ಸಿದ್ದಾಪುರ; ಉತ್ತರ ಕನ್ನಡ ಜಿಲ್ಲೆ ಸಾಹಿತಿಗಳ ತವರೂರು. ಸಾಹಿತ್ಯ ಶಬ್ದಕ್ಕೆ ಜೊತೆಜೊತೆಯಾಗಿರುವುದು ಎಂಬ ಅರ್ಥವಿದೆ. ಭಾರತ ದೇಶ ಹಗಲು-ರಾತ್ರಿ ಎರಡನ್ನೂ ಪ್ರೀತಿಸಿದ ದೇಶ. ಈ ದೇಶ ಆಸ್ತಿಕರಿಗೆ ಕೊಟ್ಟ ಗೌರವವನ್ನು ನಾಸ್ತಿಕರಿಗೂ ನೀಡಿದೆ ಎಂದು ಖ್ಯಾತ ವಿದ್ವಾಂಸ ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೇಕೈ ಹೇಳಿದರು.
ತಾಲೂಕಿನ ಕಶಿಗೆಯ ಕಾಶ್ಯಪ ಪರ್ಣಕುಟಿ (ಜಿ.ಕೆ.ಭಟ್ಟ) ಹಾಗೂ ಶ್ರೀಮತಿ ಲತಾ ಭಟ್ಟ ದಂಪತಿಗಳಿಗಾಗಿ ಕಶಿಗೆಯ ಶ್ರೀ ಕೇಶವ ನಾರಾಯಣ ದೇವರ ಸನ್ನಿಧಿಯಲ್ಲಿ ನಡೆಸಲಾದ ಭೀಮರಥ ಶಾಂತಿ ನಿಮಿತ್ತ “ಸಂಸ್ಕೃತಿ ಚಿಂತನ” ಕಾರ್ಯಕ್ರಮದಲ್ಲಿ ಸಾಹಿತ್ಯ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡುತ್ತಿದ್ದರು. ಇಂದು ವೈದಿಕ ಧರ್ಮದ ಅರ್ಥ ಹಾಗೂ ಆ ಅರ್ಥದ ಹಿತ ಗೊತ್ತಿಲ್ಲದವರು ತಮಗೆ ತೋಚಿದ್ದನ್ನು ಹೇಳುತ್ತಾ ಹೋಗುತ್ತಿದ್ದಾರೆ. ಧರ್ಮದ ಅರ್ಥವನ್ನು ಅರಿತುಕೊಂಡು ಸರಿ ತಪ್ಪು ತಿಳಿದು ಮಾತನಾಡಬೇಕು. ಸಾಮಾಜಿಕ ಹಿತ ದೃಷ್ಟಿ ಇದ್ದರೆ ಮಾತ್ರ ಅದು ಸಾಹಿತ್ಯ ಎನಿಸಿಕೊಳ್ಳುತ್ತದೆ. ಆಸ್ತಿಕದ ಜಾಗರ ಉಪವಾಸ. ಭಾರತೀಯ ಸಂಸ್ಕೃತಿಯ ಜಾಗರವೂ ಉಪವಾಸ. ತಾಳಮದ್ದಲೆಯಂತಹ ಕಲೆಯಲ್ಲಿ ಆಶು ಸಾಹಿತ್ಯ ಸೃಷ್ಟಿಯಾಗುತ್ತದೆ ಎಂದರು.
ಸಾಹಿತಿ, ವಿಮರ್ಶಕ ಸುಬ್ರಾಯ ಮತ್ತೀಹಳ್ಳಿ ವಿಷಯ ಮಂಡನೆ ಮಾಡಿ ಕನ್ನಡ ಸಾಹಿತ್ಯ ಗ್ರೀಕ್ ಸಾಹಿತ್ಯದ ಮೇಲೂ ಪ್ರಭಾವ ಬೀರಿದೆ. ಬಂಡಾಯ, ನವ್ಯ ಸಾಹಿತ್ಯದ ನಡುವೆ ವಚನ ಚಳುವಳಿ ವೈದಿಕತೆಯ ಅಂಕು ಡೊಂಕು ತಿದ್ದುವ ಕೆಲಸ ಮಾಡಿದೆ. ಅಡಿಗರ ಕಾವ್ಯದಲ್ಲಿ ಆಧ್ಯಾತ್ಮವಿದ್ದರೆ, ಯು.ಆರ್.ಅನಂತಮೂರ್ತಿಯವರ ಸಾಹಿತ್ಯದಲ್ಲಿ ಕಾಮ ವಿಜೃಂಭಿಸಿತು. ಬರಗೂರು ರಾಮಚಂದ್ರಪ್ಪ, ದೇವನೂರು ಮಹಾದೇವರ ಸಾಹಿತ್ಯಗಳು ಸಮಕಾಲೀನ ಚಿತ್ರಣ ನೀಡಿವೆ ಎಂದರು. ಇಂದು ಬಹುತೇಕ ಚಳವಳಿಗಳು ಮೂಲೆ ಗುಂಪಾಗಿದ್ದು ಪೆನ್ನು ಮೂಲೆ ಸೇರಿ, ಪೆನ್ಡ್ರೈವ್ ಮುಂಚೂಣಿಯಲ್ಲಿದೆ. ಯುಗ ಬದಲಾಯಿಸುವ, ತಲ್ಲಣ-ಹತಾಶೆ ನಿವಾರಿಸುವ ನಿಟ್ಟಿನಲ್ಲಿ ಬುದ್ಧಿಜೀವಿಗಳು, ಕಲಾವಿದರು ಪ್ರಯತ್ನಶೀಲರಾಗಬೇಕಿದೆ ಎಂದರು. ಹಿರಿಯ ಕವಿ ಪ್ರೊ.ಧರಣೇಂದ್ರ ಕುರಕುರಿ ಅಭ್ಯಾಗತರಾಗಿ ಪಾಲ್ಗೊಂಡು ಮಾತನಾಡಿದರು. ಡಾ.ವಿಜಯನಳಿನಿ ರಮೇಶ, ಸಾಹಿತಿಗಳಾದ ಟಿ.ಎಂ.ರಮೇಶ, ಜಿ.ಜಿ.ಹೆಗಡೆ ಬಾಳಗೋಡ, ಪ್ರಸಾದ ಹಲಗೇರಿ ಇತರರು ಸಂವಾದದಲ್ಲಿ ಪಾಲ್ಗೊಂಡಿದ್ದರು.
ಪತ್ರಿಕಾ ಸಂವಾದ ಗೋಷ್ಠಿಯ ಅಧ್ಯಕ್ಷತೆಯನ್ನು ಪತ್ರಿಕಾ ಸಂಪಾದಕ ರವೀಂದ್ರ ಭಟ್ಟ ಐನಕೈ ವಹಿಸಿ ಮಾತನಾಡಿ ಸ್ವಾತಂತ್ರ್ಯ ಪೂರ್ವದಂತೆ ಇಂದು ಪತ್ರಿಕೋದ್ಯಮ ಸೇವೆಯಾಗಿಲ್ಲ. ದೃಶ್ಯ ಮಾಧ್ಯಮ ವಿಶ್ವಾಸಾರ್ಹ ಸುದ್ದಿ ನೀಡಿದ್ದರೆ ಪತ್ರಿಕಾ ಮಾಧ್ಯಮ ನಿಲ್ಲುವ ಸಾಧ್ಯತೆಯಿತ್ತು ಎಂದರು. ಅಭ್ಯಾಗತರಾಗಿದ್ದ ಡಾ.ಶಶಿಭೂಷಣ ಹೆಗಡೆ ಮಾತನಾಡಿ ಸಮಾಜಕ್ಕೆ ಅನುಕೂಲಕರ ಸುದ್ದಿಯನ್ನು ಪ್ರತಿನಿಧಿಸುವಂತಾಗಬೇಕು. ಪತ್ರಿಕಾ ರಂಗದಲ್ಲಿರುವ ಅನೇಕರಿಗೆ ಶಬ್ದ ಪ್ರಯೋಗ ಕುರಿತು ತರಬೇತಿ ನೀಡುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮುಖ್ಯ ವಕ್ತಾರರಾಗಿದ್ದ ನಾಗರಿಕ ಪತ್ರಿಕೆಯ ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರ ಪತ್ರಿಕೋದ್ಯಮಕ್ಕೆ ಅದರದೇ ಆದ ಆದರ್ಶವಿದೆ. ಪತ್ರಿಕೆ ಯಾರನ್ನೂ ದ್ವೇಷಿಸಲು ಹುಟ್ಟಿದ್ದಲ್ಲ. ಪತ್ರಿಕೆ ಶಿಕ್ಷಣ,ರಂಜನೆಯ ಜೊತೆ ಸುದ್ದಿಬಿತ್ತುವ ಕಾರ್ಯ ಮಾಡುತ್ತಿದೆ. ಪತ್ರಿಕೋದ್ಯಮದಲ್ಲಿ ಉತ್ತರ ಕನ್ನಡ ಜಿಲ್ಲೆಯವರು ವಿಕ್ರಮ ಸಾಧಿಸಿದ್ದಾರೆ ಎಂದರು. ಸಂವಾದದಲ್ಲಿ ಅರ್ಥಧಾರಿ ಜಯರಾಮ ಭಟ್ಟ ಗುಂಜಗೋಡ, ಪತ್ರಕರ್ತರಾದ ಕೆಕ್ಕಾರ ನಾಗರಾಜ ಭಟ್ಟ, ಕನ್ನೇಶ ಕೋಲಸಿರ್ಸಿ ಪಾಲ್ಗೊಂಡಿದ್ದರು.
ಕಲಾಸಂವಾದ ಗೋಷ್ಠಿ ನಡೆದು ಅಭ್ಯಾಗತರಾಗಿ ಅಶೋಕ ಹಾಸ್ಯಗಾರ, ಮುಖ್ಯ ವಕ್ತಾರರಾಗಿ ದಿವಾಕರ ಹೆಗಡೆ ಕೆರೆಹೊಂಡ, ರಮಾನಂದ ಐನಕೈ ಪಾಲ್ಗೊಂಡಿದ್ದರು. ರಂಗಕರ್ಮಿಗಳಾದ ಗಣಪತಿ ಹಿತ್ಲಕೈ, ಗಣಪತಿ ಹುಲಿಮನೆ, ವಿ.ಶೇಷಗಿರಿ ಭಟ್ಟ, ಜಯರಾಮ ತಲವಾಟ ಇತರರು ಸಂವಾದದಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೇಕೈ ಅವರಿಗೆ ವಿದ್ವತ್ ಸಂಮಾನ ನಡೆಯಿತು. ಗಣಪತಿ ಹೆಗಡೆ ಗುಂಜಗೋಡ, ಕಾವ್ಯಶ್ರೀ ಭಟ್ಟ ಹಾಗೂ ಪ್ರೀತಿವರ್ಧನ ಭಟ್ಟ ನಿರ್ವಹಿಸಿದರು.