ಶಿರಸಿ: ಇಲ್ಲಿನ ಕವಿಕಾವ್ಯ ಬಳಗದ ಹದಿನಾರನೇ ವರ್ಷದ ಸ್ನೇಹ ಸಮ್ಮಿಲನ ಮತ್ತು ಉಪಾಯನ ಪ್ರಶಸ್ತಿ ಪ್ರದಾನ ಸಮಾರಂಭವು ಮೇ.12, ಭಾನುವಾರದಂದು ಬೆಳಿಗ್ಗೆ 10ಗಂಟೆಯಿಂದ ನಗರದ ಹೊಟೆಲ್ ಮಧುವನದ ಆರಾಧನಾ ಸಭಾಂಗಣದಲ್ಲಿ ನಡೆಯಲಿದೆ.
ನಿವೃತ್ತ ಶಿಕ್ಷಕ ಎಸ್.ಎಸ್.ಭಟ್ ಉದ್ಘಾಟಿಸುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಉಪನ್ಯಾಸಕಿ ಡಾ.ವಿಜಯನಳಿನಿ ರಮೇಶ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರ್ ಆಗಮಿಸಲಿದ್ದಾರೆ. 11.30ರಿಂದ ಜಾನಪದ ಗಾಯನ ಮತ್ತು ಕವಿಗೋಷ್ಠಿ ನಡೆಯಲಿದ್ದು, ಅಧ್ಯಕ್ಷತೆಯನ್ನು ಲೇಖಕ ಅಶೋಕ ಹಾಸ್ಯಗಾರ ವಹಿಸಲಿದ್ದು, ಆಶಯ ಭಾಷಣವನ್ನು ಕಸಾಪ ತಾಲೂಕಾಧ್ಯಕ್ಷ ಜಿ.ಸುಬ್ರಾಯ ಭಟ್ ಬಕ್ಕಳ ನುಡಿಯಲಿದ್ದಾರೆ.
ಮಧ್ಯಾಹ್ನ 2 ಗಂಟೆಯಿಂದ ಪರಿಸರ ಮತ್ತು ಅಭಿವೃದ್ಧಿ ವಿಷಯದ ಮೇಲೆ ಚರ್ಚಾಗೋಷ್ಠಿ ನಡೆಯಲಿದ್ದು, ಅಧ್ಯಕ್ಷತೆಯನ್ನು ಪ್ರಾಚಾರ್ಯ ಜಿ.ಎ.ಹೆಗಡೆ ಸೋಂದಾ ವಹಿಸಲಿದ್ದಾರೆ. ಸಂಜೆ 4 ಗಂಟೆಯಿಂದ ಉಪಾಯನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಸಾಹಿತಿ ಡಿ.ಎಸ್.ನಾಯ್ಕ್ ಇವರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ. ವಿಮರ್ಶಕ ಆರ್.ಡಿ.ಹೆಗಡೆ ಆಲ್ಮನೆ ಅಧ್ಯಕ್ಷರಾಗಿ ಆಗಮಿಸಲಿದ್ದು, ಹಿರಿಯ ಸಾಹಿತಿ ಭಾಗೀರಥಿ ಹೆಗಡೆ ಗೌರವ ಉಪಸ್ಥಿತಿನೀಡಲಿದ್ದಾರೆ. ಮುಕ್ತಕ ಕವಿ ಕೃಷ್ಣ ಪದಕಿ ಅಭಿನಂದನಾ ಭಾಷಣ ನುಡಿಯಲಿದ್ದಾರೆ. ಕಾರ್ಯಕ್ರಮಕ್ಕೆ ಸರ್ವರೂ ಆಗಮಿಸಬೇಕೆಂದು ಸಂಘಟಕರು ಕೋರಿದ್ದಾರೆ.