ದಾಂಡೇಲಿ: ಜಿ+2 ಆಶ್ರಯ ಮನೆ ವಿತರಣೆಗೆ ಮತ್ತು ಕರ್ನಾಟಕ ಗೃಹ ಮಂಡಳಿಯ ನಿವೇಶನಕ್ಕೆ ಆಗ್ರಹಿಸಿ ದಾಂಡೇಲಿ ತಾಲೂಕು ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯು ನಗರಸಭೆಯ ಮುಂಭಾಗದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ದಾಂಡೇಲಿ ತಾಲೂಕು ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷರಾದ ಅಕ್ರಂ ಖಾನ್, ಉಪಾಧ್ಯಕ್ಷರಾದ ಅಶೋಕ್ ಪಾಟೀಲ್ ಮತ್ತು ಮಾನವ ಹಕ್ಕುಗಳ ಆಯೋಗ ಸಂಘಟನೆಯ ರಾಜ್ಯ ನಿರ್ದೇಶಕರಾದ ಫಿರೋಜ್ ಖಾನ್ ಪಿರ್ಜಾದೆ ಅವರು ಜಿ+2 ಆಶ್ರಯ ಮನೆ ವಿತರಣೆಗೆ ಮತ್ತು ಕರ್ನಾಟಕ ಗೃಹ ಮಂಡಳಿಯ ನಿವೇಶನಕ್ಕಾಗಿ ಆಗ್ರಹಿಸಿ ಸಂಘಟನೆಯ ನೇತೃತ್ವದಲ್ಲಿ ಸಾಕಷ್ಟು ಬಾರಿ ಹೋರಾಟ ಮಾಡುವುದರ ಜೊತೆಯಲ್ಲಿ ಮನವಿಗಳನ್ನು ನೀಡುತ್ತಲೆ ಬಂದಿದ್ದೇವೆ. ಜಿ+2 ಆಶ್ರಯ ಮನೆಗಳಲ್ಲಿ ಸಂಪೂರ್ಣ ನಿರ್ಮಾಣಗೊಂಡ 144 ಮನೆಗಳನ್ನು ಕೂಡಲೇ ವಿತರಣೆಗೆ ಅಗತ್ಯ ಕ್ರಮವನ್ನು ಕೈಗೊಳ್ಳಬೇಕು ಅದಾದ ಬಳಿಕ ಕರ್ನಾಟಕ ಗೃಹ ಮಂಡಳಿಗೆ ಅರ್ಜಿ ಸಲ್ಲಿಸಿದ 3400 ಅರ್ಜಿದಾರರಿಗೆ ಕೆಎಚ್ಬಿ ನಿವೇಶನಗಳನ್ನು ಕೊಡುವ ನಿಟ್ಟಿನಲ್ಲಿ ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು.
ನಂತರ ಪೌರಾಯಕ್ತರಾದ ಆರ್.ಎಸ್. ಪವಾರ್ ದಾಂಡೇಲಿ ತಾಲೂಕು ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯ ಪದಾಧಿಕಾರಿಗಳ ಜೊತೆ ಮಾತನಾಡಿ ಈ ಬಗ್ಗೆ ಶಾಸಕರಾದ ಆರ್.ವಿ.ದೇಶಪಾಂಡೆ ಅವರಿಗೆ ಮತ್ತು ಗೃಹ ಮಂಡಳಿಯ ಅಧಿಕಾರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಚರ್ಚೆ ನಡೆಸಿ, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ದಾಂಡೇಲಿ ತಾಲೂಕು ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಫಲಾನುಭವಿಗಳು ಉಪಸ್ಥಿತರಿದ್ದರು.