ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ಗಜಾನನೋತ್ಸವ ಸಮಿತಿಯಲ್ಲಿ ಯಕ್ಷತರಂಗಿಣಿ ಸಂಸ್ಥೆಯ ಮೂರನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಅಮಿತ್ ಎಂ.ಭಟ್ಟ ಮಾಣಿಕ್ನಮನೆ ಅವರ ಚೊಚ್ಚಲ ಕೃತಿ ‘ಭವರ ಭಾರತಿ’ ಯಕ್ಷಗಾನ ಪ್ರದರ್ಶನ ಹಾಗೂ ಯುವ ಪ್ರತಿಭೆಗಳಿಗೆ ಗೌರವ ಸಮರ್ಪಣೆ ಶನಿವಾರ ಜರುಗಿತು.
ವಿ.ಶ್ರೀಧರ ಭಟ್ಟ ಮಾಣಿಕ್ನಮನೆ ಹಾಗೂ ವರ್ತಕ ಅನಂತ ಶಾನಭಾಗ ಹಾರ್ಸಿಕಟ್ಟಾ ಕಾರ್ಯಕ್ರಮ ಉದ್ಘಾಟಿಸಿದರು.ಯುವ ಕೃತಿಕಾರ ಅಮಿತ್ ಭಟ್ಟ, ಸಾಲಿಗ್ರಾಮ ಮೇಳದ ಯುವ ಭಾಗವತ ಸೃಜನ್ ಗಣೇಶ ಹೆಗಡೆ ಹಾಗೂ ಯುವ ಕಲಾವಿದ ಯುವರಾಜ್ ನಾಯ್ಕ ಹಳಿಯಾಳ ಅವರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಗಂಗಾಧರ ನಾಯ್ಕ ಹೊಸಗದ್ದೆ ಉಪಸ್ಥಿತರಿದ್ದರು. ರಮೇಶ ಹಾರ್ಸಿಮನೆ ಕಾರ್ಯಕ್ರಮ ನಿರ್ವಹಿಸಿದರು.
ನಂತರ ಪ್ರದರ್ಶನಗೊಂಡ ಭವರ ಭಾರತಿ ಯಕ್ಷಗಾನದ ಹಿಮ್ಮೇಳದಲ್ಲಿ ಭಾಗವತರಾಗಿ ಸೃಜನ್ ಗಣೇಶ ಹೆಗಡೆ, ಮದ್ದಳೆಯಲ್ಲಿ ಮಂಜುನಾಥ್ ಗುಡ್ಡೆದಿಂಬ ಹಾಗೂ ಚಂಡೆಯಲ್ಲಿ ಗಣೇಶ ಕೆರೆಕೈ ಸಹಕರಿಸಿದರು.
ಮುಮ್ಮೇಳದಲ್ಲಿ ನಂದನ ನಾಯ್ಕ ಅರಶಿನಗೋಡ, ಯುವರಾಜ್ ನಾಯ್ಕ, ಮೈತ್ರಿ ಗೌಡ, ಅಮಿತ್ ಭಟ್ಟ, ಆದಿತ್ಯ ಹೆಗಡೆ, ಪೃಥ್ವಿ, ಲಕ್ಷ್ಮೀಶ್, ಭಾರ್ಗವ್, ನಿಶಾ, ಕೌಶಿಕ್, ವರುಣ್ ಇವರು ವಿವಿಧ ಪಾತ್ರ ನಿರ್ವಹಿಸಿ ಮೆಚ್ಚುಗೆಗಳಿಸಿದರು.