ಹೊನ್ನಾವರ:ಸಂಸ್ಕೃತ ಭಾಷೆಯು ಜ್ಞಾನ ಭಂಡಾರವಾಗಿದ್ದು, ವಿಶ್ವವನ್ನೇ ತನ್ನಡೆಗೆ ಆಕರ್ಷಿಸುತ್ತಿದೆ ಎಂದು ವಿಶ್ರಾಂತ ಪ್ರಾಚಾರ್ಯ ವಿ.ಜಿ.ಹೆಗಡೆ ಗುಡ್ಗೆಯವರು ನುಡಿದರು.
ಇವರು ಕವಲಕ್ಕಿಯ ಶ್ರೀ ಭಾರತೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿದ “ಸಂಸ್ಕೃತ ಬೋಧನಾ ಶಿಬಿರ”ದಲ್ಲಿ ಮುಖ್ಯ ಉಪನ್ಯಾಸಕರಾಗಿ ಮಾತನಾಡಿದರು. ಸಂಸ್ಕೃತ ಜ್ಞಾನವು ಪ್ರತಿಯೊಬ್ಬ ಶಿಕ್ಷಕರಿಗೆ ಅವಶ್ಯಕವಾಗಿದೆ. ಇವರು ವಿದ್ಯಾರ್ಥಿಗಳ ಜ್ಞಾನವನ್ನು ಹೆಚ್ಚಿಸಬೇಕಾದರೆ ಸಂಸ್ಕೃತವನ್ನು ಅಧ್ಯಯನ ಮಾಡಲೇಬೇಕು ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆಡಳಿತಾಧಿಕಾರಿ ಎಂ.ಎಸ್ ಹೆಗಡೆ ಗುಣವಂತೆ ಮಾತನಾಡಿ ವಿಶ್ವಗುರು ಎಂದೆನಿಸಿಕೊಳ್ಳುತ್ತಿರುವ ಭಾರತದ ಕೀರ್ತಿ ಪತಾಕೆಯೆ ಸಂಸ್ಕೃತವಾಗಿದೆ. ಸಂಸ್ಕೃತವನ್ನು ಅರಿತುಕೊಂಡು ಸುಸಂಸ್ಕೃತರಾಗಿ ಎಂದು ನುಡಿದರು. ಮುಖ್ಯ ಶಿಕ್ಷಕಿ ವೈಲೆಟ್ ಫರ್ನಾಂಡಿಸ್ ರವರು ಸ್ವಾಗತಿಸಿದರು. ಶಿಕ್ಷಕಿ ರೇಷ್ಮಾ ಜೋಗಲೆಕರ್ ರವರು ವಂದಿಸಿದರು. ಶಿಬಿರದಲ್ಲಿ ಶಾಲೆಯ ಶಿಕ್ಷಕ, ಶಿಕ್ಷಕಿಯರು ಭಾಗವಹಿಸಿದ್ದರು.