ಧಾರವಾಡದಲ್ಲಿ 75 ಬೆಂಬಲಿಗರೊಡನೆ ನಾಮಪತ್ರ ಸಲ್ಲಿಸಿದ ಕೆಶಿನ್ಮನೆ | ಜನಾನುರಾಗಿ ವ್ಯಕ್ತಿತ್ವಕ್ಕೆ ಮತದಾರರ ಸಾಥ್
ಶಿರಸಿ: ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಮಂಡಳಿಯ ಚುನಾವಣೆ ಘೋಷಣೆಯಾಗಿದ್ದು, ಜೂ.30ಕ್ಕೆ ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಕೆಗೆ ಶನಿವಾರ ಕಡೆಯ ದಿನವಾಗಿದೆ.
ಈಗಾಗಲೇ ಯಲ್ಲಾಪುರ ಹಾಗು ಸಿದ್ದಾಪುರ ತಾಲೂಕು ವ್ಯಾಪ್ತಿಯಿಂದ ತಲಾ ಮೂರು ಜನರ ನಾಮಪತ್ರಗಳು ಸಲ್ಲಿಕೆಯಾಗಿವೆ. ಶಿರಸಿ ಕ್ಷೇತ್ರದಿಂದ ಹಾಲಿ ನಿರ್ದೇಶಕ ಸುರೇಶ್ಚಂದ್ರ ಕೆಶಿನ್ಮನೆ ಒಟ್ಟೂ 85 ಮತದಾರ ಸದಸ್ಯರ ಪೈಕಿ 75 ಕ್ಕೂ ಹೆಚ್ಚು ಮತದಾರ ಬೆಂಬಲಿಗರೊಂದಿಗೆ ಧಾರವಾಡಕ್ಕೆ ತೆರಳಿ ನಾಮಪತ್ರ ಸಲ್ಲಿಸುವುದರ ಮೂಲಕ ಶಕ್ತಿ ಪ್ರದರ್ಶನ ಮಾಡಿದ್ದಾರೆ.
ಸುರೇಶ್ಚಂದ್ರ ಕೆಶಿನ್ಮನೆ ಗೆಲುವಿಗೆ ಮುನ್ನುಡಿ:
ಕಳೆದೊಂದು ದಶಕದಿಂದ ಹಾಲು ಉತ್ಪಾದನಾ ಕ್ಷೇತ್ರದಲ್ಲಿ ಕೆಶಿನ್ಮನೆ ಅವರ ಕಾರ್ಯವೈಖರಿಯನ್ನು ಬೆಂಬಲಿಸಿ ಪಕ್ಷಾತೀತವಾಗಿ ಬಹುತೇಕ ಮತದಾರ ಸದಸ್ಯರು ಕೆಶಿನ್ಮನೆ ಜೊತೆಗಿರುವುದರ ಮೂಲಕ ಗೆಲುವಿಗೆ ಮುನ್ನುಡಿ ಬರೆದಿದ್ದಾರೆ. ಸುರೇಶ್ಚಂದ್ರ ಹೆಗಡೆ ಸಹಕಾರ ಕ್ಷೇತ್ರದಲ್ಲಿಯೂ ಮುಂಚೂಣಿಯಲ್ಲಿದ್ದು, ಹಾಲು ಉತ್ಪಾದಕರ ಮತ್ತು ಮೀನುಗಾರರ ಕ್ಷೇತ್ರದಿಂದ ಕೆಡಿಸಿಸಿ ಬ್ಯಾಂಕ್ ನಲ್ಲಿ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ತಮ್ಮ ಸಾಮಾಜಿಕ ಕಳಕಳಿಯ ಮೂಲಕ ಜಿಲ್ಲೆಯಲ್ಲಿ ಹೆಸರು ಗಳಿಸಿರುವ ಕೆಶಿನ್ಮನೆ ಕಲೆ, ಸಾಹಿತ್ಯ, ಸಂಗೀತ, ಧಾರ್ಮಿಕ, ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಕೈಲಾದ ಸಹಾಯ, ಸೇವೆ ಸಲ್ಲಿಸುವ ಮೂಲಕ ಜನಾನುರಾಗಿ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಜೊತೆಗೆ ಕಳೆದ ಹತ್ತು ವರ್ಷಗಳ ತಮ್ಮ ಅವಧಿಯಲ್ಲಿ ಹಾಲು ಸಂಘಗಳಿಗೆ ಸ್ವಂತ ಕಟ್ಟಡ, ಹಾಲು ಉತ್ಪಾದಕರಿಗೆ ಆರ್ಥಿಕ ಸಹಾಯ, ಕ್ಷೇತ್ರದಲ್ಲಿ ಹಾಲು ಉತ್ಪಾದನೆಯ ಕುರಿತು ಜಾಗೃತಿ, ಹೈನುಗಾರರಿಗೆ ಒಕ್ಕೂಟದಿಂದ ದೊರೆಯುವ ಅನುಕೂಲಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ ಎಂಬುದು ಅವರ ಬೆಂಬಲಿಗರ ಮಾತಾಗಿದೆ.
ವಿರೋಧಿಗಳ ಕಣ್ಣು ಕೆಂಪಾಗಿಸಿದ್ದು ಸುಳ್ಳಲ್ಲ :
ಪ್ರತಿಬಾರಿಯಂತೆ ಈ ಬಾರಿ ಶಿರಸಿ ಕ್ಷೇತ್ರದಲ್ಲಿ ಅವಿರೋಧ ಆಯ್ಕೆ ನಡೆಯಬಾರದು ಎಂಬ ನಿಟ್ಟಿನಲ್ಲಿ ಸುರೇಶ್ಚಂದ್ರ ಕೆಶಿನ್ಮನೆ ಅವರನ್ನು ನೇರವಾಗಿ ಎದುರಿಸಲಾಗದೇ, ಹಿಂಬಾಗಿಲಿನಿಂದ ವಿರೋಧ ವ್ಯಕ್ತಪಡಿಸುತ್ತಿರುವ ಕೆಲವರು, ಮತ್ತೊಬ್ಬ ಅಭ್ಯರ್ಥಿಯನ್ನು ನಿಲ್ಲಿಸುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂಬ ಮಾಹಿತಿ ಲಭಿಸಿದ್ದು, ಧಾರವಾಡದಲ್ಲಿ ಶುಕ್ರವಾರ ಕೆಶಿನ್ಮನೆ ತಮ್ಮ ಬೆಂಬಲಿಗರೊಡನೆ ಶಕ್ತಿ ಪ್ರದರ್ಶನ ಮಾಡಿದ್ದು, ಅಂತಹ ಹಿತ ಶತ್ರುಗಳ ಕಣ್ಣು ಕೆಂಪಾಗಿಸಿದೆ.