ಜೋಯಿಡಾ : ಜಿಲ್ಲಾ ಪಂಚಾಯತ್ ಉತ್ತರ ಕನ್ನಡ, ತಾಲೂಕು ಪಂಚಾಯತ್ ಜೋಯಿಡಾ ಮತ್ತು ಜೋಯಿಡಾ ಗ್ರಾಮ ಪಂಚಾಯತ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಜೋಯಿಡಾ ತಾಲೂಕು ಕೇಂದ್ರದಲ್ಲಿರುವ ಗ್ರಂಥಾಲಯ ಅರಿವು ಕೇಂದ್ರದಲ್ಲಿ ‘ಗ್ರಂಥಮಿತ್ರ’ ಅಭಿಯಾನ ಕಾರ್ಯಕ್ರಮಕ್ಕೆ ಶನಿವಾರ ಚಾಲನೆಯನ್ನು ನೀಡಲಾಯಿತು.
ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಪ್ರಕಾಶ್ ಹಾಲಮ್ಮನವರ್, ಪ್ರತಿಯೊಬ್ಬರ ಜ್ಞಾನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಗ್ರಂಥಾಲಯಗಳ ಕೊಡುಗೆ ಅಪಾರವಾಗಿದೆ. ಗ್ರಂಥಾಲಯವೆಂದರೆ ಕೇವಲ ಪುಸ್ತಕ ಮಾತ್ರವಲ್ಲದೇ, ಅಲ್ಲಿ ಕೌಶಲ್ಯ ಮತ್ತು ಚಟುವಟಿಕೆ ಕಲಿಯುವ ವಾತಾವರಣವಿರುತ್ತದೆ. ಗ್ರಂಥಾಲಯದಲ್ಲಿ ಎಲ್ಲಾ ವರ್ಗದ, ಎಲ್ಲ ವಯಸ್ಸಿನ ಜನರು ಬಂದು ಓದಲು ಅವಕಾಶವಿದೆ ಎಂದು ಹೇಳಿ, ಈ ಭಾಗದ ಜನತೆ ಅದರಲ್ಲಿ ವಿಶೇಷವಾಗಿ ಯುವ ಜನತೆ ಗ್ರಂಥಾಲಯದ ಈ ಪ್ರಯೋಜನವನ್ನು ಪಡೆದುಕೊಂಡು ಶೈಕ್ಷಣಿಕವಾಗಿ ಉನ್ನತಿಯನ್ನು ಸಾಧಿಸಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಬಶೀರ್ ಅಹ್ಮದ್ ಶೇಖ್ ಮಾತನಾಡಿ, ಒಂದು ಊರಿನ ಪ್ರಗತಿಯಲ್ಲಿ ಗ್ರಂಥಾಲಯದ ಪಾತ್ರ ಬಹುಮುಖ್ಯವಾಗಿದೆ. ಪ್ರತಿಯೊಬ್ಬ ವ್ಯಕ್ತಿಯ ಜ್ಞಾನಮಟ್ಟದ ಸುಧಾರಣೆಗೆ ಗ್ರಂಥಾಲಯಗಳು ಪರಿಣಾಮಕಾರಿಯಾಗಿದೆ. ದಿನಪತ್ರಿಕೆಗಳಿಂದ ಹಿಡಿದು ಎಲ್ಲ ರೀತಿಯ ಪುಸ್ತಕಗಳು ಒಂದೇ ಸೂರಿನಡಿ ಓದಲು ಸಿಗುವುದು ಗ್ರಂಥಾಲಯದಲ್ಲಿ ಮಾತ್ರ ಎಂದರು.
ಜೋಯಿಡಾದ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕರಾದ ಎನ್.ಆರ್. ಅಕ್ಕಿ ಮಾತನಾಡಿ, ಗ್ರಂಥಾಲಯದ ಮಹತ್ವವನ್ನು ಎಲ್ಲರೂ ತಿಳಿದುಕೊಳ್ಳಬೇಕು ಹಾಗೂ ತಮ್ಮ ಮಕ್ಕಳನ್ನು ಗ್ರಂಥಾಲಯಕ್ಕೆ ಕಳುಹಿಸಿಕೊಡುವ ಮೂಲಕ ಮಕ್ಕಳ ಜ್ಞಾನಮಟ್ಟವನ್ನು ವಿಸ್ತಾರಗೊಳಿಸಲು ಮುಂದಾಗಬೇಕೆಂದು ಕರೆ ನೀಡಿದರು.
ಆಕಾಂಕ್ಷಾ ಪರಿವಾರದ ಸಂಯೋಜಕರಾದ ಶುಭಂ ಅವರು ಮಾತನಾಡಿ, ಈಗಿನ ವಿದ್ಯಾರ್ಥಿಗಳು ದಿನಪತ್ರಿಕೆ, ಪುಸ್ತಕಗಳನ್ನು ಓದದೇ ಇರುವುದರಿಂದ ಅವರಿಗೆ ಸಾಮಾನ್ಯ ಜ್ಞಾನದ ಕೊರತೆ ಉಂಟಾಗುತ್ತದೆ. ಆದ್ದರಿಂದ ಆಕಾಂಕ್ಷಾ ಸಂಸ್ಥೆಯು ಯಾವುದೇ ಪ್ರತಿಫಲವನ್ನು ಬಯಸದೇ ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ಗ್ರಂಥಾಲಯ ಪ್ರಾರಂಭಿಸುವ ಮೂಲಕ ಅವರಿಗೆ ಶಿಕ್ಷಣ, ಕೌಶಲ್ಯ ನೀಡುತ್ತಾ ಬರುತ್ತಿದೆ ಎಂದರು.
ಸ್ಥಳೀಯ ಶ್ರೀ ರಾಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಆರ್.ಎಸ್. ನಾಯ್ಕ ಹಾಗೂ ಶಿಕ್ಷಕರು, ಎನ್ಎಸ್ಎಸ್ ಸ್ವಯಂಸೇವಕರು, ಗ್ರಂಥಾಲಯದ ಮೇಲ್ವಿಚಾರಕರು ಮತ್ತು ಶಾಲಾ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಜೋಯಿಡಾ ಗ್ರಾಮ ಪಂಚಾಯತ್ ಪಿಡಿಒ ಮೋಹನ್ ಡೊಂಬರ್ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.