ಶಿರಸಿ: ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬಸ್ ಪಾಸ್ ಅವಧಿಯನ್ನು ಆಗಸ್ಟ್ ತಿಂಗಳಿನವರೆಗೂ ವಿಸ್ತರಿಸಿ ದೂರದ ಊರುಗಳಿಂದ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಶಿರಸಿ ನಗರದ ವತಿಯಿಂದ ಶುಕ್ರವಾರ ಸಹಾಯಕ ಆಯುಕ್ತರ ಮೂಲಕ ಸಾರಿಗೆ ಸಚಿವ ರಾಮಲಿಂಗರೆಡ್ಡಿಯವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಬಸ್ ಪಾಸ್ ಸಮಸ್ಯೆಯಿಂದ ವಿದ್ಯಾರ್ಥಿಗಳ ಪರಿಸ್ಥಿತಿ ಅತಂತ್ರವಾಗಿದೆ. ಅದೆಷ್ಟೋ ವಿದ್ಯಾರ್ಥಿಗಳು ಸರ್ಕಾರ ಕಲ್ಪಿಸಿರುವ ವಿದ್ಯಾರ್ಥಿ ಬಸ್ ಪಾಸ್ ನ ಅನುಕೂಲ ಪಡೆದುಕೊಂಡು ದೂರದ ಹಳ್ಳಿಗಳಿಂದ ಶಾಲಾ ಕಾಲೇಜಿಗೆ ಬಂದು ಶಿಕ್ಷಣ ಪಡೆಯುತ್ತಿದ್ದರು. ಆದರೆ ಈ ವರದಾನ ಇದೀಗ ಬಹಳಷ್ಟು ವಿದ್ಯಾರ್ಥಿಗಳ ಪಾಲಿಗೆ ಇಲ್ಲವಾಗಿದೆ.
ಈಗಾಗಲೇ ಪದವಿ ಅಂತಿಮ ವರ್ಷದಲ್ಲಿರುವ ವಿದ್ಯಾರ್ಥಿಗಳ ಬಸ್ ಪಾಸ್ ಮಾರ್ಚ್ ತಿಂಗಳ ಅಂತ್ಯಕ್ಕೆ ಮುಗಿದಿತ್ತು. ಸಾರಿಗೆ ಸಂಸ್ಥೆ 290 ರೂಪಾಯಿಯನ್ನು ಪಡೆದುಕೊಂಡು ಮೇ 31 ರವರೆಗೂ ಪಾಸ್ ನ ಅವಧಿಯನ್ನು ವಿಸ್ತರಿಸಿತ್ತು. ಆದರೆ ಪದವಿ ಕಾಲೇಜಿನ ತರಗತಿಗಳು ಚಾಲ್ತಿಯಲ್ಲಿದ್ದು ಆಗಸ್ಟ್ ತಿಂಗಳ ಅಂತ್ಯದವರೆಗೂ ಸೆಮಿಸ್ಟರ್ ಪರೀಕ್ಷೆಗಳು ನಡೆಯಲಿವೆ. ಆದರೆ ಸಾರಿಗೆ ಸಂಸ್ಥೆ ಪಾಸ್ ವಿಸ್ತರಿಸದೆ ಇರುವುದರಿಂದ ದೂರದ ಊರುಗಳಿಂದ ಬರುವ ಸಾವಿರಾರು ವಿದ್ಯಾರ್ಥಿಗಳು ದಿನನಿತ್ಯ ನೂರಾರು ರೂಪಾಯಿ ತೆತ್ತು ಕಾಲೇಜಿಗೆ ಬರಲು ಹೆಣಗಾಡುತ್ತಿದ್ದಾರೆ. ಸರ್ಕಾರಿ ಕಾಲೇಜಿನ ವಾರ್ಷಿಕ ಕಾಲೇಜು ಶುಲ್ಕಕ್ಕಿಂತಲೂ ಬಸ್ ಟಿಕೆಟ್ ನ ಹೊರೆಯೇ ವಿದ್ಯಾರ್ಥಿಗಳಿಗೆ ಹೊರೆಯಾಗಿದೆ. ಈ ಕುರಿತು ಸಂಬಂಧಪಟ್ಟವರನ್ನು ವಿಚಾರಿಸಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಬಡ ವಿದ್ಯಾರ್ಥಿಗಳು ಬಸ್ ಪಾಸ್ ಇಲ್ಲದೆ ಹಳ್ಳಿಗಳಿಂದ ದಿನ ನಿತ್ಯ ಕಾಲೇಜಿಗೆ ಬರಲಾಗುತ್ತಿಲ್ಲ ಎಂಬುದಾಗಿ ಅಳಲು ತೋಡಿಕೊಂಡಿದ್ದಾರೆ. ನೂರಾರು ವಿದ್ಯಾರ್ಥಿಗಳು ಈ ಕಾರಣದಿಂದಲೇ ಕಾಲೇಜಿಗೆ ಗೈರಾಗುತ್ತಿದ್ದಾರೆ.
ಈಗಾಗಲೇ ಸರ್ಕಾರದ ಶಕ್ತಿ ಯೋಜನೆಯಿಂದ ಮಹಿಳೆಯರು ಉಚಿತ ಬಸ್ ಪ್ರಯಾಣ ಕೈಗೊಳ್ಳುತ್ತಿದ್ದಾರೆ. ಆದರೆ ನಿಗದಿತ ಶುಲ್ಕ ಭರಿಸಿದರೂ ನಮಗೆ ಬಸ್ ಪಾಸ್ ವಿಸ್ತರಣೆ ಸಾಧ್ಯವಾಗುತ್ತಿಲ್ಲ ಎಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಎಂ.ಇ.ಎಸ್. ವಾಣಿಜ್ಯ ಕಾಲೇಜಿನ ಅಂತಿಮ ವರ್ಷದ ನೂರಾರು ವಿದ್ಯಾರ್ಥಿಗಳು ವಿಷಾದ ವ್ಯಕ್ತಪಡಿಸಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು, ಜನ ಪ್ರತಿನಿಧಿಗಳು ಈ ಬಗ್ಗೆ ಶೀಘ್ರವೇ ಗಮನ ಹರಿಸಿ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಬೇಕೆಂಬುದು ಪಾಲಕರ ಆಕ್ರೋಶವಾಗಿದೆ.
ಈ ಸಂದರ್ಭದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ದರ್ಶನ್ ಹೆಗಡೆ, ಪ್ರಮುಖರಾದ ಸಂಜಯ್ ಗಾಂವಕರ್, ಶಿರಸಿ ನಗರ ಕಾರ್ಯದರ್ಶಿ ಪ್ರಸನ್ನ ಮರಾಠಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಅಜಿತ್ ದೊಡ್ಮನಿ ಸೇರಿದಂತೆ ಇನ್ನೂ ಹಲವಾರು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.