ದಾಂಡೇಲಿ : ಹವಾಮಾನ ವೈಪರಿತ್ಯದಿಂದ ನಾಡಿನಲ್ಲಿ ಬರಗಾಲ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೃಷಿ ಉತ್ಪಾದಕತೆಯಲ್ಲಿ ನೇರ ಪರಿಣಾಮ ಬೀರಿದೆ. ರಾಜ್ಯದಲ್ಲಿ ಕಳೆದ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದಾದ ಬೆಳೆ ನಷ್ಟಕ್ಕಾಗಿ ರೈತರಿಗೆ ಪರಿಹಾರ ವಿತರಣೆ ಪ್ರಕ್ರಿಯೆ ಆರಂಭವಾಗಿದೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು ಹಾಗೂ ಶಾಸಕರಾದ ಆರ್.ವಿ.ದೇಶಪಾಂಡೆಯವರು ಮಾಧ್ಯಮಕ್ಕೆ ನೀಡಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅವರು ಶನಿವಾರ ಮಾಧ್ಯಮಕ್ಕೆ ನೀಡಿದ ಪ್ರಕಟಣೆಯಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ನಿಧಿ ಮಾರ್ಗಸೂಚಿಯನ್ವಯ ರಾಜ್ಯ ಸರ್ಕಾರವು ಸಣ್ಣ ಮತ್ತು ಅತಿ ಸಣ್ಣ ಬೇಸಾಯ ಮಾಡುವ ಕುಟುಂಬಗಳಿಗೆ ಆಗಿರುವ ಜೀವನೋಪಾಯದ ನಷ್ಟಗಳಿಗೆ ತಾತ್ಕಾಲಿಕವಾಗಿ ಬರ ಪರಿಹಾರ ಹಣವನ್ನು ಅವರ ಖಾತೆಗಳಿಗೆ ನೇರವಾಗಿ ವರ್ಗಾಯಿಸಿದೆ.
ಇದರಲ್ಲಿ ಹಳಿಯಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರೈತರ ಬ್ಯಾಂಕ್ ಖಾತೆಗಳಿಗೆ ಒಟ್ಟು 1652.30 ಲಕ್ಷ ರೂಪಾಯಿಗಳ ಬೆಳೆ ಪರಿಹಾರವನ್ನು ಹಂಚಿಕೆ ಮಾಡಲಾಗಿದ್ದು , ಹಳಿಯಾಳ ತಾಲೂಕಿಗೆ ರೂ.1462.44 ಲಕ್ಷ, ದಾಂಡೇಲಿ ತಾಲೂಕಿಗೆ ರೂ.58.88 ಲಕ್ಷ ಹಾಗೂ ಜೋಯಿಡಾ ತಾಲೂಕಿಗೆ 130.98 ಲಕ್ಷ ಬೆಳೆ ಪರಿಹಾರವನ್ನು ರೈತರ ಖಾತೆಗಳಿಗೆ ಜಮಾ ಮಾಡಲಾಗಿದೆ.
ಪ್ರಾಕೃತಿಕ ಅಸಮತೋಲನದಿಂದ ಸಂಕಷ್ಟಕೊಳ್ಳಗಾದ ರೈತರಿಗೆ ಪರಿಹಾರ ಧನವು ಅನುಕೂಲವಾಗಲಿದೆ ಎಂದು ಆರ್.ವಿ.ದೇಶಪಾಂಡೆ ಅವರು ತಿಳಿಸಿದ್ದಾರೆ.