Slide
Slide
Slide
previous arrow
next arrow

ಚಾಲಕನ ನಿರ್ಲಕ್ಷ್ಯತನ: ಚಲಿಸುತ್ತಿದ್ದ ಬಸ್‌ನಿಂದ ಬಿದ್ದ ವಿದ್ಯಾರ್ಥಿನಿ

300x250 AD

ಭಟ್ಕಳ : ಚಲಿಸುತ್ತಿದ್ದ ಬಸ್ಸಿನಿಂದ ಬಿದ್ದು ವಿದ್ಯಾರ್ಥಿನಿ ಗಾಯಗೊಂಡ ಘಟನೆ ತಾಲೂಕಿನ ಶಿರಾಲಿಯಲ್ಲಿ ನಡೆದಿದೆ. ಬಸ್ ಹತ್ತುವ ಮೊದಲೇ ಚಾಲಕ ಬಸ್ ಚಲಾಯಿಸಿಕೊಂಡು ಹೋದ ಹಿನ್ನೆಲೆ ವಿದ್ಯಾರ್ಥಿನಿ ಬಸ್‌ನಿಂದ ಬಿದ್ದು ಗಾಯಗೊಂಡಿದ್ದಾಳೆ ಎಂದು ವಿದ್ಯಾರ್ಥಿನಿಯ ಪಾಲಕರು ಆರೋಪಿಸಿದ್ದಾರೆ.

ಭಟ್ಕಳ ತಾಲೂಕಿನ ಮೂಡಶಿರಾಲಿಯ ಚಿತ್ರಾ ಮಂಜುನಾಥ ನಾಯ್ಕ ಎಂಬ ವಿದ್ಯಾರ್ಥಿನಿ ಬೈಂದೂರು ಪಿಯು ಕಾಲೇಜಿನಲ್ಲಿ ಪ್ರಥಮ ವರ್ಷದ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಎಂದಿನಂತೆ ಶುಕ್ರವಾರ ಬೆಳಿಗ್ಗೆ ಕಾಲೇಜಿಗೆ ತೆರಳಲು ಶಿರಾಲಿಯಲ್ಲಿ ಬಸ್ಸಿಗೆ ಕಾಯುತ್ತಿದ್ದಳು. ಬೆಳಿಗ್ಗೆ ೭.೧೫ರ ಸುಮಾರಿಗೆ ಕುಮಟಾ ಕಡೆಯಿಂದ ಭಟ್ಕಳ ಕಡೆಗೆ ತೆರಳುತ್ತಿದ್ದ ಜನಸ್ನೇಹಿ ಬಸ್ ಶಿರಾಲಿಯಲ್ಲಿ ನಿಲ್ಲಿಸಲಾಗಿತ್ತು. ಈ ವೇಳೆ ಭಟ್ಕಳದ ಕಡೆ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳೊಂದಿಗೆ ಈಕೆ ಕೂಡ ಬಸ್ ಹತ್ತಲು ಮುಂದಾಗಿದ್ದಾಳೆ. ಪೂರ್ಣ ಪ್ರಮಾಣದಲ್ಲಿ ವಿದ್ಯಾರ್ಥಿನಿ ಬಸ್ ಹತ್ತುವ ಮೊದಲೇ ಬಸ್ ಚಾಲಕ ಬಸ್ ಚಲಾಯಿಸಿದ್ದಾನೆ ಎಂದು ಆರೋಪಿಸಲಾಗಿದೆ. ಬಸ್ ಹತ್ತುತ್ತಿದ್ದ ವಿದ್ಯಾರ್ಥಿನಿ ಚಲಿಸುತ್ತಿದ್ದ ಬಸ್ಸಿನಿಂದ ಬಿದ್ದು ಗಾಯಗೊಂಡಿದ್ದಾಳೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಬಸ್‌ನಿಂದ ಬಿದ್ದ ವಿದ್ಯಾರ್ಥಿನಿಯ ಎರಡೂ ಮೊಣಕಾಲು ಹಾಗೂ ಮುಖದ ಗಲ್ಲಕ್ಕೆ ಗಾಯವಾಗಿದೆ. ತಕ್ಷಣ ಆಕೆಯನ್ನು ಶಿರಾಲಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದ್ದಾರೆ.

ಭಟ್ಕಳ ಬಸ್ ನಿಲ್ದಾಣಕ್ಕೆ ಮುತ್ತಿಗೆ:

ಘಟನೆಯಿಂದ ಆಕ್ರೋಶಿತರಾದ ವಿದ್ಯಾರ್ಥಿನಿಯ ಪಾಲಕರು ಹಾಗೂ ಸಂಬಂಧಿಕರು ಭಟ್ಕಳ ಬಸ್ ನಿಲ್ದಾಣಕ್ಕೆ ಮುತ್ತಿಗೆ ಹಾಕಿದರು. ಸ್ಥಳಕ್ಕೆ ಘಟಕ ವ್ಯವಸ್ಥಾಪಕರು ಬರುವಂತೆ ಒತ್ತಾಯ ಮಾಡಿದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಡಿಪೋ ಮ್ಯಾನೇಜರ್ ದಿವಾಕರ, ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು. ಅಷ್ಟಕ್ಕೆ ಸುಮ್ಮನಾಗದ ವಿದ್ಯಾರ್ಥಿನಿಯ ಪಾಲಕರು ಸ್ಥಳಕ್ಕೆ ಬಸ್ ಚಾಲಕ ಹಾಗೂ ನಿರ್ವಾಹಕರನ್ನು ಕರೆಸುವಂತೆ ಒತ್ತಾಯ ಮಾಡಿದರು. ದೂರವಾಣಿ ಮೂಲಕ ಚಾಲಕ ಹಾಗೂ ನಿರ್ವಾಹಕನನ್ನು ಸಂಪರ್ಕಿಸಿದ ಡಿಪೋ ಮ್ಯಾನೇಜರ್ ಈ ಘಟನೆ ಬಗ್ಗೆ ನಮಗೆ ತಿಳಿದೇ ಇಲ್ಲ ಎಂದು ಉತ್ತರಿಸಿದ್ದಾರೆ. ಇದರಿಂದ ಮತ್ತಷ್ಟು ಕೋಪಗೊಂಡ ಪಾಲಕರು ಕೂಡಲೇ ಅವರನ್ನು ಇಲ್ಲಿಗೆ ಬರುವಂತೆ ತಿಳಿಸಿದರು. ನಂತರ ಸ್ಥಳಕ್ಕೆ ಬಂದ ನಗರ ಠಾಣೆಯ ಪೊಲೀಸರು ಪಾಲಕರನ್ನು ಸಮಾಧಾನಪಡಿಸಿದರು.

300x250 AD

ನನ್ನ ಮಗಳು ಬೆಳಿಗ್ಗೆ ಬೈಂದೂರು ಕಾಲೇಜಿಗೆ ತೆರಳಲು ತನ್ನ ಇಬ್ಬರು ಸ್ನೇಹಿತರೊಂದಿಗೆ ಬಸ್ಸಿಗಾಗಿ ಕಾಯುತ್ತಿದ್ದಳು. ಶಿರಾಲಿಯಿಂದ ಭಟ್ಕಳಕ್ಕೆ ಬರುವ ಬಸ್ ಹತ್ತುವ ಪೂರ್ವದಲ್ಲೇ ಬಸ್ ಚಾಲಕ ಬಸ್ ಚಲಾಯಿಸಿಕೊಂಡು ಮುಂದೆ ಸಾಗಿದ್ದಾನೆ. ಈ ವೇಳೆ ಬಸ್‌ನಿಂದ ಬಿದ್ದು ಗಾಯಗೊಂಡಿದ್ದಾಳೆ. ಇದನ್ನು ನೋಡಿದ ಆಕೆಯ ಇಬ್ಬರು ಸ್ನೇಹಿತರು ಕೂಡ ಬಸ್ ನಿಂದ ಕೆಳಗೆ ಇಳಿದು ಬಂದಿದ್ದಾರೆ. ಈ ರೀತಿಯ ಬೇಜವಾಬ್ದಾರಿಗೆ ಬಸ್ ಚಾಲಕ ಹಾಗೂ ನಿರ್ವಾಹಕ ಕಾರಣ.– ಮಂಗಳಾ, ವಿದ್ಯಾರ್ಥಿನಿ ತಾಯಿ.

ಕಾಲೇಜಿಗೆ ತೆರಳುವ ವಿದ್ಯಾರ್ಥಿ ಬಸ್ ಹತ್ತುವ ವೇಳೆ ಬಸ್ ನಿಂದ ಬಿದ್ದು ಗಾಯಗೊಂಡಿದ್ದಾರೆ ಎಂದು ಭಟ್ಕಳ ಬಸ್ ನಿಲ್ದಾಣಕ್ಕೆ ಬಂದು ಆಕೆಯ ಪಾಲಕರು ದೂರು ನೀಡಿದ್ದಾರೆ. ಬಳಿಕ ಚಾಲಕರಿಗೆ ದೂರವಾಣಿ ಮೂಲಕ ಕರೆ ಮಾಡಿದಾಗ ಈ ಘಟನೆ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. ಸದ್ಯ ಅವರು ಕುಮಾಟಾಗೆ ತೆರಳಿದ್ದಾರೆ. ಪುನಃ ಭಟ್ಕಳಕ್ಕೆ ಬಂದ ನಂತರ ಪರಿಶೀಲನೆ ಮಾಡಿ ವಿದ್ಯಾರ್ಥಿನಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇನೆ. ಚಾಲಕರ ತಪ್ಪು ಕಂಡುಬಂದರೆ ಅವರ ಮೇಲೆ ಕ್ರಮ ಕೈಗೊಳ್ಳುತ್ತೇನೆ.– ದಿವಾಕರ, ಘಟಕ ವ್ಯವಸ್ಥಾಪಕ

Share This
300x250 AD
300x250 AD
300x250 AD
Back to top