ಜನತಾ ದರ್ಶನ ಕಾರ್ಯಕ್ರಮದ ಮೂಲ ಉದ್ದೇಶವೇ, ಸ್ಥಳದಲ್ಲಿಯೇ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು, ಒಂದು ವೇಳೆ ಸ್ಥಳದಲ್ಲೇ ಪರಿಹಾರ ಸಾಧ್ಯವಾಗದಿದ್ದಲ್ಲಿ ನಿಗಧಿತ ಅವಧಿಯಲ್ಲಿ ಆ ಸಮಸ್ಯೆಗೆ ಸೂಕ್ತ ಪರಿಹಾರ ನೀಡುವುದು. ಇದಕ್ಕೆ ಪೂರಕವೆಂಬಂತೆ, ದಿನಾಂಕ 19/12/2023 ರಂದು ಜೋಯಿಡಾ ತಾಲೂಕಿನ ಬಜಾರಕುಣಂಗ ಗ್ರಾಮದಲ್ಲಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರ ಅಧ್ಯಕ್ಷತೆಯಲ್ಲಿ ನಡದಿದ್ದ , ಜನತಾ ದರ್ಶನ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ನೀಡಿದ್ದ ಮನವಿ ಕುರಿತಂತೆ ಈಗ ಫಲಶೃತಿ ದೊರೆತಿದೆ.
ಜೋಯಿಡಾ ತಾಲೂಕಿನ ಬಜಾರಕುಣಂಗ ಗ್ರಾಮ ಪಂಚಾಯತ ವ್ಯಾಪ್ತಿಗೆ ಬರುವ ಅಸುಳ್ಳಿ, ಡಿಗ್ಗಿ ಗ್ರಾಮಗಳಲ್ಲಿ ಸುಮಾರು 400 ಕುಟುಂಬಗಳಿದ್ದು ಈ ಭಾಗದಲ್ಲಿ ನ್ಯಾಯಬೆಲೆ ಅಂಗಡಿ ಇಲ್ಲದೇ ಇರುವುದರಿಂದ, ಈ ಗ್ರಾಮಗಳ ಪಡಿತರದಾರರು ದೂರದ ತೆರಾಳಿ ಗ್ರಾಮದ ನ್ಯಾಯ ಬೆಲೆಯ ಅಂಗಡಿಯ ಮುಖಾಂತರ ಆಹಾರ ಧಾನ್ಯಗಳನ್ನು ಪಡೆಯಬೇಕಿತ್ತು. ಆದರೆ ಇವರಿಗೆ ನೀಡಿರುವ ನ್ಯಾಯಬೆಲೆ ಅಂಗಡಿಯು ಸುಮಾರು 25 ಕಿ.ಮೀ ದೂರದಲ್ಲಿದ್ದು , ಮಳೆಗಾಲದ ಸಮಯದಲ್ಲಿ ರಸ್ತೆ ಸಂಪರ್ಕದ ಕೊರತೆ ಇರುವುದರಿಂದ ಪಡಿತರ ಧಾನ್ಯಗಳನ್ನು ಕಾಲ್ನಡಿಗೆಯಲ್ಲಿ ಹೊತ್ತು ತರಬೇಕಾಗಿರುತ್ತದೆ. ಆದ್ದರಿಂದ ಸಮೀಪದ ದೂದಮಾಳ (ಸಕಲವಾಡಾ)ದಲ್ಲಿ ಹೊಸ ನ್ಯಾಯಬೆಲೆ ಅಂಗಡಿ ಪ್ರಾರಂಭಿಸುವ ಕುರಿತು ಜನತಾ ದರ್ಶನ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಮನವಿಯನ್ನು ಸಲ್ಲಿಸಿದ್ದರು.
ಈ ಸಮಸ್ಯೆಯ ಕುರಿತಂತೆ ಆದ್ಯತೆಯ ಮೇಲೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ತಹಶೀಲ್ದಾರ್ ಜೋಯಿಡಾರವರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದ್ದರು. ಅದರಂತೆ ತಹಶೀಲ್ದಾರ ಜೋಯಿಡಾರವರು ಗ್ರಾಮಸ್ಥರ ಮನವಿಯನ್ನು ಪರಿಶೀಲಿಸಿ, ಬಜಾರಕುಣಂಗ ವ್ಯಾಪ್ತಿಗೆ ಬರುವ ಗ್ರಾಮಗಳಾದ ಅಸುಳ್ಳಿ (ದೂದಮಳಾ, ಸಿಸೈ, ಕರಂಜೆ, ಕಡ್ನೆ ಮಾಯೆರೆ) ಹಾಗೂ ಡಿಗ್ಗಿ (ಬೊಂಡೇಲಿ)ಯಲ್ಲಿ ಒಟ್ಟು 183 ಪಡಿತರದಾರರಿದ್ದು, ಇವರ ಗ್ರಾಮಗಳು ದಟ್ಟವಾದ ಗುಡ್ಡಗಾಡು ಪ್ರದೇಶದಿಂದ ಕೂಡಿದ್ದು ದೂರದ ತೆರಾಳಿ ಗ್ರಾಮದ ನ್ಯಾಯ ಬೇಲೆಯ ಅಂಗಡಿಯ ಮುಖಾಂತರ ಆಹಾರ ದಾನ್ಯಗಳು ಪಡೆಯಲು ಸುಮಾರು 25 ಕಿ.ಮೀ ದೂರ ಕ್ರಮಿಸಬೇಕಾಗಿದ್ದು ಮಳೆಗಾಲದ ಸಮಯದಲ್ಲಿ ರಸ್ತೆ ಸಂಪರ್ಕದ ಕೊರತೆ ಇರುವುದರಿಂದ ಪಡಿತರ ಧಾನ್ಯ ಪಡೆಯಲು ತೊಂದರೆಯಾಗುತ್ತಿರುತ್ತದೆ ಎಂದು ವರದಿ ನೀಡಿದ್ದರು.
ಈ ಗ್ರಾಮಗಳ ಪಡಿತರ ಚೀಟಿದಾರರಿಗೆ ಅನಾನುಕೂಲವಾಗುತ್ತಿರುವ ಹಿನ್ನೆಲೆಯಲ್ಲಿ ಪಡಿತರ ಚೀಟಿದಾರರ ಹಿತದೃಷ್ಟಿಯಿಂದ ಸದರಿ ಪ್ರದೇಶದಲ್ಲಿ ವಾಸಿಸುವ ಜನರನ್ನು ದಟ್ಟವಾದ ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುವ ಜನರು ಎಂದು ಪರಿಗಣಿಸಿ ಇದೊಂದು ವಿಶೇಷವಾದ ಪ್ರಕರಣವೆಂದು ಭಾವಿಸಿ ದೂದಮಾಳ (ಸಕಲವಾಡಾ) ಮಜರೆಯಲ್ಲಿ ಹೊಸದಾಗಿ ನ್ಯಾಯಬೆಲೆ ಅಂಗಡಿ ತೆರೆಯುವ ಕುರಿತು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆವತಿಯಿಂದ ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗಿತ್ತು.
ಅದರಂತೆ ಪಡಿತರ ಅಂಗಡಿ ತೆರೆಯುವ ಕುರಿತಂತೆ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಪರಿಶೀಲಿಸಿ , ಹೊಸ ನ್ಯಾಯಬೆಲೆ ಅಂಗಡಿ ಮಂಜೂರಾತಿಗೆ ದಾಖಲಾತಿಗಳನ್ನು ಪರಿಶೀಲಿಸಲು ಜೂನ್ 10 ರಂದು ದಿನಾಂಕ ನಿಗದಿಪಡಿಸಿದ್ದು, ಸದರಿ ದಿನದಂದು ಲಾಟರಿ ಎತ್ತುವ ಮೂಲಕ ಓರ್ವ ಅರ್ಜಿದಾರರನ್ನು ಆಯ್ಕೆ ಮಾಡಲಾಗಿದೆ.
ಸಾರ್ವಜನಿಕ ಹಿತದೃಷ್ಟಿಯಿಂದ ಸದರಿ ಪ್ರಕರಣವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ , ದೂದಮಾಳ (ಸಕಲವಾಡಾ) ಮಜರೆಯಲ್ಲಿ , ಹೊಸ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಲು ಹಾಗೂ ಸದರಿ ಸ್ಥಳದಲ್ಲಿ ಯಾವುದೇ ಇಂಟರನೆಟ್ ಸೌಲಭ್ಯ ಇರದೆ ಇರುವುದರಿಂದ ನಾನ್ ಪಾಸ್ ನ್ಯಾಯಬೆಲೆ ಅಂಗಡಿ ಮಂಜೂರಾತಿಗಾಗಿ ಅನುಮತಿ ನೀಡಲು ಸರ್ಕಾರಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.
ಕರ್ನಾಟಕ- ಗೋವಾ ಗಡಿಭಾಗದಲ್ಲಿನ ದುರ್ಗಮ ಪ್ರದೇಶದಲ್ಲಿರುವ ಇಲ್ಲಿನ ಗ್ರಾಮಗಳ ಸಾರ್ವಜನಿಕರು ತಮ್ಮ ಪೂರ್ವಜರ ಕಾಲದಿಂದಲೂ ಪಡಿತರ ಸೌಲಭ್ಯ ಪಡೆಯಲು ಎದುರಿಸುತ್ತಿದ್ದ ಸಮಸ್ಯೆಯನ್ನು ಜನತಾ ದರ್ಶನದಲ್ಲಿ ಗಮನಕ್ಕೆ ತಂದಿದ್ದರು. ಸಂಪೂರ್ಣ ಅರಣ್ಯದಿಂದ ಆವೃತ್ತವಾಗಿರುವ , ಸೂಕ್ತ ಇಂಟರ್ನೆಟ್ ಸೌಲಭ್ಯವನ್ನೂ ಹೊಂದಿರದ, ಉತ್ತಮ ಸಂಪರ್ಕ ರಸ್ತೆಗಳ ಸೌಲಭ್ಯವನ್ನೂ ಹೊಂದಿರದ ಇಲ್ಲಿನ ಸಾರ್ವಜನಿಕರ ಈ ಸಮಸ್ಯೆಯು ಅತ್ಯಂತ ಜ್ವಲಂತ ಮತ್ತು ತುರ್ತಾಗಿ ಬಗೆಹರಿಸಬೇಕಾದ ಸಮಸ್ಯೆಯಾಗಿತ್ತು. ಸ್ಥಳೀಯರಿಗೇ ಇಲ್ಲಿ ಪಡಿತರ ಅಂಗಡಿ ತೆರೆಯಲು ಅವಕಾಶ ಮಾಡಿಕೊಡುವ ಮೂಲಕ ಇವರ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಜಿಲ್ಲಾಡಳಿತದ ಹಂತದಲ್ಲಿ ಸಾಧ್ಯವಿದ್ದ ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದೆ. ಇಲ್ಲಿ ಆದಷ್ಟು ಶೀಘ್ರದಲ್ಲಿ ಪಡಿತರ ಅಂಗಡಿ ಆರಂಭವಾಗಿ, ಪಡಿತರ ವಿತರಣೆ ನಡೆಯಲಿದೆ. : ಗಂಗೂಬಾಯಿ ಮಾನಕರ , ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ.