ಸಿದ್ದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ( ರಿ ) ಸಿದ್ದಾಪುರ ತಾಲೂಕು ಪ್ರಗತಿಬಂಧು- ಸ್ವ ಸಹಾಯ ಸಂಘಗಳ ಒಕ್ಕೂಟ ಬೇಡ್ಕಣಿ , ಗ್ರಾಮ ಪಂಚಾಯಿತಿ ಬೇಡ್ಕಣಿ, ಊರ ಕಮಿಟಿ ಬೇಡ್ಕಣಿ, ಕೆರೆ ಅಭಿವೃದ್ಧಿ ಸಮಿತಿ ಬೇಡ್ಕಣಿ ಮತ್ತು ದೇವಸ್ಥಾನ ಅಭಿವೃದ್ಧಿ ಕಮಿಟಿ ಬೇಡ್ಕಣಿ ಇವರ ಸಹಭಾಗಿತ್ವದಲ್ಲಿ ಬೇಡ್ಕಣಿ ಗ್ರಾಮದ ಜೇಡಗೆರೆ ಕೆರೆ ಅಂಗಳದಲ್ಲಿ ಗಿಡ ನಾಟಿ ಕಾರ್ಯಕ್ರಮವನ್ನು ನಡೆಸಲಾಯಿತು.
ಜಿಲ್ಲಾ ನಿರ್ದೇಶಕರಾದ ಎ. ಬಾಬು ನಾಯ್ಕ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮಾರ್ಗದರ್ಶನದಲ್ಲಿ ಪ್ರತಿ ವರ್ಷ ಪರಿಸರ ಕಾರ್ಯಕ್ರಮದ ಮೂಲಕ ಶಾಲಾ ಆವರಣದಲ್ಲಿ, ಸಮುದಾಯ ಭವನ, ದೇವಸ್ಥಾನ ಆವರಣ, ಕೆರೆ ಅಂಗಳದಲ್ಲಿ ಗಿಡ ನಾಟಿ ಮಾಡುವ ಮೂಲಕ ಪರಿಸರ ಸಂರಕ್ಷಣೆಗೆ ಹೆಚ್ಚು ಒತ್ತನ್ನು ಕೊಡುತ್ತಿದ್ದೇವೆ. ಇವತ್ತು ಕೆರೆ ಅಂಗಳದಲ್ಲಿ 100 ಗಿಡವನ್ನು ನಾಟಿ ಮಾಡುತ್ತಿದ್ದು ಆ ಗಿಡದ ರಕ್ಷಣೆ, ಪಾಲನೆ, ಪೋಷಣೆ ನಮ್ಮೆಲ್ಲರ ಜವಾಬ್ದಾರಿ, ಸುಂದರ, ಸ್ವಚ್ಛ ಪರಿಸರಕ್ಕಾಗಿ ನಾವು ಗಿಡ ನೆಟ್ಟು ಪರಿಸರ ಸಂರಕ್ಷಣೆ ಮಾಡಲೇಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಯೋಜನಾಧಿಕಾರಿಗಳಾದ ಗಿರೀಶ್ ಜಿ.ಪಿ.ಸರ್, ಕೆರೆ ಸಮಿತಿ ಅಧ್ಯಕ್ಷರಾದ ಜಯಪ್ರಕಾಶ್, ಗ್ರಾಮ ಪಂಚಾಯತಿ ಸದಸ್ಯರು, ಊರ ಕಮಿಟಿ ಅಧ್ಯಕ್ಷರು/ ಪದಾಧಿಕಾರಿಗಳು, ದೇವಸ್ಥಾನ ಕಮಿಟಿ ಅಧ್ಯಕ್ಷರು/ ಪದಾಧಿಕಾರಿಗಳು, ಒಕ್ಕೂಟದ ಅಧ್ಯಕ್ಷರು/ ಪದಾಧಿಕಾರಿಗಳು ಶೌರ್ಯ ತಂಡದ ನಾಯಕರು/ಸಂಯೋಜಕರು ಹಾಗೂ ಸದಸ್ಯರು, ಗ್ರಾಮಸ್ಥರು ಮೇಲ್ವಿಚಾರಕರು, ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು, ಕೃಷಿ ಮೇಲ್ವಿಚಾರಕರಾದ ಮಹಾದೇವ ಬಿ. ಸ್ವಾಗತಿಸಿದರು. ಮೇಲ್ವಿಚಾರಕಿ ಶ್ರೀಮತಿ ಪೂರ್ಣಿಮಾ ವಂದಿಸಿದರು. ಕೆರೆ ಅಂಗಳದಲ್ಲಿ 100 ವಿವಿಧ ಜಾತಿಯ ಗಿಡವನ್ನು ನಾಟಿ ಮಾಡಲಾಯಿತು.