ಶಿರಸಿ: ತಬಲಾ ವಾದಕ ಅನಂತ ಹೆಗಡೆ ವಾಜಗಾರ ಇವರು ರಚಿಸಿ ಸ್ವರ ಸಂಯೋಜನೆಗೊಳಿಸಿದ ಸ್ತುತಿ ಸಂಹಿತಾ ಭಕ್ತಿಗೀತ ಪುಸ್ತಕ ಹಾಗೂ ಧ್ವನಿ ಮುದ್ರಿಕೆಯ ಲೋಕಾರ್ಪಣೆ ಮತ್ತು ಸಂಗೀತ ಕಾರ್ಯಕ್ರಮ ಶ್ರೀಮನ್ನೆಲೆಮಾವು ಮಠದಲ್ಲಿ ನಡೆಯಿತು.
ಸಂಹಿತಾ ಮ್ಯೂಸಿಕ್ ಫೋರಮ್ ಮತ್ತು ಸಂಸ್ಕೃತಿ ಸಂಪದ ನೆಲೆಮಾವು ಸಹಯೋಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀಮನ್ನೆಲೆಮಾವು ಮಠದ ಶ್ರೀ ಮಾಧವಾನಂದ ಭಾರತೀ ಸ್ವಾಮೀಜಿ ಪುಸ್ತಕ ಹಾಗೂ ಧ್ವನಿ ಮುದ್ರಿಕೆಯ ಲೋಕಾರ್ಪಣೆ ಮಾಡಿದರು. ಭಕ್ತಿಮಾರ್ಗದ ಮೂಲಕ ಭಗವಂತನನ್ನು ಆರಾಧಿಸಲು ಯೋಗ್ಯವಾದ ಸ್ತುತಿ ಸಂಗ್ರಹದ ಪುಸ್ತಕ ಎಂದು ಶ್ಲಾಘಿಸಿದರು.
ನಿವೃತ್ತ ಶಿಕ್ಷಕ ಜಿ.ಆರ್.ಭಾಗವತ್ ತ್ಯಾರಗಲ್ ಮಾತನಾಡಿ, ಪುಸ್ತಕ ಕೊಂಡು ಓದುವ ಪ್ರವೃತ್ತಿ ಕಡಿಮೆ ಆಗುತ್ತಿರುವ ಈ ಕಾಲದಲ್ಲಿ ಉತ್ತಮ ಪುಸ್ತಕ ಕೊಂಡು ಓದುವ ಪ್ರಜ್ಞೆ ಬೆಳೆಯಬೇಕು ಎಂದರು. ರಾಮಚಂದ್ರ ಹೆಗಡೆ ಉಪಸ್ಥಿತರಿದ್ದರು
ನಂತರ ರಾಧಿಕಾ ಸುದರ್ಶನ ಹೆಗಡೆ ಕೋಡನಮನೆ, ಕಾವ್ಯಶ್ರೀ ಅನಂತ ಹೆಗಡೆ ವಾಜಗಾರ ಇವರಿಂದ ಭಕ್ತಿಗೀತ ಗಾಯನ ನಡೆಯಿತು. ತದನಂತರ ಕಲಾವಿದರಾದ ಸಮೀರ ರಾವ್ ಕೊಳಲು ಮತ್ತು ಉಸ್ತಾದ್ ಶಫೀಕ್ ಖಾನ್ ಸಿತಾರ್ ಜುಗಲ್ ಬಂದಿ ಸುಶ್ರಾವ್ಯವಾಗಿ ಮೂಡಿಬಂತು. ತಬಲಾದಲ್ಲಿ ಅನಂತ ಹೆಗಡೆ ವಾಜಗಾರ, ಹಾರ್ಮೋನಿಯಂನಲ್ಲಿ ಸತೀಶ್ ಭಟ್ ಹೆಗ್ಗಾರ್ ಸಾಥ್ ನೀಡಿದರು.
ಮಧುಶ್ರೀ ಹೆಗಡೆ ಪ್ರಾರ್ಥಿಸಿದರು. ವಿನಾಯಕ ಭಟ್ ಪ್ರಾಸ್ತಾವಿಕ ಮಾತನಾಡಿದರು. ಮಹೇಶ್ ಭಟ್ ಕಡೇಮನೆ ಪುಸ್ತಕ ಪರಿಚಯ ಮಾಡಿದರು. ಯುವ ಕವಿ ಗಣೇಶ ಬಿಳೇಕಲ್ ನಿರೂಪಿಸಿದರೆ, ಚಂದ್ರಶೇಖರ ಹೆಗಡೆ ವಂದಿಸಿದರು.