಲ್ಲಿ ಲಕ್ಷಾಂತರ ಹೆಕ್ಟೇರ್ ಪ್ರದೇಶ ಹೆಚ್ಚಾಗಿದೆ. ಇದೇ ರೀತಿಯಾದರೆ ಅಡಿಕೆ ದರ ಪಾತಾಳಕ್ಕೆ ಕುಸಿಯುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಅಡಿಕೆ ಜತೆಗೆ ಕಾಳುಮೆಣಸು, ಕೋಕೋ, ವೆನಿಲ್ಲಾ, ಶ್ರೀಗಂಧ ಮತ್ತಿತರ ಉಪ ಬೆಳೆಗಳನ್ನು ಸಹ ರೈತರು ಬೆಳೆಯಿರಿ ಎಂದರು.
ಕಳೆದ ಎರಡವರೆ ಮೂರು ತಿಂಗಳು ನೀತಿಸಂಹಿತೆ ಕಾರಣದಿಂದ ಸರ್ಕಾರಿ ಕೆಲಸ ಕಾರ್ಯಗಳು ಸ್ಥಗಿತವಾಗಿದ್ದವು. ಸರ್ಕಾರದ ಗ್ಯಾರೆಂಟಿ ಯೋಜನೆಯ ವಂಚಿತರಿದ್ದರೆ ಅಂತಹವರನ್ನು ಗುರುತಿಸಿ ಸರ್ಕಾರದ ಯೋಜನೆಯನ್ನು ತಲುಪಿಸಬೇಕು. ರಾತ್ರಿ ಹಾಲ್ಟಿಂಗ್ ಬಸ್ ಇರುವ ಊರುಗಳಲ್ಲಿ ಸ್ಥಳೀಯ ಗ್ರಾಮ ಪಂಚಾಯ್ತಿ ಪಿಡಿಓಗಳು ಗಮನ ಹರಿಸಿ ಶೌಚಾಲಯದ ವ್ಯವಸ್ಥೆ ಕಲ್ಪಿಸಬೇಕು. ಅಲ್ಲಿಯವರೆಗೆ ಸ್ಥಳೀಯರು ಸಹಕಾರ ನೀಡಬೇಕು ಎಂದರು.
ಇನ್ನು ಮುಂದೆ ಸಿದ್ದಾಪುರ ತಾಲೂಕಿನ ಹಳ್ಳಿಯಲ್ಲಿ ಮದ್ಯ ಮಾರಾಟ ನಡೆಯದಂತೆ ತಕ್ಷಣ ಕ್ರಮ ಕೈಗೊಳ್ಳಿ. ಮಾರುವವನಿಗೆ ಯಾವ ಅಂಗಡಿಯಿಂದ ಪೂರೈಕೆ ಆಗುತ್ತಿದೆಯೆಂದು ಪತ್ತೆ ಹಚ್ಚಿ ತಹಶೀಲ್ದಾರಗೆ ದೂರು ನೀಡಿ. ಅಂತಹವರ ಅಂಗಡಿ ಪರವಾನಿಗೆ ರದ್ದುಗೊಳಿಸಲು ಕ್ರಮ ಕೈಗೊಳ್ಳಿ ಎಂದು ಅಬಕಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾ ಪಂಚಾಯತನವರು ನಿಮ್ಮ ವ್ಯಾಪ್ತಿ ರಸ್ತೆಗಳಲ್ಲಿ ನೀರು ಹರಿದು ಬರದಂತೆ ನೋಡಿಕೊಳ್ಳಬೇಕು. ಕೇವಲ ಮೇನ್ ರೋಡ್‌ನಲ್ಲಿ ಓಡಾಡುವ ಶಾಸಕ ನಾನಲ್ಲ. ನಾನು ನಿಮ್ಮ ಸೂಪರ್ವೈಸರ್. ಸೂಪರ್ವೈಸರ್ ಶಬ್ದದ ಅರ್ಥ ಚೆನ್ನಾಗಿದೆ. ನಾನು ಸೂಪರ್ವೈಸಿಂಗ್ ಮಾಡುತ್ತೇನೆ. ಪಂಚಾಯತ್ ಮತ್ತು ಲೋಕೋಪಯೋಗಿ ಇಲಾಖೆ ರಸ್ತೆಗಳಲ್ಲಿ ಎಲ್ಲಿಯಾದರೂ ಮಳೆಯ ನೀರು ರೋಡ್ ಮೇಲೆ ಬಂತು ಅಂತಾದರೆ ಮುಂದೆ ಆಗುವ ಆಗುಹೋಗುಗಳಿಗೆ ನೀವೇ ಉತ್ತರ ನೀಡಬೇಕಾಗುತ್ತದೆ. ಅಂತಹುದಕ್ಕೆ ಅವಕಾಶ ಕೊಡಬೇಡಿ ಎಂದರು.
ಈ ವೇಳೆ ತಾಲೂಕಾ ಪಂಚಾಯ್ತಿ ಆಡಳಿತಾಧಿಕಾರಿ ಪಿ.ಬಸವರಾಜ, ಕಾರ್ಯನಿರ್ವಹಣಾಧಿಕಾರಿ ದೇವರಾಜ ಹಿತ್ತಲಕೊಪ್ಪ, ತಹಶೀಲ್ದಾರ ಎಂ.ಆರ್.ಕುಲಕರ್ಣಿ ಉಪಸ್ಥಿತರಿದ್ದರು.