ಶಿರಸಿ: ಸಂಸ್ಕೃತ ಕಲಿತರೆ ಭಾರತೀಯ ಸಂಸ್ಕೃತಿ ಅರ್ಥವಾಗುತ್ತದೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀಮಹಾ ಸ್ವಾಮೀಜಿ ನುಡಿದರು.
ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಇರುವ ಸಂಸ್ಕೃತ ಶೋಧ ಸಂಸ್ಥಾನ ಶನಿವಾರದಿಂದ ಹಮ್ಮಿಕೊಂಡ ರಾಷ್ಟ್ರೀಯ ಮಟ್ಟದ ಜಗತ್ತಿನ ಜ್ಞಾನಕ್ಕೆ, ಪುಸ್ತಕಗಳಿಗೆ ಭಾರತದ ಕೊಡುಗೆಗಳ ಕುರಿತ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಶ್ರೀಗಳು ಆಶೀರ್ವಚನ ನುಡಿದರು.
ಸಂಸ್ಕೃತ ಉಳಿದರೆ ಭಾರತೀಯ ಸಂಸ್ಕೃತಿ ಉಳಿಯುತ್ತದೆ. ಭಾರತದ ಸಂಸ್ಕೃತ ಸಂಸ್ಕೃತಿಗಳ ಅಧ್ಯಯನ ಮಾಡಿದರೆ ಉಳಿದ ಕ್ಷೇತ್ರದ ಸಂಶೋಧನೆ, ಅಧ್ಯಯನಕ್ಕೆ ಬಹಳ ಸಹಕಾರಿ ಆಗಲಿದೆ ಎಂದರು.
ಸಂಸ್ಕೃತ ಶೋಧ ಸಂಸ್ಥಾನ ಸಂಸ್ಥೆಗೆ ಮತ್ತು ಮಠಕ್ಕೆ ನಿಕಟ ಸಂಬಂಧವಿದೆ. ಸಂಸ್ಕೃತ ಶೋಧ ಸಂಸ್ಥಾನದ ಸಂಸ್ಥಾಪಕ ಅಧ್ಯಕ್ಷ ಡಾ. ದಯಾನಂದ ಶಾನಭಾಗರ ಉದ್ದೇಶ ಕಾರ್ಯಗತಗೊಳಿಸಲು ಅವರ ಶಿಷ್ಯ ವೃಂದ ಯತ್ನಿಸುತ್ತಿರುವದು ತುಂಬಾ ಸಂತೋಷ. ಸಂಸ್ಕೃತ ಹಾಗೂ ಭಾರತೀಯ ಸಂಸ್ಕೃತಿ ಪರಿಚಯಿಸುವ ಕಾರ್ಯವನ್ನು ದೇಶಾದ್ಯಂತ ಮಾಡುತ್ತ ಸನಾತನ ಧರ್ಮದ ಉತ್ಕರ್ಷಕ್ಕೆ ಕಾರಣವಾಗುತ್ತಿದೆ. ಭಾರತೀಯ ಪರಂಪರೆ ಉಳಿಸಲು ಒಂದೊಳ್ಳೆ ಮಾರ್ಗ ಎಂದರು.
ಹಿರಿಯ ವಿದ್ವಾಂಸ, ಸೇವಾ ನಿವೃತ್ತ ಉಪಕುಲಪತಿ ರಾಮಚಂದ್ರ ಭಟ್ಟ ಕೋಟೆಮನೆ, ವೇದಾಂತ ಪರಂಪರೆಯು ಭಾರತೀಯರಿಗೆ ಪರಂಪರೆಯ ಕೆನೆ, ಕೊನೆ, ತೆನೆ ಹೌದು. ಅಂತಹ ಕೆನೆಯ ಜಿಲ್ಲೆ ಉತ್ತರ ಕನ್ನಡ. ಉತ್ತರ ಕನ್ನಡ ಮಂಡಲ ಮಹಿಮಾ ಮಂಡಲ. ಇಲ್ಲಿನ ಗ್ರಾಮ ಗ್ರಾಮಗಳಲ್ಲಿ ಪಾಂಡಿತ್ಯ ಉಳ್ಳವರು ಇದ್ದರು ಎಂದು ಬಣ್ಣಿಸಿ, ಇತಿಹಾಸ ಅರಿತು ಮುನ್ನಡೆಯಬೇಕು. ಸಂಸ್ಕೃತಿ ಉಳಿಸಲು ಸಂಸ್ಕೃತ ಉಳಿಸಬೇಕು ಎಂದರು.
ಅಧ್ಯಕ್ಷತೆಯನ್ನು ಸಂಶೋಧನಾ ಸಂಸ್ಥಾನದ ಅಧ್ಯಕ್ಷ ಡಾ. ಜಿ.ಎನ್.ಭಟ್ಟ ಮಾತನಾಡಿ, ಈವರೆಗೆ ಸಂಶೋಧಾನ ಸಂಸ್ಥೆಯು ನಡೆಸಿದ ಸುಧೀರ್ಘ ಕಾರ್ಯ ಚಟುವಟಿಕೆಗಳ ಕುರಿತು ಮಾಹಿತಿ ನೀಡಿ, ಡಾ. ದಯಾನಂದ ಶಾನಭಾಗರ ಕೊಡುಗೆಗಳನ್ನು ಸ್ಮರಿಸಿದರು.
ಬಳಿಕ ನಡೆದ ವಿವಿಧ ಗೋಷ್ಠಿಗಳಲ್ಲಿ ವಿ.ಕೆ. ಹಂಪಿಹೋಳಿ, ವಿನಾಯಕ ಕುಮಾರ ಬಂಡಿ, ನೆದರಲ್ಯಾಂಡಿನಲ್ಲಿ ಸಂಸ್ಕೃತ ಶಾಲೆ ತೆರೆದ ಪದ್ಮಶ್ರೀ ರುಟ್ಜರ್ ಕೊರ್ಟನ್ ಹಾಸ್ಟ, ಎಂ.ಕೆ.ಶ್ರೀಧರ,ಡಾ. ಸುರೇಶ ಮೈಸೂರು, ಡಾ. ಜಿ.ಎನ್.ಭಟ್ಟ ಬೆಂಗಳೂರು, ಡಾ. ವಿನಾಯಕ ಭಟ್ಟ ಗಾಳಿಮನೆ, ಪುಟ್ಟು ಕುಲಕರ್ಣಿ, ಡಾ. ಸುಮಿತ್ರಾ ಭಟ್ಟ ಶಿವಮೊಗ್ಗ, ಡಾ. ಎಂ.ಜಿ.ಹೆಗಡೆ, ಕೇಶವ ಕೊರ್ಸೆ ಇತರರು ಪಾಲ್ಗೊಂಡರು.
ಇದೇ ವೇಳೆ ರಜತ ಪರಂಪರಾ ಸೇರಿದಂತೆ ಹತ್ತು ಕೃತಿ ಬಿಡುಗಡೆಗೊಳಿಸಲಾಯಿತು.ಭಾನುವಾರ ಕೂಡ ವಿದ್ವಾಂಸರಿಂದ ವಿವಿಧ ಗೋಷ್ಟಿಗಳು ನಡೆಯಲಿದೆ. ಮಧ್ಯಾಹ್ನ ೩:೩೦ಕ್ಕೆ ದೆಹಲಿಯ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದ ನಿವೃತ್ತ ಕುಲಪತಿ ಪಿ.ಎನ್.ಶಾಸ್ತ್ರೀ ಸಮಾರೋಪ ಮಾತುಗಳನ್ನು ಆಡಲಿದ್ದಾರೆ. ಕುಡ್ಲಿ ಶೃಂಗಾರಿ ಮಠದ ಮಠಾಧೀಶರಾದ ಶ್ರೀ ಅಭಿನವ ಶಂಕರ ಭಾರತಿ ಸ್ವಾಮೀಜಿ ಸಾನ್ನಿಧ್ಯ ನೀಡಲಿದ್ದಾರೆ.