ಸಿದ್ದಾಪುರ: ಪತಂಜಲಿ ಯೋಗ ಸಮಿತಿ ಮತ್ತು ಮಹಿಳಾ ಪತಂಜಲಿ ಯೋಗ ಸಮಿತಿ ಸಹಯೋಗದಲ್ಲಿ ಸಿದ್ದಾಪುರದ ರಾಘವೇಂದ್ರ ಮಠದಲ್ಲಿ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು 5 ದಿನಗಳ ಯೋಗಭ್ಯಾಸ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಪತಂಜಲಿ ಯೋಗ ಸಮಿತಿ ತಾಲೂಕ ಪ್ರಭಾರಿಗಳಾದ ಮಂಜುನಾಥ್ ನಾಯಕ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾರತೀಯ ಸೇನೆಯಲ್ಲಿ 21 ವರ್ಷಗಳ ಕಾಲ ಯೋಗ ಶಿಕ್ಷಕರಾಗಿ ಕಾರ್ಯನಿರ್ವಹಿಸಿರುವ ರಾಘವೇಂದ್ರ ನಾಯಕ್ ಬಳ್ಳಟ್ಟೆ, ಪ್ರಜಾಪಿತ ಈಶ್ವರಿ ವಿದ್ಯಾಲಯದ ರಾಜಯೋಗಿನಿ ಬಿ.ಕೆ. ದೇವಕಿ ಮತ್ತು ತಾಲೂಕ ಮಹಿಳಾ ಪತಂಜಲಿ ಪ್ರಭಾರಿಗಳಾದ ಶ್ರೀಮತಿ ವೀಣಾ ಆನಂದ್ ಶೇಟ್ ಉಪಸ್ಥಿತರಿದ್ದರು. ಅಧ್ಯಕ್ಷತೆ ವಹಿಸಿದ್ದ ಮಂಜುನಾಥ್ ನಾಯಕ್ ತಮ್ಮ ಪ್ರಸ್ತಾವಿಕ ನುಡಿಗಳಲ್ಲಿ ಸಿದ್ದಾಪುರದಲ್ಲಿ ಯೋಗ ನಡೆದು ಬಂದ ದಾರಿ ಯೋಗದ ಮಹತ್ವ ಕುರಿತು ಹೇಳುತ್ತಾ ಅಷ್ಟಾಂಗ ಯೋಗದ ಅಭ್ಯಾಸದಿಂದ ಮನುಷ್ಯ ಉತ್ತಮ ಜೀವನ ಪದ್ಧತಿ ನಡೆಸಲು ಸಾಧ್ಯ ಎಂದು ಹೇಳಿದರು. ಮುಖ್ಯ ಅತಿಥಿಗಳಾದ ರಾಘವೇಂದ್ರ ನಾಯಕ್ ಮಾತನಾಡಿ ಯೋಗ ಮಾನವನ ಶರೀರವನ್ನು ಸಮತೋಲನದಲ್ಲಿಡಲು ಮನಸ್ಸನ್ನು ಏಕಾಗ್ರತೆಯಲ್ಲಿಡಲು ಸಹಾಯಕವಾಗುತ್ತದೆ ಎಂದು ಹೇಳಿದರು.
ಮತ್ತೋರ್ವ ಅತಿಥಿ ಬಿ.ಕೆ ದೇವಕಿ ಅಕ್ಕನವರು ತಮ್ಮ ಮಾತುಗಳಲ್ಲಿ ಯೋಗ ಕೇವಲ ಬಾಹ್ಯ ಶರೀರಕ್ಕಷ್ಟೇ ಅಲ್ಲದೆ ಆಂತರಿಕ ಶರೀರಕ್ಕೂ ಅವಶ್ಯವಾಗಿದೆ ಎಂದು ಹೇಳಿದರು. ಪ್ರಭಾರಿಗಳಾದ ವೀಣಾ ಆನಂದ್ ಶೇಟ್ ಮಾತನಾಡಿ ಯೋಗ ಒತ್ತಡವನ್ನು ನಿವಾರಿಸುತ್ತದೆ ಮತ್ತು ಶರೀರದ ತ್ರಿದೋಷಗಳನ್ನು ಸಮತೋಲನದಲ್ಲಿಡುತ್ತದೆ. ಮಹಿಳೆಯರನ್ನು ದೈಹಿಕವಾಗಿ ಮಾನಸಿಕವಾಗಿ ಬಲಗೊಳಿಸುತ್ತದೆ ಎಂದು ಹೇಳಿದರು. ಖ್ಯಾತ ಉದ್ಯಮಿಗಳಾದ ಆನಂದ್ ನಾಯ್ಕ್, ಪಟ್ಟಣ ಪಂಚಾಯಿತಿ ಸದಸ್ಯರಾದ ರವಿ ನಾಯ್ಕ್ ಮತ್ತು ನಂದನ್ ಜೋಗುಳೇಕರ್, ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್. ಗೌಡರ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ತಾಲೂಕ ಸಂಚಾಲಕರಾದ ಸೋಮಶೇಖರ್ ಗೌಡರ್ ಸೇರಿದಂತೆ 150ಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಶಿಲ್ಪಾ ಎಂ.ನಾಯ್ಕ್ ಪ್ರಾರ್ಥಿಸಿದರು. ಮಂಗಲಾ ನಾಯ್ಕ್ ನಿರೂಪಿಸಿದರು. ಎಂ.ಎಸ್. ಭಟ್ ಸ್ವಾಗತಿಸಿದರು. ವಿನಾಯಕ್ ಹೆಗಡೆ ವಂದಿಸಿದರು.