ಉತ್ತಮ ಶಿಕ್ಷಣ, ವೃತ್ತಿಪರ ಕೋರ್ಸ್ ಜೊತೆ ವ್ಯಕ್ತಿತ್ವ ರೂಪಿಸುತ್ತಿರುವ ಕಾಲೇಜು
ಶ್ರೀಧರ ವೈದಿಕ
ಯಲ್ಲಾಪುರ: ಸಾಮಾನ್ಯವಾಗಿ ಸರ್ಕಾರಿ ಕಾಲೇಜುಗಳಲ್ಲಿ ಉಪನ್ಯಾಸಕರು ಇಲಾಖೆಯ ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸುತ್ತಾರೆ. ಪಾಠ ಮಾಡುವುದನ್ನು ಹೊರತುಪಡಿಸಿ ಮಕ್ಕಳ ಶೈಕ್ಷಣಿಕ ಪ್ರಗತಿ ಬಗೆಗೆ ವಿಶೇಷ ಕಾಳಜಿ ಹೊಂದಿರುವುದಿಲ್ಲ. ಆದರೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರು ಉಪನ್ಯಾಸಕರು ಕೇವಲ ಪಠ್ಯಕ್ಕೆ ಸೀಮಿತರಾಗದೇ, ಕೌಶಲ್ಯಾಧಾರಿತ ಹಾಗೂ ವೃತ್ತಿಪರ ಕೋರ್ಸ್ ಗಳು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಹಾಗೂ ವಿವಿಧ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ಭವಿಷ್ಯ ಹಾಗೂ ವ್ಯಕ್ತಿತ್ವ ರೂಪಿಸುವ ಕಾರ್ಯಕ್ಕೆ ಮುಂದಾಗಿರುವುದು ವಿಶೇಷವಾಗಿದೆ.
ಬೇರೆ ಬೇರೆ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯಾಗಾರಗಳನ್ನು ಏರ್ಪಡಿಸಲಾಗುತ್ತಿದೆ. ದೇಶಪಾಂಡೆ ಸ್ಕಿಲ್ಸ್, ಮಾತೃಭೂಮಿ ಸೇವಾ ಪ್ರತಿಷ್ಠಾನ, ಕ್ರಿಯೇಟಿವ್ ಕಂಪ್ಯೂಟರ್ಸ್ ಮುಂತಾದ ಸಂಸ್ಥೆಗಳ ಸಹಕಾರದೊಂದಿಗೆ ಸಿಎ, ಸಿಎಸ್ ಪರೀಕ್ಷಾ ಸಿದ್ಧತೆ, ವೃತ್ತಿಪರ ಕೋರ್ಸ್, ಕೌಶಲ್ಯಾಧಾರಿತ ತರಬೇತಿ ನೀಡಲಾಗುತ್ತಿದೆ. ನೂರಾರು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಿದ್ದು, ಈ ಕೋರ್ಸ್ ಮೂಲಕ ಅನೇಕರು ಬೇರೆ ಬೇರೆಡೆಗಳಲ್ಲಿ ಉದ್ಯೋಗವನ್ನೂ ಪಡೆದಿದ್ದಾರೆ. ಸ್ಟುಡೆಂಟ್ ಝೋನ್ ಸಹಯೋಗದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾರ್ಗದರ್ಶನ ಮಾಡುವ ಯೋಜನೆಯನ್ನೂ ಹೊಂದಲಾಗಿದೆ.
ಕಾಲೇಜಿನಲ್ಲಿ ಜಿಲ್ಲಾಮಟ್ಟದ ಉದ್ಯೋಗ ಮೇಳ ನಡೆಸಲಾಗಿದ್ದು, ಭಾಗವಹಿಸಿದ 400 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಪೈಕಿ 118 ಜನರು ಉದ್ಯೋಗ ಪಡೆದಿದ್ದಾರೆ. ಅವರಲ್ಲಿ 34 ಜನರು ಇದೇ ಕಾಲೇಜಿನವರು ಎಂಬುದು ವಿಶೇಷ. ರಕ್ತದಾನ ಶಿಬಿರ, ಗಣ್ಯರ, ಸಾಧಕರ ಉಪನ್ಯಾಸ, ಎನ್ಎಸ್ಎಸ್, ಎನ್.ಸಿ.ಸಿ, ಸ್ಕೌಟ್ ಮತ್ತು ಗೈಡ್ಸ್, ಐಕ್ಯುಎಸಿ ಚಟುವಟಿಕೆಗಳು ಹೀಗೆ ಹತ್ತಾರು ರೀತಿಯಲ್ಲಿ ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ ನಿರ್ಮಾಣ, ನಾಯಕತ್ವ ಗುಣ, ದೇಶಪ್ರೇಮ, ಸೇವಾ ಮನೋಭಾವನೆ ಜಾಗೃತಗೊಳಿಸುವಲ್ಲಿ ಉಪನ್ಯಾಸಕರು ಶ್ರಮಿಸುತ್ತಿದ್ದಾರೆ.
ಆಧುನಿಕ ಸೌಲಭ್ಯ:
ಕಾಲೇಜು ಎಲ್ಲ ರೀತಿಯ ಸೌಲಭ್ಯಗಳನ್ನು ಹೊಂದಿದ್ದು, ಉತ್ತಮ ಶಿಕ್ಷಣ ನೀಡಲು ಪೂರಕವಾಗಿದೆ. ಸ್ಮಾರ್ಟ್ ಕ್ಲಾಸ್, ಒಪ್ಯಾಕ್ ವ್ಯವಸ್ಥೆಯಿರುವ ಸುಸಜ್ಜಿತ ಗ್ರಂಥಾಲಯ, ಎಸ್.ಸಿ, ಎಸ್.ಟಿ ವಿದ್ಯಾರ್ಥಿಗಳಿಗೆ ವಿಶೇಷ ಬುಕ್ ಬ್ಯಾಂಕ್, ವಿದ್ಯಾರ್ಥಿನಿಯರಿಗೆ ವಿಶ್ರಾಂತಿ ಗೃಹ ಮುಂತಾದ ಸೌಕರ್ಯಗಳನ್ನು ಹೊಂದಿದೆ. ವಿದ್ಯಾರ್ಥಿಗಳಿಗೆ ವಿವಿಧ ವಿಧ್ಯಾರ್ಥಿ ವೇತನ ಸೌಲಭ್ಯವೂ ಇದೆ. ಸುಸಜ್ಜಿತ ಕಂಪ್ಯೂಟರ್ ವ್ಯವಸ್ಥೆಯಿದ್ದು, ಕಾಲೇಜು ನ್ಯಾಕ್ ನಿಂದ ಬಿ ಮಾನ್ಯತೆ ಪಡೆದು, ಮುಂದಿನ ಹಂತಕ್ಕೆ ಸಿದ್ಧತೆ ನಡೆಸಿದೆ. ಎಲ್ಲಾ ವಿಷಯಗಳಿಗೂ ಉತ್ತಮ ಉಪನ್ಯಾಸಕರಿದ್ದು, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಿದೆ.
500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಎಲ್ಲ ವ್ಯವಸ್ಥೆಗಳ ಸದುಪಯೋಗ ಪಡೆಯತ್ತಿದ್ದಾರೆ. ಬಿ.ಕಾಂ, ಎಂ.ಕಾಂ ಹಾಗೂ ಬಿಎ ಗಳಲ್ಲಿ ಪ್ರತಿ ಸೆಮಿಸ್ಟರ್ ಗಳಲ್ಲಿ ಶೇ.90 ಕ್ಕಿಂತ ಹೆಚ್ಚಿನ ಫಲಿತಾಂಶ ಪಡೆಯುತ್ತಿದ್ದಾರೆ. ವಿಶ್ವವಿದ್ಯಾಲಯದ ಟಾಪರ್ ಗಳಲ್ಲಿಯೂ ಸ್ಥಾನ ಪಡೆಯುತ್ತಿರುವುದು ವಿಶೇಷ. ಸಾಂಸ್ಕೃತಿಕ ಹಾಗೂ ಕ್ರೀಡಾ ವಿಭಾಗದ ಸ್ಪರ್ಧೆಗಳಲ್ಲಿಯೂ ಜಿಲ್ಲೆ, ರಾಜ್ಯಮಟ್ಟದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಸಾಧನೆ ಮಾಡುತ್ತಿದ್ದಾರೆ. ಕಾಲೇಜಿನ ಶೈಕ್ಷಣಿಕ ಸಾಧನೆಯ ಕಾರಣಕ್ಕಾಗಿ ದಾಂಡೇಲಿ, ಹಳಿಯಾಳ, ಗದಗ ಸೇರಿದಂತೆ ಬೇರೆ ತಾಲೂಕು, ಜಿಲ್ಲೆಗಳಿಂದಲೂ ವಿದ್ಯಾರ್ಥಿಗಳು ಬರುತ್ತಿದ್ದಾರೆ.
ಪ್ರವೇಶಾತಿ ಆರಂಭ:
ಮುಂದಿನ ಶೈಕ್ಷಣಿಕ ವರ್ಷಕ್ಕಾಗಿ ಪ್ರವೇಶಾತಿ ಆರಂಭವಾಗಿದ್ದು, ಈಗಾಗಲೇ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದಾರೆ. ತಾಲೂಕಿನಲ್ಲಿರುವ ಏಕೈಕ ಪದವಿ ಕಾಲೇಜು ಇದಾಗಿದೆ. ಎಲ್ಲ ವ್ಯವಸ್ಥೆ, ಉತ್ತಮ ಶಿಕ್ಷಣ ಹೊಂದಿದ್ದು, ತಾಲೂಕಿನ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುವಂತೆ ಉಪನ್ಯಾಸಕರು ವಿನಂತಿಸುತ್ತಾರೆ.
ಬಿಎಸ್ಸಿ ಆರಂಭ:
ಈವರೆಗೆ ತಾಲೂಕಿನ ವಿದ್ಯಾರ್ಥಿಗಳು ಬಿಎಸ್ಸಿ ಓದಲು ಪಕ್ಕದ ತಾಲೂಕುಗಳನ್ನೇ ಆಶ್ರಯಿಸಬೇಕಿತ್ತು. ಆದರೆ ಈ ಬಾರಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎಸ್ಸಿ ಕೋರ್ಸ್ ಆರಂಭವಾಗುತ್ತಿದ್ದು, ವಿದ್ಯಾರ್ಥಿಗಳು ಹೊರ ಊರುಗಳಿಗೆ ಹೋಗುವ ಬವಣೆ ತಪ್ಪಿದೆ. ಈಗಾಗಲೇ ಪ್ರವೇಶಾತಿ ಆರಂಭವಾಗಿದ್ದು, ಉತ್ತಮ ಸ್ಪಂದನೆ ದೊರೆತಿದೆ.
- ಕಾಲೇಜಿನಲ್ಲಿ ಎಲ್ಲ ರೀತಿಯ ಮೂಲ ಸೌಕರ್ಯಗಳ ಜತೆಗೆ, ಉತ್ತಮ ಶಿಕ್ಷಣವೂ ದೊರೆಯುತ್ತಿದೆ. ಉಪನ್ಯಾಸಕರಿಂದ ಎಲ್ಲ ರೀತಿಯ ಪ್ರೋತ್ಸಾಹ ದೊರೆಯುತ್ತಿದೆ. ಬಸ್ ನಿಲ್ದಾಣದಿಂದ ಕಾಲೇಜು 2 ಕಿಮೀ ದೂರದಲ್ಲಿದ್ದು, ಬಸ್ ಸೌಕರ್ಯ ಕಲ್ಪಿಸಿದರೆ ವಿದ್ಯಾರ್ಥಿಗಳಿಗೆ ಇನ್ನಷ್ಟು ಅನುಕೂಲವಾಗಬಹುದು.
| ದಿನೇಶ ಗೌಡ ಹಾಗೂ ಶಿವಾನಿ
ವಿದ್ಯಾರ್ಥಿಗಳು - ನಾವು ಸರ್ಕಾರಿ ನೌಕರರು. ವರ್ಗಾವಣೆಗೊಂಡಾಗ ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗುವುದು ಅನಿವಾರ್ಯ. ಆದರೆ ಶಿಕ್ಷಣ ಸಂಸ್ಥೆಗಳು ಶಾಶ್ವತ. ಇರುವ ಊರು, ಕಾಲೇಜು ನಮ್ಮದೇ ಎಂದು ತಿಳಿದು ಉತ್ತಮ ವ್ಯವಸ್ಥೆ ಕಲ್ಪಿಸುವ ಯತ್ನ ನಡೆಸಿದಾಗ ಅದು ನಿರಂತರವಾಗಿ ವಿದ್ಯಾರ್ಥಿಗಳಿಗೆ ಒಳಿತನ್ನೇ ಮಾಡುತ್ತದೆ. ಈ ಬಾರಿ ಬಿಎಸ್ಸಿ ಆರಂಭಿಸುತ್ತಿದ್ದೇವೆ. ಬಿಸಿಎ ಕೋರ್ಸ್ ಆರಂಭಕ್ಕೆ ಅನುಮತಿಗಾಗಿ ಇಲಾಖೆಗೆ ಅರ್ಜಿ ಸಲ್ಲಿಸಿದ್ದು, ಮುಂದಿನ ವರ್ಷ ಅದೂ ಆರಂಭವಾಗಲಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಬಾರಿ ಕಾಂಬಿನೇಷನ್ ಹೆಚ್ಚಿಸಲಾಗಿದೆ. ಎಲ್ಲರ ಸಹಕಾರದೊಂದಿಗೆ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಪ್ರಯತ್ನಿಸುತ್ತೇವೆ.
| ಸವಿತಾ ನಾಯಕ, ಪ್ರಾಂಶುಪಾಲರು