Slide
Slide
Slide
previous arrow
next arrow

ಮೇ.11ಕ್ಕೆ ಗಿಳಿಗುಂಡಿಯಲ್ಲಿ ರಾಗ ಸಂಗೀತೋತ್ಸವ “ನಾದಸಿರಿ”

300x250 AD

ಉತ್ತರ ಕನ್ನಡ ಜಿಲ್ಲೆಯ ಶಿರಸಿ-ಸಿದ್ದಾಪುರ ತಾಲೂಕಿನ ಗಡಿಯಂಚಿನಲ್ಲಿರುವ ಪ್ರಕೃತಿ-ಸಂಸ್ಕೃತಿಗಳ ಸಂವೇದನೆಯ ತಾಣವಾದ ಗಿಳಿಗುಂಡಿಯಲ್ಲಿ, ಹುಟ್ಟಿಕೊಂಡ ಸಂಸ್ಥೆ “ಸ್ವರ ಸಂವೇದನಾ ಪ್ರತಿಷ್ಠಾನ ಗಿಳಿಗುಂಡಿ”. ಕಳೆದ 10 ವರ್ಷಗಳಿಂದ ಭಾರತೀಯ ಶಾಸ್ತ್ರೀಯ ಸಂಗೀತದ ಅಧ್ಯಯನ-ಅಧ್ಯಾಪನ-ಅಭಿವ್ಯಕ್ತಿ ಹಾಗೂ ಪ್ರಚಾರಕ್ಕಾಗಿ, ಸಂಗೀತ ಪರಂಪರೆಯನ್ನು ಉಳಿಸಲು, ಬೆಳೆಸಲು ಸತತವಾಗಿ ಪ್ರಯತ್ನಿಸುತ್ತಿದೆ. 2012 ರಿಂದ ಮೊದಲ್ಗೊಂಡು ಪ್ರತೀ ವರ್ಷ ರಾಜ್ಯದ ಪ್ರಸಿದ್ಧ ಹಾಗೂ ಉದಯೋನ್ಮುಖ ಕಲಾವಿದರುಗಳ ಜೊತೆ, ರಾಷ್ಟ್ರಸ್ತರದ, ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರುಗಳನ್ನು ಗಿಳಿಗುಂಡಿಯಂತಹ ಗ್ರಾಮೀಣ ಭಾಗದ ವೇದಿಕೆಗೆ ಆಮಂತ್ರಿಸಿ, ಉನ್ನತ ಮಟ್ಟದ ಸಂಗೀತೋತ್ಸವಗಳನ್ನು ಆಯೋಜಿಸುತ್ತಾ ಬಂದಿದೆ. ತನ್ಮೂಲಕ “ನಾದಸಿರಿ” ವಾರ್ಷಿಕ ಸಂಗೀತೋತ್ಸವದಲ್ಲಿ ಭಾಗವಹಿಸಿದ ಎಲ್ಲಾ ಅಗ್ರಮಾನ್ಯ ಕಲಾವಿದರುಗಳ ಹಾಗೂ ಕಲಾರಸಿಕರ ಪ್ರಶಂಸೆಗೆ ಪಾತ್ರವಾಗಿರುವ ಸ್ವರ ಸಂವೇದನಾ ಪ್ರತಿಷ್ಠಾನವು “ನಾದಸಿರಿ” ಸಂಗೀತೋತ್ಸವವನ್ನು,ಭಾರತದ ಅಗ್ರಮಾನ್ಯ ಹಾಗೂ ಪ್ರತಿಷ್ಠಿತ ವೇದಿಕೆಗಳಲ್ಲೊಂದಾಗಿ ಮಾಡುವಲ್ಲಿ ಯಶಸ್ವಿಯಾಗಿದೆ.

ಈ ವರ್ಷ ಸ್ವರ ಸಂವೇದನಾ ಪ್ರತಿಷ್ಠಾನವು ತನ್ನ ಸಂಗೀತ ಪಯಣದ ೧೦ ವಸಂತಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ, “ನಾದಸಿರಿ” ರಾಗ ಸಂಗೀತೋತ್ಸವವನ್ನು ವರ್ತಮಾನದ ಸರ್ವಶ್ರೇಷ್ಠ ಕಲಾವಿದರುಗಳನ್ನು ಆಮಂತ್ರಿಸಿ, ದಶಮಾನೋತ್ಸವವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲು ಸಂಕಲ್ಪಗೊಂಡಿದೆ. ವಿವಿಧ ಪರಂಪರೆಗಳ, ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರುಗಳ ಸಮ್ಮಿಲನದ ಈ ಸಂಗೀತ ಸಮ್ಮೇಳನವು ದೇಶದಲ್ಲೇ ಅಪೂರ್ವ ಸಂಯೋಜನೆಗೆ ಸಾಕ್ಷಿಯಾಗಲಿದೆ.

ಸಂಗೀತೋತ್ಸವವು ಮೇ.೧೧,ಶನಿವಾರದಂದು ಗಿಳಿಗುಂಡಿಯ ವೆಂಕಟೇಶ ನಿಲಯದಲ್ಲಿ ನಡೆಯಲಿದ್ದು,ಅಂದು ಮುಂಜಾನೆ 08:00ರಿಂದ ರಾಜ್ಯದ ಭರವಸೆಯ ಯುವ ಕಲಾವಿದೆ, ಕುಮಾರಿ ಸಂಗೀತಾ ಹೆಗಡೆ, ಗಿಳಿಗುಂಡಿಯವರ ಗಾಯನ ನಡೆಯಲಿದೆ. ನಂತರ ಗ್ವಾಲಿಯರ್ ಘರಾಣೆಯ, ಪಂ| ಗಜಾನನ ಭುವಾ ಜೋಶಿಯವರ ಪರಂಪರೆಯ ಹಿರಿಯ ಗಾಯಕಿ, ಅಮೋಘ ರಾಗಧಾರಿ-ತಾನ್ಗಳ ಜೊತೆ, ವಿಶಿಷ್ಟ ಲಯಕಾರಿಗಳ ಸಹಿತವಾದ ವಿದ್ವತ್ಪೂರ್ಣ ಗಾಯನದ ಮೂಲಕ ಪ್ರಸಿದ್ಧರಾದ, ಮುಂಬೈಯ ಶುಭದಾ ಪರಾಡ್ಕರ್ ರವರಿಂದ ಗಾಯನ ಜರುಗಲಿದೆ.

ಬೆಳಿಗ್ಗೆ11:30ರಿಂದ ಗುರುಪಂಚಾಕ್ಷರಿ ಗವಾಯಿಗಳ ಶಿಷ್ಯರಾದ, ಕಿರಾನಾ ಘರಾಣೆಯ ದೇಶದ ಶ್ರೇಷ್ಠ ಗಾಯಕರಲ್ಲೊಬ್ಬರಾದ, ತಮ್ಮ ದಾಸರ ಪದ- ಭಕ್ತಿಸಂಗೀತದ ಶ್ರೇಷ್ಠ ಪ್ರಸ್ತುತಿಗಳಿಂದ, ಜನಮಾನಸದಲ್ಲಿ ಚಿರಪರಿಚಿತರಾಗಿರುವ ಪದ್ಮಶ್ರೀ ಪುರಸ್ಕೃತ, ಧಾರವಾಡದ ಪಂ| ಎಂ. ವೆಂಕಟೇಶಕುಮಾರ್ ರವರಿಂದ ಗಾಯನ ನಡೆಯಲಿದೆ.

ಸಂಜೆ 4:30ರಿಂದ ಗ್ವಾಲಿಯರ್ ಶೈಲಿಯ ಪ್ರಬುದ್ಧ ಗಾಯಕರಾಗಿರುವ, ನೆರೆ ರಾಜ್ಯ ಗೋವಾದ ಶಶಾಂಕ್ ಮಕ್ತೇದಾರ್ ರವರಿಂದ ಗಾಯನ ಕಾರ್ಯಕ್ರಮ ನಡೆಯಲಿದೆ. 06:30ರಿಂದ, ಪಂಜಾಬ್ ಘರಾಣೆಯ ಶ್ರೇಷ್ಠ ತಬಲಾ ವಾದಕರಾಗಿ, ತಮ್ಮ ಪಾಂಡಿತ್ಯ ಪೂರ್ಣ ತಬಲಾ ಸ್ವತಂತ್ರ ವಾದನ ಹಾಗೂ ಸಂವೇದನಾಶೀಲ ಸಹವಾದನದ ಮೂಲಕ ಪ್ರಸಿದ್ಧರಾದ, ತಬಲಾ ವಾದನದ ಪ್ರಾವೀಣ್ಯತೆಯನ್ನು ಪ್ರವರ್ಧಮಾನಕ್ಕೇರಿಸುತ್ತಿರುವ, ಮುಂಬೈಯ ಪಂ| ಯೋಗೇಶ್ ಸಂಶಿಯವರಿಂದ ನಡೆಯುವ ತಬಲಾ ಸ್ವತಂತ್ರವಾದನ, ಸಂಗೀತೋತ್ಸವಕ್ಕೆ ಮೆರುಗು ತರುವಲ್ಲಿ ನಿರೀಕ್ಷೆ ಹೆಚ್ಚಿಸಿದೆ.

300x250 AD

ರಾತ್ರಿ 08:00 ಘಂಟೆಯಿಂದ, ಜೈಪುರ್-ಅತ್ರೌಲಿ ಘರಾಣೆಯ ಶ್ರೇಷ್ಠ ಗಾಯಕಿ,ವಿದುಷಿ| ಮಾಣಿಕ್ ಬಿಡೆ ಪರಂಪರೆಯ ಪ್ರಸಿದ್ಧ ಗಾಯಕಿ, ಮುಂಬೈಯ ವಿದುಷಿ ಅಶ್ವಿನಿ ಭಿಢೆ ದೇಶಪಾಂಡೆಯವರಿಂದ ಗಾಯನ ನಡೆಯಲಿದ್ದು, ನಂತರ ರಾತ್ರಿ 11:30ರಿಂದ ಗ್ವಾಲಿಯರ್- ಜೈಪುರ್-ಆಗ್ರಾ ಘರಾಣೆಗಳ ಪ್ರತಿನಿಧಿಯಾಗಿ, ಪ್ರಬುದ್ಧ ಶಾಸ್ತ್ರೀಯ ಗಾಯನ ಪ್ರವೀಣರಾದ, ಯುವಪೀಳಿಗೆಯ ಸಂಗೀತಗಾರರಿಗೆ ಆದರ್ಶ ಗಾಯಕರಾಗಿ ಗುರುತಿಸಲ್ಪಟ್ಟ, ಪದ್ಮಶ್ರೀ ಪುರಸ್ಕೃತ ಪಂ| ಉಲ್ಲಾಸ್ ಕಶಾಲ್ಕರ್ ರವರ ಗಾಯನದೊಂದಿಗೆ ಸಂಗೀತೋತ್ಸವವು ಸಮಾಪ್ತಗೊಳ್ಳಲಿದೆ.

ಸಹಕಲಾವಿದರಾಗಿ ತಬಲಾದಲ್ಲಿ ಪಂ| ಯೋಗೇಶ್ ಸಂಶಿ, ಕೇಶವ ಜೋಶಿ, ಯತಿ ಭಾಗವತ್, ಹಾಗೂ ಸಂವಾದಿನಿಯಲ್ಲಿ ಗುರುಪ್ರಸಾದ ಹೆಗಡೆ, ಗಿಳಿಗುಂಡಿ, ಸತೀಶ್ ಭಟ್, ಹೆಗ್ಗಾರ್, ಭರತ್ ಹೆಗಡೆ, ಹೆಬ್ಬಲಸುರವರು ಸಹಕರಿಸಲಿದ್ದಾರೆ.

ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು, ಯಥಾ ಸಾಧ್ಯ ಸತ್ಕಾರವನ್ನು ಸ್ವೀಕರಿಸಿ, ಸಂಗೀತೋತ್ಸವವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಲಾಗಿದೆ.

Share This
300x250 AD
300x250 AD
300x250 AD
Back to top