Slide
Slide
Slide
previous arrow
next arrow

51 ಸಸಿ ನೆಡುವ‌ ಮೂಲಕ ಮಗಳ ಜನ್ಮ ದಿನಾಚರಣೆ

300x250 AD

ಪ್ರಕೃತಿ ಆರಾಧನೆ ಮೂಲಕ ಉತ್ತಮ ಸಂದೇಶ ಸಾರಿದ ದಂಪತಿ

ದಾಂಡೇಲಿ : ಮಕ್ಕಳ‌‌ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಿ, ಸಂಭ್ರಮಿಸುವುದು ವಾಡಿಕೆ. ಹಲವಾರು ಜನ ಅಕ್ಕಪಕ್ಕದ ಹೋಟೆಲಿಗೆ‌ ಹೋಗಿ ಮಕ್ಕಳ ಜನ್ಮದಿನಾಚರಣೆಯನ್ನು ಆಚರಿಸಿಕೊಂಡರೇ, ಇನ್ನೂ ಬಹುತೇಕರು ಅಕ್ಕಪಕ್ಕದವರನ್ನು ಕರೆಸಿ ಇಪ್ಪತ್ತು – ಮೂವತ್ತು ಸಾವಿರ ರೂಪಾಯಿ ವ್ಯಯಿಸಿ ಮಕ್ಕಳ ಜನ್ಮದಿನಾಚರಣೆಯನ್ನು ಮನೆಯಂಗಳದಲ್ಲಿ ವೈಭವದಿಂದ ಆಚರಿಸುತ್ತಾರೆ. ಅದು ತಪ್ಪೆನ್ನುವ ವಾದದಲ್ಲ. ಅಂತಹದರಲ್ಲಿ ಅಪರೂಪದಲ್ಲಿ ಅಪರೂಪ ಎಂಬಂತೆ ಇಲ್ಲೊಬ್ಬರು ಪರಿಸರವನ್ನು ಆರಾಧಿಸಿ, ವನದೇವತೆಯನ್ನು ಪೂಜಿಸಿ 51 ಗಿಡಗಳನ್ನು ನೆಡುವ ಮೂಲಕ ಮಗಳ ಜನ್ಮ ದಿನಾಚರಣೆಯನ್ನು ಆಚರಿಸಿ ನಿಜವಾದ ಪರಿಸರದ ಕಾಳಜಿ ಮತ್ತು ಬದ್ಧತೆಯನ್ನು ಸಾದರಪಡಿಸಿದ್ದಾರೆ.

ನಗರದ ಪೋಲಿಸ್ ಅರಣ್ಯ ಸಂಚಾರಿ ದಳದ ಸಿಬ್ಬಂದಿ ಕರಿಯಣ್ಣ ಮತ್ತು ಅವರ ಪತ್ನಿ ದಾನೇಶ್ವರಿ ಅವರು ತಮ್ಮ ಮುದ್ದಿನ ಮಗಳು ಪ್ರಕೃತಿ ಈಕೆಯ ಜನ್ಮದಿನಾಚರಣೆಯನ್ನು ಅವಳ ಹೆಸರಿಗೆ ತಕ್ಕಂತೆ ಪ್ರಕೃತಿಯ ಮಡಿಲಲ್ಲಿ ಪ್ರಕೃತಿಯನ್ನು ಆರಾಧಿಸಿ, ಪೂಜಿಸಿ ಗಿಡಗಳನ್ನು ನೆಡುವ ಮೂಲಕ ವನದೇವತೆಯ ಅನುಗ್ರಹಕ್ಕೆ ಪಾತ್ರರಾಗಿ ಗಮನ ಸೆಳೆದಿದ್ದಾರೆ.

ಕರಿಯಣ್ಣ ಹಾಗೂ ದಾನೇಶ್ವರಿ ದಂಪತಿ ಮಗಳು ಪ್ರಕೃತಿಯ ಜನ್ಮ ದಿನಾಚರಣೆಯನ್ನು ತಾಲೂಕಿನ ಬರ್ಚಿ ಅರಣ್ಯ ವಲಯದ ಗೋಬ್ರಾಳದಲ್ಲಿ ವಿವಿಧ ಜಾತಿಯ 51 ಸಸಿಗಳನ್ನು ನೆಡುವ ಮೂಲಕ ಅರ್ಥಪೂರ್ಣವನ್ನಾಗಿಸಿದ್ದಾರೆ.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಪೊಲೀಸ್ ಅರಣ್ಯ ಸಂಚಾರಿ ದಳದ ಪಿಎಸ್ಐ ಕಿರಣ್ ಪಾಟೀಲ್ ಅವರು ಮಗಳ ಜನ್ಮದಿನಾಚರಣೆಯನ್ನು ವನಮಹೋತ್ಸವದ ಮೂಲಕ ಆಚರಿಸುತ್ತಿರುವುದು ಪರಿಸರ ಸಂರಕ್ಷಣೆಯ ಜಾಗೃತಿಯನ್ನು ಸಮಾಜಕ್ಕೆ ಪಸರಿಸಿದಂತಾಗಿದೆ. ಕರಿಯಣ್ಣ ಮತ್ತು ದಾನೇಶ್ವರಿ ದಂಪತಿ ಇಂತಹ ಅಪೂರ್ವ ಕಾರ್ಯಕ್ರಮವನ್ನು ಆಯೋಜಿಸಿ ಮಗಳ ಪ್ರಥಮ ವರ್ಷದ ಜನ್ಮ ದಿನಾಚರಣೆಯನ್ನು ಸ್ಮರಣೀಯವನ್ನಾಗಿಸಿದ್ದಾರೆ ಎಂದರು.

300x250 AD

ವಲಯಾರಣ್ಯಾಧಿಕಾರಿ ಅಶೋಕ್ ಶೆಳ್ಳನವರ್ ಅವರು ಮಾತನಾಡಿ ಹೆಸರಿಗೆ ತಕ್ಕಂತೆ ಪ್ರಕೃತಿಯ ಮಡಿಲಲ್ಲಿ ಪ್ರಕೃತಿ ಈಕೆಯ ಜನ್ಮದಿನಾಚರಣೆ ಆಚರಿಸುತ್ತಿರುವುದು ಪ್ರಕೃತಿ ಮಾತೆಯನ್ನು ಆರಾಧಿಸಿದಂತಾಗಿದೆ. ಇಂತಹ ಪರಿಸರದ ಕಾಳಜಿ, ಪರಿಸರದ ಬಗ್ಗೆ ಇರುವ ಬದ್ಧತೆ ಎಲ್ಲರಿಗೂ ಬರಬೇಕು. ಈ ನಿಟ್ಟಿನಲ್ಲಿ ಕರಿಯಣ್ಣ ಮತ್ತು ದಾನೇಶ್ವರಿ ದಂಪತಿ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಹೇಳಿ ಪ್ರಥಮ ವರ್ಷದ ಜನ್ಮ ದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿರುವ ಪ್ರಕೃತಿಗೆ ಶುಭವನ್ನು ಹಾರೈಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕರಿಯಣ್ಣನವರು ನಾನು ಪರಿಸರದ ಬಗ್ಗೆ ಅತಿಯಾದ ಗೌರವವನ್ನು ಇಟ್ಟುಕೊಂಡು‌ ಬಂದವನು. ಪ್ರತಿವರ್ಷವೂ ನನಗೆ ಸಾಧ್ಯವಾದಷ್ಟು ಮಟ್ಟಿಗೆ ಗಿಡಗಳನ್ನು ನೆಟ್ಟು ಸಂರಕ್ಷಣೆ ಮಾಡುವ ಕಾರ್ಯವನ್ನು ಮಾಡುತ್ತಾ ಬಂದಿದ್ದೇನೆ. ಪರಿಸರ ಇದ್ದರೆ ನಾವು, ಪರಿಸರದಿಂದಾಗಿ ನಾವು. ಇದನ್ನು ಅರಿತು ಪರಿಸರ ಸಂರಕ್ಷಣೆಯಲ್ಲಿ ನಮ್ಮನ್ನು ನಾವು ಪರಿಪೂರ್ಣತೆಯಿಂದ ತೊಡಗಿಸಿಕೊಳ್ಳಬೇಕು. ಮಗಳಲ್ಲಿಯೂ ಪರಿಸರದ ಕಾಳಜಿ ಬರಬೇಕೆಂಬ ಧ್ಯೇಯದಡಿ ಈ ರೀತಿ ಜನ್ಮದಿನಾಚರಣೆಯನ್ನು ಆಚರಿಸಿಕೊಂಡಿದ್ದೇವೆ ಎಂದು ಹೇಳಿ ಸಹಕರಿಸಿದ ಸರ್ವರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಉಪ ವಲಯ ಅರಣ್ಯಾಧಿಕಾರ ಶ್ರೀಶೈಲ್ ದೇವರಮನಿ, ಪೊಲೀಸ್ ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳಾದ ಸಮೀರ್ ಲೋಹನಿ ವನಶ್ರೀನಗರ, ಪ್ರಶಾಂತ ನಾಯ್ಕ, ಬಹುಕಾಂತ್ ನಾಯ್ಕ, ಮಂಜುನಾಥ್ ಪಟಗಾರ್, ಸತೀಶ್ ಗುಡೇ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top