ಕಾರವಾರ: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಮತ್ತು ಪರಿಸರ ಸಂಘ ಬೆಂಗಳೂರು ಜಂಟಿಯಾಗಿ ಜೂನ್ 8 ರ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ “ಮಣ್ಣು ಮತ್ತು ಭೂಮಿಯ ಮೇಲೆ ಹವಾಮಾನ ಬದಲಾವಣೆಯ ಪರಿಣಾಮಗಳು” ವಿಷಯದ ಕುರಿತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದೆ.
ಪ್ರಬಂಧವು 1000 ಪದಗಳನ್ನು ಮೀರಬಾರದು ಮತ್ತು ಇಂಗ್ಲಿಷ್ ನಲ್ಲಿ ಏರಿಯಾಲ್ ಪಾಂಟ್ ಗಾತ್ರ 14 ಮತ್ತು ಕನ್ನಡದಲ್ಲಿ ನುಡಿ ಯೂನಿಕೋಡ್ 12 ಗಾತ್ರದಲ್ಲಿ ಟೈಪ್ ಮಾಡಿ ಕಳುಹಿಸಬೇಕು.
ಕರ್ನಾಟಕ ರಾಜ್ಯದ ಯಾವುದೇ ಮಂಡಳಿಯಲ್ಲಿ ಪ್ರಸ್ತುತ ದಾಖಲಾದ ಪ್ರೌಢಶಾಲಾ ವಿದ್ಯಾರ್ಥಿಗಳು ಈ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಪ್ರಬಂಧಗಳನ್ನು ಕನ್ನಡ ಅಥವಾ ಇಂಗ್ಲಿಷ್ನಲ್ಲಿ ಸಲ್ಲಿಸಬಹುದು. ಪ್ರತಿ ಭಾಷೆಗೆ ಒಬ್ಬ ಸ್ಪರ್ಧಿಗೆ ಕೇವಲ ಒಂದು ಪ್ರಬಂಧವನ್ನು ಮಾತ್ರ ಸಲ್ಲಿಸಲು ಅವಕಾಶವಿದೆ ಯಾವುದೇ ಸ್ಪರ್ಧಿಯು ಒಂದು ನಿರ್ದಿಷ್ಟ ಭಾಷೆಯಲ್ಲಿ ಒಂದಕ್ಕಿಂತ ಹೆಚ್ಚು ಪ್ರಬಂಧಗಳನ್ನು ಸಲ್ಲಿಸಿರುವುದು ಕಂಡುಬಂದರೆ, ಅವರು ಸಲ್ಲಿಸಿದ ಎಲ್ಲಾ ಪ್ರಬಂಧಗಳನ್ನು ಅಮಾನ್ಯವೆಂದು ಪರಿಗಣಿಸಲಾಗುತ್ತದೆ. ಪ್ರಬಂಧದ ಕೊನೆಯಲ್ಲಿ ಹೆಸರು, ವಿಳಾಸ ಸಂಪರ್ಕ ಸಂಖ್ಯೆ ಮತ್ತು ಇ-ಮೇಲ್ ವಿವರಗಳನ್ನು ಒದಗಿಸಬೇಕು. ಪ್ರಬಂಧವನ್ನು ಸಲ್ಲಿಸಲು ಮೇ 27 ಕೊನೆಯ ದಿನಾಂಕವಾಗಿದೆ.
ಆಯ್ಕೆಯಾಗುವ ಮೊದಲ ಮೂರು ಸ್ಥಾನ ಪಡೆದ ಪ್ರಬಂಧಗಳಿಗೆ ಪ್ರಥಮ ರೂ. 5000/-, ದ್ವಿತೀಯ ರೂ. 3000/- ಹಾಗೂ ತೃತೀಯ ರೂ. 2000/- ನಗದು ಬಹುಮಾನಗಳನ್ನು ನೀಡಲಾಗುವುದು. ಇಂಗ್ಲಿಷ್ ಮತ್ತು ಕನ್ನಡ ಪ್ರಬಂಧಗಳಿಗೆ ಪ್ರತ್ಯೇಕವಾಗಿ ಬಹುಮಾನಗಳನ್ನು ನೀಡಲಾಗುವುದು. ಸ್ಪರ್ಧೆಯ ವಿಜೇತರನ್ನು ಇ-ಮೇಲ್ ಮೂಲಕ ಸಂಪರ್ಕಿಸಲಾಗುತ್ತದೆ.
ಎಲ್ಲಾ ಪ್ರಬಂಧಗಳು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಮತ್ತು ಪರಿಸರ ಸಂಘ ಬೆಂಗಳೂರು ಜಂಟಿ ಒಡೆತನಕ್ಕೆ ಒಳಗೊಂಡಿರುತ್ತವೆ ಹಾಗೂ ಪ್ರಬಂಧಗಳನ್ನು ಯಾವುದೇ ಉದ್ದೇಶಕ್ಕಾಗಿ ಯಾವುದೇ ಮಾಧ್ಯಮದಲ್ಲಿ ಬಳಸುವ, ಪುನರುತ್ಪಾದಿಸುವ, ಪ್ರಕಟಿಸುವ, ಪ್ರಸಾರ ಮಾಡುವ ಅಥವಾ ಇತರ ರೀತಿಯಲ್ಲಿ ಸಂವಹನ ನಡೆಸುವ ಹಕ್ಕನ್ನು ಹೊಂದಿರುತ್ತದೆ.
ಮೌಲ್ಯಮಾಪನ ಮಾನದಂಡಗಳಿಗೆ ಸಂಬಂಧಿಸಿದಂತೆ ಯಾವುದೇ ವಿಚಾರಣೆಯನ್ನು ಪುರಸ್ಕರಿಸಲಾಗುವುದಿಲ್ಲ. ಅಗತ್ಯವಿದ್ದರೆ ಮೇಲಿನ ನಿಯಮಗಳಿಗೆ ತಿದ್ದುಪಡಿಗಳನ್ನು ತರಲು ಮತ್ತು ಸ್ಪರ್ಧೆಯ ವಿಜೇತರನ್ನು ಆಯ್ಕೆ ಮಾಡುವ ಅಂತಿಮ ಹಕ್ಕನ್ನು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಮತ್ತು ಪರಿಸರ ಸಂಘ ಬೆಂಗಳೂರು ಹೊಂದಿರುತ್ತದೆ.
ಪ್ರಬಂಧದ ಹಾರ್ಡ್ ಕಾಪಿಯನ್ನು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಪ್ರೊ.ಯು.ಆರ್.ರಾವ್ ವಿಜ್ಞಾನ ಭವನ, ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆ, ತೋಟಗಾರಿಕೆ ವಿಜ್ಞಾನ ಕಾಲೇಜು ಪ್ರವೇಶ ದ್ವಾರದ ಬಳಿ, ವಿದ್ಯಾರಣ್ಯಪುರ ಪೋಸ್ಟ್, ಯಲಹಂಕ, ಬೆಂಗಳೂರು- 560097 ಕ್ಕೆ ಅಂಚೆ ಮೂಲಕ ಮತ್ತು ಪಿಡಿಎಫ್ ಪ್ರತಿಯನ್ನು ಅಕಾಡೆಮಿಯ ಇ—ಮೇಲ್ essay.ksta@gmail.com ಗೆ ಕಳುಹಿಸಲು ಅಧಿಕೃತ ಪ್ರಕಟಣೆ ತಿಳಿಸಿದೆ.