ದಾಂಡೇಲಿ: ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ನೂರರಷ್ಟು ಅಂಕ ಪಡೆದ ಜಿಲ್ಲೆಯ 800 ವಿದ್ಯಾರ್ಥಿಗಳನ್ನು ಅಭಿನಂದಿಸಿ ಗೌರವಿಸುವ ಸರಣಿ ಕಾರ್ಯಕ್ರಮ ಜಿಲ್ಲೆಯಾದ್ಯಂತ ತಾಲೂಕುವಾರು ಜೂನ್ 22 ರಿಂದ ನಡೆಯಲಿದೆ ಎಂದು ಉತ್ತರಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್.ವಾಸರೆ ತಿಳಿಸಿದ್ದಾರೆ.
ಈ ಬಗ್ಗೆ ಅವರು ಮಂಗಳವಾರ ನಗರದಲ್ಲಿ ಮಾಧ್ಯಮಕ್ಕೆ ನೀಡಿದ ಪ್ರಕಟಣೆಯಲ್ಲಿ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತನ್ನ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಜನಮನಕ್ಕೆ ಹತ್ತಿರವಾಗಿದೆ. ಸಾಹಿತ್ಯ ಸಮ್ಮೇಳನಗಳ ಜೊತೆಗೆ ಅಕ್ಷರೋತ್ಸವ, ಕರ್ನಾಟಕ ರಾಜ್ಯೋತ್ಸವದ ಭಾಗವಾಗಿ ನವೆಂಬರ್ ತಿಂಗಳಡೀ ಕನ್ನಡ ಕಾರ್ತಿಕ ಅನುದಿನ – ಅನುಸ್ಪಂದನ ಕಾರ್ಯಕ್ರಮ, ಪುಸ್ತಕ ಬಿಡುಗಡೆ, ವಿಚಾರ ಸಂಕಿರಣ, ಕವಿಗೋಷ್ಠಿ, ಉಪನ್ಯಾಸ, ಸಂವಾದ, ಮಹನೀಯರ ಜನ್ಮದಿನಾಚರಣೆಗಳು ಹೀಗೆ ಹಲವಾರು ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಕಳೆದ ಎರಡುವರೆ ವರ್ಷಗಳಲ್ಲಿ ಸುಮಾರು 500 ರಷ್ಟು ಕಾರ್ಯಕ್ರಮಗಳನ್ನು ನಡೆಸಿರುವ ಹೆಮ್ಮೆ ನಮಗಿದೆ.
ಇದೆಲ್ಲದರ ಜೊತೆಗೆ ಕಳೆದ ಮೂರು ವರ್ಷಗಳಿಂದ ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ಪ್ರತಿಶತ ನೂರರಷ್ಟು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸುತ್ತ ಬಂದಿರುವುದು ಪರಿಣಾಮಕಾರಿಯದ ಕಾರ್ಯಕ್ರಮವಾಗಿದೆ. 2022ರಲ್ಲಿ ಸುಮಾರು 1,250 ವಿದ್ಯಾರ್ಥಿಗಳನ್ನು, 2023ರಲ್ಲಿ ಸುಮಾರು 1,100 ವಿದ್ಯಾರ್ಥಿಗಳನ್ನು ಅಭಿನಂದಿಸಿರುವ ನಾವು ಈ ಬಾರಿ 2024ರಲ್ಲಿಯೂ ಕೂಡ ಸುಮಾರು 800 ವಿದ್ಯಾರ್ಥಿಗಳನ್ನು ಜಿಲ್ಲೆಯಾದ್ಯಂತ ತಾಲೂಕುವಾರು ಅಭಿನಂದಿಸಲಿದ್ದೇವೆ. ಕಸಾಪ ತಾಲೂಕು ಘಟಕಗಳ ಸಹಕಾರ ಹಾಗೂ ಸ್ಥಳೀಯ ಸಂಪನ್ಮೂಲಗಳ ನೆರವಿನೊಂದಿಗೆ ಈ ಕಾರ್ಯಕ್ರಮವನ್ನು ಸಂಘಟಿಸಲಾಗುತ್ತಿದ್ದು, ಕನ್ನಡ ಭಾಷಾ ವಿಷಯದಲ್ಲಿ ಸಾಧನೆ ಮಾಡಿದವರನ್ನು, ಮಾಡುವವರನ್ನು ಇನ್ನಷ್ಟು ಉತ್ತೇಜಿಸಬೇಕೆಂಬುದೇ ಈ ಕಾರ್ಯಕ್ರಮದ ಆಶಯವಾಗಿದೆ ಎಂದು ವಾಸರೆ ತಿಳಿಸಿದ್ದಾರೆ.
ಜೂನ್ 22 ರಂದು ಶನಿವಾರ ಮುಂಜಾನೆ 10 ಗಂಟೆಗೆ ಯಲ್ಲಾಪುರದ ಟಿ.ಎಮ್.ಎಸ್. ಸಭಾಂಗಣದಲ್ಲಿ, ಮಧ್ಯಾಹ್ನ 3.30 ಕ್ಕೆ ಮುಂಡಗೋಡ ತಾಲೂಕಿನ ಕರಗಿನಕೊಪ್ಪದ ಮುರಾರ್ಜಿ ವಸತಿ ಶಾಲೆಯಲ್ಲಿ, ಜೂನ್ 24 ರಂದು ಮುಂಜಾನೆ 10.30 ಗಂಟೆಗೆ ಕಾರವಾರದ ಹಿಂದೂ ಹೈಸ್ಕೂಲ್ ಸಭಾಭವನದಲ್ಲಿ, ಜೂನ್ 25 ರಂದು ಮುಂಜಾನೆ 10ಕ್ಕೆ ಸಿದ್ದಾಪುರದ ಪ್ರಶಾಂತಿ ವಿದ್ಯಾಕೇಂದ್ರ ಸಭಾಭವನದಲ್ಲಿ , ಮಧ್ಯಾಹ್ನ 3.30ಕ್ಕೆ ಶಿರಸಿಯ ನೆಮ್ಮದಿ ಕುಟೀರ ರಂಗಧಾಮದಲ್ಲಿ, ಜೂನ್ 26ರಂದು ಮಧ್ಯಾಹ್ನ 3 ಗಂಟೆಗೆ ಹಳಿಯಾಳದ ಶಿವಾಜಿ ಪ್ರೌಢಶಾಲೆ ಸಭಾಭವನದಲ್ಲಿ, ಜೂನ್ 27 ರಂದು ಮುಂಜಾನೆ 10.30ಕ್ಕೆ ಜೋಯಿಡಾದ ಶ್ರೀರಾಮ ಪ್ರೌಢಶಾಲೆ ಸಭಾಭವನದಲ್ಲಿ, ಮಧ್ಯಾಹ್ನ 3.30ಕ್ಕೆ ದಾಂಡೇಲಿಯ ಜನತಾ ವಿದ್ಯಾಲಯ ಸಭಾಭವನದಲ್ಲಿ, ಜೂನ್ 28 ರಂದು ಮಂಜಾನೆ 9.30 ಕ್ಕೆ ಅಂಕೋಲಾದ ಪಿ.ಎಮ್. ಹೈಸ್ಕೂಲ್ ಸಭಾಭವನದಲ್ಲಿ ಮದ್ಯಾಹ್ನ 3 ಗಂಟೆಗೆ ಕುಮಟಾದ ನೆಲ್ಲಿಕೇರಿಯ ಕರ್ನಾಟಕ ಪಬ್ಲಿಕ್ ಸ್ಕೂಲ್ ಸಭಾಭವನದಲ್ಲಿ, ಜೂನ್ 29ರಂದು ಮುಂಜಾನೆ 10.30ಕ್ಕೆ ಹೊನ್ನಾವರದ ನ್ಯೂ ಇಂಗ್ಲೀಷ್ ಸ್ಕೂಲ್ನಲ್ಲಿ, ಮಧ್ಯಾಹ್ನ 3 ಗಂಟೆಗೆ ಭಟ್ಕಳ ತಾಲೂಕಿನ ಶಿರಾಲಿಯ ಜನತಾ ವಿದ್ಯಾಲಯದಲ್ಲಿ ಅಭಿನಂದನಾ ಕಾರ್ಯಕ್ರಮಗಳು ನಡೆಯಲಿವೆ.
ಎಸ್.ಎಸ್.ಎಲ್.ಸಿ.ಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ಪ್ರತಿಶತ ನೂರರಷ್ಟು ಅಂಕ ಪಡೆದ ಎಲ್ಲ ವಿದ್ಯಾರ್ಥಿಗಳು ಅಥವಾ ಅವರ ಪಾಲಕರು ತಮ್ಮ ತಮ್ಮ ತಾಲೂಕಿನಲ್ಲಿ ನಿಗದಿಯಾದ ದಿನದಂದು ನಡೆಯುತ್ತಿರುವ ಈ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಗೌರವ ಸ್ವೀಕರಿಸುವಂತೆಯೂ, ಸಾರ್ವಜನಿಕರು, ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರೋತ್ಸಾಹಿಸುವಂತೆಯೂ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಮನವಿ ಮಾಡಿಕೊಂಡಿದ್ದಾರೆ.