ಸಿದ್ದಾಪುರ: ತಾಲೂಕಿನ ಹಲವೆಡೆ ಮಂಗಳವಾರ ಮಧ್ಯಾಹ್ನ ಮಳೆ ಬಿದ್ದಿದ್ದು ಪಟ್ಟಣದ ರವೀಂದ್ರನಗರದ ಮನೆಯೊಂದರ ಹಿತ್ತಲಿನಲ್ಲಿರುವ ತೆಂಗಿನಮರಕ್ಕೆ ಸಿಡಿಲು ಬಡಿದು ಕೆಲವು ಸಮಯ ಬೆಂಕಿ ಉರಿಯುತ್ತಿರುವ ದೃಶ್ಯ ಕಂಡುಬಂದಿದೆ.
ತೆಂಗಿನಮರಕ್ಕೆ ಸಿಡಿಲು ಬಡಿದು ಬೆಂಕಿ ಬಿದ್ದಿದ್ದರಿಂದ ಅಕ್ಕ ಪಕ್ಕದ ಮನೆಯವರು ತಮ್ಮ ಮನೆಗೆ ತಾಗಬಹುದು ಎನ್ನುವ ಭಯದಲ್ಲಿದ್ದರು. ಆದರೆ ಸ್ವಲ್ಪ ಸಮಯದಲ್ಲಿಯೇ ಮಳೆ ಜೋರಾಗಿ ಬಿದ್ದಿದ್ದರಿಂದ ಬೆಂಕಿ ಆರಿದೆ. ಪಟ್ಟಣದಲ್ಲಿ ಅಗ್ನಿಶಾಮಕ ವಾಹನ ಇದೆ ಎಂದು ತೆಂಗಿನಮರಕ್ಕೆ ಬೆಂಕಿ ಬಿದ್ದ ತಕ್ಷಣ ಸ್ಥಳೀಯರಾದ ವಿಜಯ್ ನಾರಾಯಣ ಹೆಗಡೆ ಅವರು ಅಗ್ನಿಶಾಮಕದಳದವರಿಗೆ ಮಾಹಿತಿ ನೀಡಿದರೆ ನಮ್ಮಲ್ಲಿ ವಾಹನ ಇದೆ. ಆದರೆ ನಮ್ಮ ವಾಹನಕ್ಕೆ 17ವರ್ಷ ಆಗಿದ್ದು ಪಾಸಿಂಗ್ ಆಗಿರುವುದಿಲ್ಲ. ಆದ ಕಾರಣ ವಾಹನವನ್ನು ಹೊರಗೆ ಹಾಕುವ ಹಾಗಿಲ್ಲ. ಬೆಂಕಿ ತೀವ್ರತೆ ಇದ್ದರೆ ತಿಳಿಸಿ ಶಿರಸಿ ಅಥವಾ ಸೊರಬದಿಂದ ಅಗ್ನಿಶಾಮಕ ವಾಹನ ತರಿಸಲಾಗುವುದು ಎಂದು ಅಗ್ನಿಶಾಮಕದಳದವರು ಹೇಳುತ್ತಾರೆ. ಅದೇ ಯಾವುದಾದರೂ ಮನೆಗೆ ಬೆಂಕಿ ಬಿದ್ದರೆ ಗತಿ ಏನು?. ಪಟ್ಟಣದಲ್ಲಿಯೇ ಅಗ್ನಿಶಾಮಕವಾಹನ ಇದ್ದರೂ ಏನು ಪ್ರಯೋಜನ. ಕಳೆದ ಐದಾರು ತಿಂಗಳಿನಿಂದ ತಾಲೂಕಿನ ಹಲವೆಡೆ ಬೆಟ್ಟ, ತೋಟ, ಬಿಳೆಹುಲ್ಲಿನ ಗೊಣಬೆಗಳಿಗೆ ಬೆಂಕಿ ಬಿದ್ದು ಅನಾಹುತವಾಗಿದ್ದರೂ ಸಂಬಂಧ ಪಟ್ಟ ಇಲಾಖೆ ಏನೂ ಕ್ರಮ ಕೈಗೊಂಡಿಲ್ಲ. ಅಲ್ಲದೇ ಈ ಕುರಿತು ಸ್ಥಳೀಯ ಶಾಸಕರಿಗೆ ಸಾರ್ವಜನಿಕರು ಗಮನಕ್ಕೆ ತಂದಿದ್ದಲ್ಲದೇ ಕೆಡಿಪಿ ಸಭೆಯಲ್ಲಿ ವಿಷಯ ಪ್ರಸ್ತಾಪವಾದಾಗ ಶಾಸಕರು ಈ ಕುರಿತು ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದ್ದರೂ. ಹೇಳಿ ಈಗ ಮೂರು ತಿಂಗಳಾದರೂ ಅವ್ಯವಸ್ಥೆ ಹಾಗೆಯೇ ಮುಂದುವರೆದಿರುವ ಬಗ್ಗೆ ಸಾರ್ವಜನಿಕರು ಅಸಮಾದಾನ ವ್ಯಕ್ತಪಡಿಸಿ ಸಿದ್ದಾಪುರದಲ್ಲಿ ಅಗ್ನಿಶಾಮಕ ವಾಹನ ನಿರಂತರವಾಗಿ ಇರುವಂತೆ ಉಸ್ತುವಾರಿ ಸಚಿವರು, ಶಾಸಕರು ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರಾದ ರವೀಂದ್ರನಗರದ ವಿಜಯ್ ನಾರಾಯಣ ಹೆಗಡೆ ಆಗ್ರಹಿಸಿದ್ದಾರೆ.