ಸಿದ್ದಾಪುರ: ಭಗವಂತನ ಸ್ಮರಣೆಯಿಂದ ಎಲ್ಲ ಕಷ್ಟಗಳೂ ದೂರವಾಗಲಿದೆ ಎಂದು ಅನಂತ ಶ್ರೀವಿಭೂಷಿತ ಶ್ರೀಕುಂಡಲಿನಿ ಜ್ಞಾನಯೋಗಿ ಅವಧೂತ ಪೀಠಾಧೀಶ್ವರ ಸದ್ಗುರು ಎಚ್.ಎಚ್. ಸ್ವಾಮಿ ಆತ್ಮಾನಂದ ಸರಸ್ವತೀ ಮಹಾರಾಜ್ ದಂಡಿ ನುಡಿದರು.
ತಾಲೂಕಿನ ಶ್ರೀಕ್ಷೇತ್ರ ಕಲಗದ್ದೆಯ ಶ್ರೀ ನಾಟ್ಯ ವಿನಾಯಕ ದೇವಸ್ಥಾನದಲ್ಲಿ ಭಾನುವಾರ ನಡೆದ ಸಾಮೂಹಿಕ ಸಹಸ್ರ ಶ್ರೀಸತ್ಯಗಣಪತಿ ಕಥಾ, ಸಹಸ್ರ ಗಣಪತಿ ಉಪನಿಷತ್ ಪಾರಾಯಣದಲ್ಲಿ ಶಾಸಕ ಭೀಮಣ್ಣ ನಾಯ್ಕ ಅವರನ್ನು ಗೌರವಿಸಿ ಆಶೀರ್ವಚನ ನುಡಿದರು.
ಭಗವಂತನಲ್ಲಿ ಭಕ್ತಿ ಸಮರ್ಪಿಸಿದರೆ ಅವನ ಆಶೀರ್ವಾದ, ಅನುಗ್ರಹ ಲಭಿಸುತ್ತದೆ. ಎಲ್ಲ ಕಾರ್ಯದಲ್ಲೂ ಶ್ರದ್ದೆಯಿಂದ ಕೆಲಸ ಮಾಡಬೇಕು. ಆಗ ಯಶಸ್ಸಾಗುತ್ತದೆ. ಭಗವಂತನ ನಾಮ ಸ್ಮರಣೆ ನಿರಂರವಾಗಿ ಮಾಡಬೇಕು ಎಂದರು. ಶ್ರೀಗಣೇಶ ಮಹಿಮೆ ಕುರಿತು ಶಿರಳಗಿ ಶ್ರೀಚೈತನ್ಯ ರಾಜಾರಾಮ ಕ್ಷೇತ್ರದ ಶ್ರೀಬ್ರಹ್ಮಾನಂದ ಭಾರತೀ ಸ್ವಾಮೀಜಿ ವಿಶೇಷ ಉಪನ್ಯಾಸ ನೀಡಿ, ಭಗವಂತನಿಗೆ ಜೀವನ ಪರ್ಯಂತ ನರ್ತನ ಮಾಡುವ ಶಕ್ತಿ ಭಗವಂತನಿಗೆ ಮಾತ್ರ ಸಾಧ್ಯ. ನರ್ತನ, ಸಂಗೀತವು ಎಲ್ಲರಿಗೂ ಸಂತೋಷ ಆಗುತ್ತದೆ. ಸಂತೋಷ ಆದಾಗ ಈ ಪ್ರಕ್ರಿಯೆ ಆಗುತ್ತದೆ. ನೃತ್ಯ ಸಂಗೀತ ಎರಡೂ ಆನಂದದ ಅಭಿವ್ಯಕ್ತಿಗಳು. ಜಿಗುಪ್ಸೆಗೊಂಡ ಮನಸ್ಸಿಗೂ ಹಾಡು, ಹೆಜ್ಜೆ ಹಾಕಿದರೂ ಬೇಸರ ಹೋಗುತ್ತದೆ. ಬೇಸರ ಎನ್ನುವದು ಸ್ವಭಾವ ಅಲ್ಲ, ಆನಂದವೇ ಸಹಜ ಸ್ಥಿತಿ ಎಂದರು.
ಜಗತ್ತನ್ನು ಭಗವಂತ ನಡೆಸುವದೇ ನರ್ತನದ ಮೂಲಕ. ನರ್ತನ, ತಾಂಡವ ಏನಿದ್ದರೇ ಭಗವಂತನು ಕಾರಣ. ಭಗವಂತನಿಗೆ ಇನ್ನೊಂದು ಹೆಸರು ಆನಂದ. ಅವನ ಸ್ವರೂಪವೇ ಆನಂದ. ಭಗವಂತನ ದರ್ಶನ ಆಗುವದು ಎಂದರೆ ಆನಂದ ದರ್ಶನವಾಗುತ್ತದೆ. ಧರ್ಮದಲ್ಲಿ ನಡೆದರೆ ಭಗವಂತನ ಸಾಮಿಪ್ಯ ಸಿಗುತ್ತದೆ. ಗಣಪತಿ ನಮ್ಮ ಕಣ್ಮುಂದೇ ಇದ್ದಾನೆ. ಒಳಗೆ ಹೊರಗೆ ಇರುವ ಚೈತನ್ಯ ರೂಪ ಎಂದರು.
ಸನ್ಮಾನ ಸ್ವೀಕರಿಸಿದ ಶಾಸಕ ಭೀಮಣ್ಣ ನಾಯ್ಕ, ನಿಸ್ವಾರ್ಥ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದೆ. ಜನರ ನಿರೀಕ್ಷೆಯಂತೆ ಕೆಲಸ ಮಾಡುತ್ತೇನೆ. ಅದ್ಭುತ ಕ್ಷೇತ್ರ ಕಲಗದ್ದೆ ದೇವಸ್ಥಾನ. ಇಲ್ಲಿ ಬಂದು ಚುನಾವಣೆ ಮೊದಲು ಆಶೀರ್ವಾದ ಪಡೆದಿದ್ದೇನೆ. ಮನುಷ್ಯನಾದವನು ನಿಸ್ವಾರ್ಥ ಸೇವೆ ಮಾಡುವದನ್ನು ರೂಢಿಸಿಕೊಳ್ಳಬೇಕು. ದೇವಸ್ಥಾನದಲ್ಲಿ ಮಾತ್ರ ನೆಮ್ಮದಿ ಸಾಧ್ಯವಿದೆ. ಭಗವಂತನ ಕ್ಷೇತ್ರದಲ್ಲಿ ಸಿಕ್ಕ ಆಶೀರ್ವಾದ ಎಂದೇ ಸ್ವೀಕರಿಸಿದ್ದೇನೆ. ಅತಿಥಿಗಳಾಗಿ ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ ಕುಮಟಾ, ಭಗವಂತನೇ ಸೇವೆಗೆ ಅವಕಾಶ ಕೊಟ್ಟಿದ್ದಾನೆ. ಭೀಮ, ಅಣ್ಣ, ನಾಯಕ ಎಲ್ಲವೂ ನೀವು ಎಂದು ಬಣ್ಣಿಸಿದರು. ಅಧ್ಯಕ್ಷತೆವಹಿಸಿಕೊಂಡ ಕ್ಷೇತ್ರದ ಪ್ರಧಾನ ಮೊಕ್ತೇಸರ ವಿನಾಯಕ ಹೆಗಡೆ ಲೋಕ ಕಲ್ಯಾಣಾರ್ಥವಾಗಿ ಮಾತ್ರ ಇಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ ಎಂದರು.
ಧಾರವಾಡ ಹಾಲು ಒಕ್ಕೂಟದ ಕಲ್ಯಾಣ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಸಾಮಾಜಿಕ ಕಾರ್ಯಕರ್ತ ಎಸ್.ಕೆ.ಭಾಗವತ್ ಇದ್ದರು. ಗಣಪತಿ ಗುಂಜಗೋಡ ನಿರ್ವಹಿಸಿದರು. ರಷ್ಮಿ ಹೆಗಡೆ ವಂದಿಸಿದರು.
ಬೆಳಿಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು. ಕಲಶಾಭಿಷೇಕ, ಗಣಹವನ, ಸಂಕಷ್ಟಹರ ರಥೋತ್ಸವ, ಮಹಾ ಮಂಗಳಾರತಿ ಬಳಿಕ ಪ್ರಸಾದ ಭೋಜನ ವಿತರಿಸಲಾಯಿತು.
ನಿಷ್ಕಾಮವಾಗಿ ಯಾವುದೇ ಕರ್ಮ ಮಾಡಬೇಕು. ಧಾರ್ಮಿಕ, ಲೌಕಿಕ ಕಾರ್ಯ ಮಾಡಬೇಕು. ಶುದ್ಧ ಸಂಕಲ್ಪದಿಂದ ಭಗವಂತನ ಆಶೀರ್ವಾದ ಮಾಡುತ್ತಾನೆ.– ಶಿರಳಗಿ ಸ್ವಾಮೀಜಿ
ಕ್ಷೇತ್ರದ ಕೊಟ್ಟ ಕೊನೆಯ ವ್ಯಕ್ತಿಗೂ ಸೌಲಭ್ಯ, ನೆಮ್ಮದಿ ಸಿಗಬೇಕು ಎಂಬ ಸಂಕಲ್ಪದಲ್ಲಿ ಕೆಲಸ ಮಾಡುತ್ತಿದ್ದೇನೆ.– ಭೀಮಣ್ಣ ನಾಯ್ಕ, ಶಾಸಕ