Slide
Slide
Slide
previous arrow
next arrow

ವೃತ್ತಿಯಿಂದ ನಿವೃತ್ತಿ, ಪ್ರವೃತ್ತಿಯಿಂದ ಸಕ್ರಿಯ: ಡಾ.ಬಾಲಕೃಷ್ಣ ಹೆಗಡೆ

300x250 AD

ಗುರುವಂದನಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಿಂದ ಹೃದಯ ಸ್ಪರ್ಶಿ ಸನ್ಮಾನ

ಶಿರಸಿ: ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವುದೆಂದರೆ ಅದೊಂದು ಜೀವನಾನುಭವ. ಅದು ಸ್ವಚ್ಛತೆ ಇರಬಹುದು, ಆರೋಗ್ಯ, ಶಿಕ್ಷಣ, ಧಾರ್ಮಿಕ, ಆಧ್ಯಾತ್ಮಿಕ, ಪರಿಸರ ಸಂಬಂಧಿ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ನಿಸ್ವಾರ್ಥದಿಂದ ಸೇವೆ ಸಲ್ಲಿಸುವುದೂ ಪರಮ ಧರ್ಮವೇ ಆಗಿದೆ.

ಸಮಾಜ ಸೇವೇಯಲ್ಲೂ ತಮ್ಮದೇ ಛಾಪು ಮೂಡಿಸಿದ ಕಮಲಾ ನೆಹರು ಮಹಿಳಾ ಕಾಲೇಜಿನ ಇತಿಹಾಸದ ಹಿರಿಯ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸುತ್ತಾ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿಗಳಾಗಿಯೂ ಹಲವು ವರ್ಷಗಳಿಂದ ಸೇವೆ ಸಲ್ಲಿಸಿದ, ವಿದ್ಯಾರ್ಥಿನಿಯರಿಗೆ ಅಚ್ಚುಮೆಚ್ಚಿನ ಅಧ್ಯಾಪಕರಾಗಿದ್ದ ಡಾ.ಬಾಲಕೃಷ್ಣ ಹೆಗಡೆ ಅವರು  ಸೇವೆಯಿಂದ ನಿವೃತ್ತಿಯಾಗಿರುವುದು ವಿದ್ಯಾರ್ಥಿ ವಲಯದಲ್ಲಿ ಶೂನ್ಯ ಆವರಿಸಿದಂತೆ ಆಗಿದೆ.  ಇತ್ತೀಚೆಗೆ ಅವರ ಹಳೆಯ ವಿದ್ಯಾರ್ಥಿನಿಯರು ತಮ್ಮನೆಚ್ಚಿನ ಪ್ರೊಫೆಸರಿಗೆ ಹೃದಯಸ್ಪರ್ಶಿ ಸನ್ಮಾನ ಮಾಡಿ ಗೌರವಿಸಿದರು. ಡಾ.ಹೆಗಡೆ ಅವರಿಗೆ  ಕುವೆಂಪು ವಿಶ್ವವಿದ್ಯಾಲಯ ಕೊಡ ಮಾಡುವ ಎನ್.ಎಸ್.ಎಸ್. ಅತ್ಯುತ್ತಮ ಕಾರ್ಯಕ್ರಮಾಧಿಕಾರಿ ಪ್ರಶಸ್ತಿ ಲಭಿಸಿದೆ. ಇದು ಕೇವಲ ಕಾಲೇಜು, ಆಡಳಿತ ಮಂಡಳಿಗಷ್ಟೇ ಅಲ್ಲ ಇಡೀ ಶಿವಮೊಗ್ಗದ ಸೇವಾ ಕ್ಷೇತ್ರಕ್ಕೆ ಸಂದ ಗೌರವವಾಗಿದೆ.

ಡಾ.ಬಾಲಕೃಷ್ಣ ಹೆಗಡೆ ಅವರು ಮೂಲತ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬಾಳಗಾರ ಜೋಗಿಮನೆಯವರು. ಪ್ರಾಥಮಿಕ ವಿದ್ಯಾಭ್ಯಾಸವನ್ನು ಸ್ವ ಗ್ರಾಮದಲ್ಲಿ ಪೂರೈಸಿದ ಇವರು ಮಾಧ್ಯಮಿಕ ಶಿಕ್ಷಣವನ್ನು ಶಿರಸಿಯ ಪ್ರೊಗ್ರೆಸ್ಸಿವ್ ಹೈಸ್ಕೂಲಿನಲ್ಲಿ ಮುಗಿಸಿದವರು. ಬಳಿಕ ಬಿ.ಎ.ಪದವಿಯನ್ನು ಹುಬ್ಬಳ್ಳಿಯ ಅಂಜುಮನ್-ಎ-ಇಸ್ಲಾಂ ಸಂಸ್ಥೆಯಲ್ಲಿ ಪಡೆದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಶಿಕ್ಷಣವನ್ನು ಮತ್ತು ಇತಿಹಾಸ ವಿಷಯದಲ್ಲಿ ಪಿಎಚ್.ಡಿ. ಪದವಿಯನ್ನೂ ಪೂರೈಸಿದವರಾಗಿದ್ದಾರೆ. ಡಾ.ಹೆಗಡೆ ಸರ್ ಅವರು ಕನ್ನಡ, ಹಿಂದಿ, ಇಂಗ್ಲಿಷ್, ಉರ್ದು, ರಷಿಯನ್ ಸೇರಿದಂತೆ ೯-೧೦ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುವ ಸಾಮರ್ಥ್ಯ ಹೊಂದಿದವರಾಗಿದ್ದು ವಿದ್ಯಾರ್ಥಿ/ವಿದ್ಯಾರ್ಥಿನಿಯರ ಮೆಚ್ಚುಗೆಗೆ ಪಾತ್ರರಾಗಿದ್ದವರು. ಅವರು ನಮ್ಮ ದೇಶದ ಅಧಿಕೃತ ಸುದ್ದಿ ಸಂಸ್ಥೆ ಯು.ಎನ್.ಐ.ನ.ಹಿರಿಯ ವರದಿಗಾರರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ಸಾಹಿತ್ಯ, ಸಂಶೋಧನೆ, ನಾಟಕ, ಸಂಸ್ಕೃತಿ, ಕಲೆ, ವಾಸ್ತುಶಿಲ್ಪದ ವಿಷಯದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದವರು.

ವಿದ್ಯಾರ್ಥಿ ದೆಸೆಯಿಂದಲೇ ಸಾಮಾಜಿಕ ಸೇವೆಯಲ್ಲಿ ಆಸಕ್ತಿ ಹೊಂದಿದ್ದ ಇವರು ತಮ್ಮ ಪದವಿ ಶಿಕ್ಷಣದಲ್ಲಿ ಎನ್.ಎಸ್.ಎಸ್.ನಲ್ಲಿ ಸಕ್ರಿಯವಾಗಿ ಭಾಗವಹಿಸಿ ಜನ ಮೆಚ್ಚುಗೆ ಗಳಿಸಿದವರಾಗಿದ್ದಾರೆ. ಕಳೆದ ೮-೯ ವರ್ಷಗಳಿಂದ ಕಮಲಾ ನೆಹರು ಮಹಿಳಾ ಕಾಲೇಜಿನಲ್ಲಿ ಎನ್.ಎಸ್.ಎಸ್.ಕಾರ್ಯಕ್ರಮಾಧಿಕಾರಿಗಳಾಗಿ ಸಮಾಜಕ್ಕೆ ಅಮೋಘ ಸೇವೆ ಸಲ್ಲಿಸಿದ್ದಾರೆ. ಸಮಾಜ ಸೇವೆ ಮತ್ತು ಪರಿಸರ ಸಂರಕ್ಷಣೆಗಾಗಿ ಬೆಸ್ಟ್ ಅಚೀವಸ್೯ ಅವಾರ್ಡಗೂ ಭಾಜನರಾಗಿದ್ದಾರೆ.

ಎನ್.ಎಸ್.ಎಸ್.ನ ಧ್ಯೇಯ ವಾಕ್ಯವಾದ “ನನಗಲ್ಲ ನಿನಗೆ” ಎನ್ನುವ ಮಾತಿನಂತೆ ನಡೆದುಕೊಳ್ಳುತ್ತಿರುವ ಇವರು ಕಾಲೇಜಿನ ಒಳಗೆ ಮತ್ತು ಕಾಲೇಜಿನ ಹೊರಗೆ ಅನನ್ಯ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದವರು. ರಾಷ್ಟ್ರೀಯ ಸೇವಾ ಯೋಜನೆಯ ದಿನ ನಿತ್ಯದ ಕಾರ್ಯಕ್ರಮಗಳ ಜತೆಗೆ ಕಾಲೇಜಿನ ಹೊರಗೆ ಬೇರೆ ಬೇರೆ ಸಾಮಾಜಿಕ ಸೇವಾ ತಂಡಗಳೊಂದಿಗೆ ಸೇರಿಕೊಂಡು ಸಮಾಜೋಪಯೋಗಿಯ ಸಾವಿರಾರು ಕಾರ್ಯಕ್ರಮಗಳಲ್ಲಿ  ಭಾಗವಹಿಸಿದವರಾಗಿದ್ದಾರೆ.

ಕಾಲೇಜಿನಲ್ಲಿ ಪಠ್ಯದ ಜತೆಗೆ ಎನ್.ಎಸ್.ಎಸ್. ಚಟುವಟಿಕೆಗಳಂಥಹ ಪಠ್ಯೇತರ ಚಟುವಟಿಕೆಗಳಲ್ಲಿಯೂ ವಿದ್ಯಾರ್ಥಿನಿಯರಿಗೆ ಪ್ರೇರೇಪಣೆ ನೀಡಿ ಅವರೂ ಸಾಮಾಜಿಕ ಸೇವೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುತ್ತಿದ್ದುದು ಡಾ.ಹೆಗಡೆ ಅವರ ಕರ್ತೃತ್ವ ಶಕ್ತಿಗೆ ಸಾಕ್ಷಿಯಾಗಿದೆ. ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿರುವುದರಿಂದ ಭಾನುವಾರ, ಸರ್ಕಾರಿ ರಜಾದಿನಗಳು ಇತ್ಯಾದಿ ರಜೆಗಳ ಬಗ್ಗೆ ಅವರಿಗೆ ಪರಿವೇ ಇಲ್ಲವಾಗಿದೆ. ನೂರಾರು ವಿದ್ಯಾರ್ಥಿನಿಯರೂ ಇವರ ಜತೆ ಸಾಮಾಜಿಕ ಸೇವೆಯಲ್ಲಿ ಹೆಜ್ಜೆ ಹಾಕುತ್ತ, ಕೈಜೋಡಿಸುತ್ತಿರುವುದು ಇತರರಿಗೆ ಮಾದರಿಯಾಗಿದೆ.

ರಾಷ್ಟ್ರೀಯ  ಸೇವಾ ಯೋಜನೆಯ ಪಿತಾಮಹ ಎಂದೇ ಕರೆಯಲ್ಪಡುವ  ಡಾ.ಎಂ.ಬಿ.ದಿಲ್‌ಷಾದ್ ಅವರಿಂದ ಪ್ರೇರೇಪಿತರಾದ ಇವರು ಚೆನ್ನುಡಿ ಬಳಗ, ನಿರ್ಮಲ ತುಂಗಾ ಅಭಿಯಾನ, ಪರ್ಯಾವರಣ ಸಂರಕ್ಷಣಾ ಗತಿ ವಿಧಿ, ಸಿಹಿಮೊಗೆ ಕ್ರಿಕೆಟ್ ಅಕಾಡೆಮಿ, ಉತ್ತಿಷ್ಠ ಭಾರತ, ಕಣಾದ ಯೋಗ ಮತ್ತು ¸ಸಂಶೋಧನಾ ಸಂಸ್ಥೆ ಹೀಗೆ ಹತ್ತು ಹಲವು ಸಂಘಟನೆಗಳ ಸಹಯೋಗದಲ್ಲಿ ಶಿವಮೊಗ್ಗ ನಗರ ಮತ್ತು ಹೊರ ವಲಯಗಳಲ್ಲಿ ಶ್ರಮದಾನದ ಮೂಲಕ ತಮ್ಮ ಛಾಪನ್ನು ಮೂಡಿಸಿದ ಹೆಗ್ಗಳಿಗೆ ಇವರದ್ದಾಗಿದೆ.

   ತಮ್ಮ ಕಾಲೇಜಿನ ಆವರಣದಲ್ಲಿ ಮಳೆ ನೀರು ಕೊಯ್ಲು, ಸೋಲಾರ್ ಅಳವಡಿಕೆ, ಪ್ಲಾಸ್ಟಿಕ ರಹಿತ ಕ್ಯಾಂಪಸ್ ನಿರ್ಮಾಣ, ಬಯೋ ಕಾಂಪೋಸ್ಟ್ ಅಳವಡಿಕೆ, ಹಸಿರೀಕರಣ ಹೀಗೆ ಹಲವಾರು ಪರಿಸರ ಸ್ನೇಹಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.  ರಾಗಿ ಗುಡ್ಡ, ಬಸವಾಪುರ, ಹಾಯ್ ಹೊಳೆ, ಗಾಜನೂರು, ಕ್ಯಾದಿಗೆ ಕಟ್ಟೆ ಕೆರೆ, ಬಿದಿರೆ ಗ್ರಾಮಗಳು ಅಲ್ಲದೆ ಎಸ್.ಎಸ್.ನ ದತ್ತು ಗ್ರಾಮಗಳಾಗಿದ್ದ ಹೊಸೂಡಿ, ಯಲವಟ್ಟಿ, ಹಾರೋಬೆನವಳ್ಳಿ, ಶೆಟ್ಟಿಹಳ್ಳಿ ಹೊಸೂರು, ದೊಡ್ಡದಾನವಂದಿ,  ಶೆಟ್ಟಿಹಳ್ಳಿ ಹಳೆ ಊರುಗಳಲ್ಲಿ ಸ್ಥಳೀಯ ಗ್ರಾಮದ ಮುಖಂಡರು, ಗ್ರಾಮಸ್ಥರು, ಗ್ರಾಮ ಪಂಚಾಯತಿಗಳ ಸಹಯೋಗದಲ್ಲಿ ಗಿಡ ನೆಡುವ ಹಸಿರೀಕರಣ, ರಸ್ತೆ ದುರಸ್ತಿ, ಸ್ವಚ್ಛತೆ,  ಕೆರೆ ನಿರ್ಮಾಣ, ಕೆರೆ ಅಭಿವೃದ್ಧಿ ಕಾರ್ಯಗಳಲ್ಲೂ ಇವರು ತಮ್ಮ ಎನ್.ಎಸ್.ಎಸ್.ಸ್ವಯಂಸೇವಕಿಯರ ಹಿಂಡು ಕಟ್ಟಿಕೊಂಡು ಸೇವೆ ಸೇವೆ ಸಲ್ಲಿಸುತ್ತಿದ್ದುದು ನಿಜಕ್ಕೂ ಶ್ಲಾಘನೀಯವಾಗಿದೆ.

     ಈ ಹಿಂದೆ ಅತಿಯಾದ ಮಳೆಯಿಂದಾಗಿ ಶಿವಮೊಗ್ಗದಲ್ಲಿ ನೆರೆ ಹಾವಳಿ ಸಂಭವಿಸಿದಾಗ ತಮ್ಮ ಕಾಲೇಜಿನ ಸುಮಾರು ೧೦೦ ಸ್ವಯಂ ಸೇವಕಿಯರೊಂದಿಗೆ ಸುಮಾರು ೧೧ ದಿನಗಳ ಕಾಲ ವಿವಿಧ ಗಂಜಿ, ಪರಿಹಾರ ಕೇಂದ್ರಗಳಲ್ಲಿ ಹಗಲು ರಾತ್ರಿ ಎನ್ನದೆ ಸೇವೆ ಸಲ್ಲಿಸಿದ್ದಲ್ಲದೆ ಗುಂಡಪ್ಪ ಶೆಡ್, ಕುಂಬಾರಗುಂಡಿ, ಬಿ.ಬಿ.ಸ್ಟ್ರೀಟ್, ವಾದಿಹುದಾ ಮೊದಲಾದ ಕಡೆ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದನ್ನು ಅಲ್ಲಿಯ ಜನತೆ ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಅಲ್ಲದೆ ಮಹಾನಗರ ಪಾಲಿಕೆಯ ಆಯುಕ್ತರಾಗಿದ್ದ ಚಾರುಲತಾ ಅವರೂ ಇವರ ಕೆಲಸಕ್ಕೆ ಭೇಷ್ ಎಂದಿದ್ದು ವಿದ್ಯಾರ್ಥಿನಿಯರಿಗೆ ಜೀವನ ಪರ್ಯಂತ ನೆನಪಿರುವಂಥದ್ದಾಗಿದೆ. 

300x250 AD

    ತುಂಗಾ ನದಿ ನೀರು ಕಲುಷಿತಗೊಳ್ಳುತ್ತಿರುವ ಬಗ್ಗೆ ಜಾಗೃತಿ ಮೂಡಿಸಲು ಇತ್ತೀಚೆಗೆ ವಿವಿಧ ಪರಿಸರ ಸಂಘಟನೆಗಳು ಹಮ್ಮಿಕೊಂಡಿದ್ದ ನಿರ್ಮಲ ತುಂಗಾ ಅಭಿಯಾನ- ಗಾಜನೂರಿನಿಂದ ತುಂಗಾ-ಭದ್ರಾ ಸಂಗಮವಾದ ಕೂಡಲಿ ವರೆಗೆ ಹಮ್ಮಿಕೊಂಡ ೪೦ ಕಿ.ಮೀ. ಬೃಹತ್ ಪಾದಯಾತ್ರೆಯಲ್ಲಿ ಈ ಕಾಲೇಜಿನ ಸುಮಾರು ೧೫೦ ವಿದ್ಯಾರ್ಥಿನಿಯರು ಹುಮ್ಮಸ್ಸಿಯಿಂದ ಪಾಲ್ಗೊಂಡು ಸಾರ್ವಜನಿಕರ ಮನ್ನಣೆ, ಮೆಚ್ಚುಗೆಗೆ ಪಾತ್ರರಾಗುವಂತೆ ಮಾಡಿದ ಶ್ರೇಯಸ್ಸು ಡಾ.ಹೆಗಡೆ ಅವರಿಗೆ ಸಲ್ಲುತ್ತದೆ.

     ಮಹಾಮಾರಿ ಕೊವಿಡ್-೧೯ ಸಂದರ್ಭದಲ್ಲಿಯೂ ಇವರು ತಮ್ಮ ಸ್ವಯಂಸೇವಕಿಯರೊಡನೆ ಸುಮಾರು ೨೦೦೦ ಮನೆಗಳಿಗೆ ಭೇಟಿ ಕೊಟ್ಟು ಕೊವಿಡ್ ಬೂಸ್ಟರ್ ಡೋಸ್ ಸಮೀಕ್ಷೆ ಮಾಡಿದ್ದಲ್ಲದೆ ಬೈಪಾಸ್ ರಸ್ತೆಯಲ್ಲಿರುವ ಅಲೆಮಾರಿ ಟೆಂಟ್ ಶಾಲಾ ಮಕ್ಕಳಿಗೆ ವಾರಾಂತ್ಯದ ಪಾಠ ಮಾಡಿ ಅವರಿ ಅಕ್ಷರ ಕಲಿಸುವ, ನಮ್ಮ ದೇಶದ ಸಂಸ್ಕೃತಿ, ಪರಂಪರೆ, ಭೂಗೋಳ ಮೊದಲಾದ ವಿಷಯಗಳ ಬಗ್ಗೆ ಅವರು ಮಾಹಿತಿ ಪಡೆದುಕೊಳ್ಳುವ ಕೆಲಸ ಮಾಡಿ ಸಾರ್ವಜನಿಕರ ಪ್ರಶಂಸೆಗೆ ಒಳಗಾಗಿದ್ದಾರೆ. 

ಯಾವುದೇ ಪ್ರಶಸ್ತಿಗಾಗಲೀ, ಆಡಂಬರಕ್ಕಾಗಲೀ, ತೋರಿಕೆಗಾಗಲೀ ಡಾ.ಹೆಗಡೆ ಕೆಲಸ ಮಾಡದೆ ತಮ್ಮಿಂದ ಸಮಾಜಕ್ಕೆ ಕಿಂಚಿತ್ ಒಳಿತಾಗಲಿ ಎಂಬ ತುಡಿತದಿಂದ ಸಮಾಜ ಸೇವೆ ಮಾಡುತ್ತಿದ್ದಾರೆಯೇ ಹೊರತು ಯಾವುದೇ ಪ್ರತಿಫಲಾಪೇಕ್ಷೆ ಅವರಲ್ಲಿಲ್ಲ ಎನ್ನುವುದು ಅವರ ಕಾರ್ಯಶೈಲಿ, ನಡವಳಿಕೆಯಿಂದಲೇ ತಿಳಿದು ಬರುತ್ತದೆ.

ಅನೇಕ ಶೈಕ್ಷಣಿಕ ಮಂಡಳಿಗಳಲ್ಲಿಯೂ ವಿವಿಧ ಸ್ಥರದ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವ ಇವರು ಕರ್ನಾಟಕ ಹೈಯರ್ ಎಜುಕೇಷನ್ ಕೌನ್ಸಿಲ್ಲಿನ ಎನ್.ಇ.ಪಿ.ಪಠ್ಯಕ್ರಮ ರಚನಾ ಸಮಿತಿಯ ಸದಸ್ಯರಾಗಿಯೂ ಕರ್ತವ್ಯ ನಿರ್ವಹಿಸದ್ದಾರೆ. 250ಕ್ಕೂ ಹೆಚ್ಚು ಶಂಶೋಧನಾ ಲೇಖನಗಳನ್ನು ಮಂಡಿಸಿದ್ದಲ್ಲದೆ ವಿವಿಧ ಪತ್ರಿಕೆ, ನಿಯತಕಾಲಿಕೆಗಳಲ್ಲಿ 1000ಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದಾರೆ.

ಸಾಮಾಜಿಕ, ಪೌರಾಣಿಕ, ಐತಿಹಾಸಿಕ, ಹೊಸ ಅಲೆ ಹೀಗೆ 250 ಕ್ಕೂ ಹೆಚ್ಚು ನಾಟಕಗಳಲ್ಲಿ ಪಾತ್ರ ನಿರ್ವಹಿಸಿ ಜನ ಮೆಚ್ಚುಗೆ ಗಳಿಸಿದ್ದಾರೆ. ಶ್ರೀ ಸಿದ್ಧಾರೂಢ ಮಹಾತ್ಮೆ ಸಿನೆಮಾ, ಕೆಲ ಧಾರಾವಾಹಿಗಳಲ್ಲೂ ಅಭಿನಯಿಸಿದ ವ್ಯಕ್ತಿತ್ವ ಇವರದ್ದು.

     ತಮ್ಮ ನಿಸ್ವಾರ್ಥ ಸಾಮಾಜಿಕ ಸೇವೆಯ ಫಲವಾಗಿ ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನಕ್ಕೂ ಪಾತ್ರರಾಗಿದ್ದಾರೆ. ಅವುಗಳಲ್ಲಿ ಪ್ರಮುಖ ಎಂದರೆ ಶಿವಮೊಗ್ಗದ ಶ್ರೀ ರುದ್ರ ರೂಪಿಣಿ ಮಹಾಂಕಾಳಿ ದೇವಸ್ಥಾನ ಸಮಿತಿಯವರು ನೀಡುವ “ಆಚಾರ್ಯರತ್ನ ಪ್ರಶಸ್ತಿ, ಸಹಾರಾ ಶಿಕ್ಷಣ ಸಂಸ್ಥೆ ಕೊಡ ಮಾಡುವ “ಬೆಸ್ಟ್ ಅಚೀವರ್ಸ ಅವಾಡ್೯”, ಗೋವಾದಲ್ಲಿ ಜರುಗಿದ ಅಂತಾರಾಷ್ಟ್ರೀಯ  ವಿಚಾರಸಂಕಿರಣದಲ್ಲಿ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಬೆಸ್ಟ್ ಪೇಪರ್ ಅವಾರ್ಡ್, ಶಿವಮೊಗ್ಗ ಹವ್ಯಕ ಸಂಘದಿಂದ ಸನ್ಮಾನ, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದಿಂದ ಇಂಜಿನಿಯರ್ಸ ದಿನದ ಸನ್ಮಾನ, ಹಾವೇರಿ ಜಿಲ್ಲಾ ಪ.ಪೂ.ಕಾಲೇಜುಗಳ ಇತಿಹಾಸ ಅಧ್ಯಾಪಕರ ಸಂಘದಿಂದ ಸನ್ಮಾನ ಮೊದಲಾದವುಗಳು ಗಮನ ಸೆಳೆಯುತ್ತವೆ. 

      ವಿಧಾಯಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರ ಪರಿಣಾಮವಾಗಿ ಈ ಪ್ರಶಸ್ತಿ ತಮಗೆ ಲಭಿಸಿದ್ದರಿಂದ ಆ ಎಲ್ಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಹಕರಿಸಿದ ತಮ್ಮ ಕಾಲೇಜಿನ ಹಿಂದಿನ, ಹಾಲಿ,  ಪ್ರಾಚಾರ್ಯರಿಗೆ, ಎನ್.ಇ.ಎಸ್.ಆಡಳಿತ ಮಂಡಳಿಗೆ, ಕುವೆಂಪು ವಿಶ್ವವಿದ್ಯಾಲಯದ ಎನ್.ಎಸ್.ಎಸ್.ಕಾರ್ಯಕ್ರಮ ಸಂಯೋಜನಾಧಿಕಾರಿಗಳಿಗೆ ಡಾ.ಹೆಗಡೆ ಕೃತಜ್ಞತೆ ಸಲ್ಲಿಸುತ್ತಾರಲ್ಲದೆ ಈ ಸಾಧನೆ, ಪ್ರಶಸ್ತಿಗೆ ತಮ್ಮ ನೆಚ್ಚಿನ ವಿದ್ಯಾರ್ಥಿನಿಯರ ಸಹಕಾರ, ಬೆಂಬಲವೇ ಕಾರಣ ಎನ್ನುತ್ತಾರೆ ಅವರು.  ಕಾರ್ಯಕ್ರಮ ಮಾಡುವ ಸದವಕಾಶ ದೊರೆಯದಿದ್ದರೆ ಈ ಪ್ರಶಸ್ತಿ ತಮಗೆ ಲಭಿಸುತ್ತಿರಲಿಲ್ಲ ಎಂಬ ಮಾತನ್ನೂ ಅವರು ಹೇಳುತ್ತಾರೆ. ಇಂಥಹ ನುರಿತ, ಅನುಭವಿ ಪ್ರಾಧ್ಯಾಪಕರು  ಸೇವೆಯಿಂದ ನಿವೃತ್ತರಾಗಿರುವುದು ವಿದ್ಯಾರ್ಥಿ ಸಮೂಹಕ್ಕೆ ದೊಡ್ಡ ಕೊರತೆಯಾಗಿ ಕಂಡರೂ ಸಮಾಜಕ್ತ್ಕೆ ಒಳಿತೇ ಆಯಿತು ಎನ್ನಬಹುದು. ಅವರ ನಿವೃತ್ತಿ ಜೀವನ ಸುಖಕರವಾಗಿರಲೆಂದು ಎಲ್ಲರ ಪರವಾಗಿ ಆಶಿಸುತ್ತೇನೆ.

  ಬರಹ: ಸಂಗೀತಾ ಕುಲಕರ್ಣಿಶಿವಮೊಗ್ಗ.

Share This
300x250 AD
300x250 AD
300x250 AD
Back to top