Slide
Slide
Slide
previous arrow
next arrow

‘ಕಡವೆ ಕುಟುಂಬ’ಕ್ಕೆ ಮಸಿ ಬಳಿದರೆ ಅಧಿಕಾರದ ಖುರ್ಚಿ ಶಾಶ್ವತ’

300x250 AD

ಇದು ಹೊಸ ಅಧ್ಯಕ್ಷರ ಹಳೇ ವರಸೆ | ಕಡವೆ ಕುಟುಂಬದ ಮೇಲಿನ ವಿಶ್ವಾಸಕ್ಕೆ ಚ್ಯುತಿಯಿಲ್ಲ ಎಂದ ಸದಸ್ಯರು

ಸಹಕಾರಿ ಕ್ಷೇತ್ರಕ್ಕೆ ಉತ್ತರ ಕನ್ನಡ ಮಾದರಿಯಾದ ಕಾಲವೊಂದಿತ್ತು. ಶತಮಾನದ ಹಿಂದೆ ಅಂದಿನ ನಮ್ಮ ಜನರು ತಮ್ಮ ಮನೆಯ ಸ್ವಂತ ಆಸ್ತಿಯನ್ನು ಊರಿನ ಶಾಲೆಗೆ, ಆಸ್ಪತ್ರೆಗೆ ನೀಡಿ ಊರಿಗೊಂದು ಆಸ್ಪತ್ರೆ, ಶಾಲೆ ಇರುವಂತೆ ಮಾಡಿದ್ದರು. ಅದೇ ರೀತಿ ಸಹಕಾರಿ ಚಳುವಳಿ ಆರಂಭವಾದಾಗ ಪ್ರತಿ ಮನೆ ಮನೆ ತಲುಪಿ, ಸಹಕಾರಿ ವ್ಯವಸ್ಥೆ ಗಟ್ಟಿಯಾಗುವಂತೆ ಮಾಡಿದ್ದರು. ಅದರ ಪ್ರತಿಫಲವೇ ಇಂದು ಪ್ರತಿ ಹಳ್ಳಿಯಲ್ಲಿ ಸೊಸೈಟಿಗಳು ಆಚರಿಸುತ್ತಿರುವ ಶತಮಾನದ ಸಂಭ್ರಮಾಚರಣೆ, ಸುವರ್ಣ ಮಹೋತ್ಸವ ಇತ್ಯಾದಿ. ತಮಗೆ ಈಗ ಕಷ್ಟವಾದರೂ ಅಡ್ಡಿಯಿಲ್ಲ. ತಮ್ಮ ಮುಂದಿನ ಪೀಳಿಗೆಗೆ ಅನುಕೂಲವಾಗಬೇಕೆಂದು ನಮ್ಮ ಅಂದಿನ‌ ಹಿರಿಯರು ಊರೂರು ಅಲೆದಾಡಿ, ಕಷ್ಟಪಟ್ಟು ಸುರಿಸಿದ ಬೆವರಿನ ಪ್ರತಿಫಲವೇ ಇಂದಿನ ಸಹಕಾರಿ ವ್ಯವಸ್ಥೆ. ಅವರ ಪ್ರತಿಫಲದ ಹಣ್ಣನ್ನು ಸವಿಯುತ್ತಿರುವ ಅನೇಕರಿಗೆ ಅಂತಹ ಕಷ್ಟದ ಅರಿವೇ ಇಲ್ಲ. ‘ಗಿಡುಗ ಕಟ್ಟಿದ ಕೋಟೆ ಏರಿ ಕಾಗೇ ಕಾವ್ ಕಾವ್ ಎಂದಂತೆ’.

ಅಂದಿನ ಸಹಕಾರಿ ವ್ಯವಸ್ಥೆಯಲ್ಲಿ ಕಾಣಬಹುದಾದ ಮತ್ತೊಂದು ಅಪೂರ್ವ ಅಂಶವೆಂದರೆ ಅದು ಶುದ್ಧ ಸಹಕಾರಿ. ಯಾವ ಪಕ್ಷ, ಯಾವ ಪಂಗಡ, ಬಣ ಎಂದು ನೋಡದೇ ಆತ ಸಹಕಾರಿ ವ್ಯವಸ್ಥೆಯಲ್ಲಿ ಬಂದಮೇಲೆ ಸದಸ್ಯರ ಹಿತವೇ ಆತನ ಮೊದಲ ಆದ್ಯತೆಯಾಗಿತ್ತು. ಎದುರಾಳಿಗಳ ದ್ವೇಷ, ಮತ್ಸರ, ರಾಜಕೀಯ ಏನೇ ಇದ್ದರೂ ಅವೆಲ್ಲವೂ ಸಹಕಾರಿ ವ್ಯವಸ್ಥೆಯಿಂದ ಹೊರಗೆ ನಿಂತಿರುತಿತ್ತು. ಆ ಕಾರಣಕ್ಕೆ ಶತಮಾನಗಳಿಂದ ಸಹಕಾರಿ ವ್ಯವಸ್ಥೆ ಉತ್ತರ ಕನ್ನಡದಲ್ಲಿ ಮಾದರಿ ಎನಿಸಿಕೊಂಡಿದೆ. ಆದರೆ ಕಾಲ ಕಳೆದಂತೆ ಅಂತಹ ಮೌಲ್ಯಾಧಾರಿತ ಸಹಕಾರಿ ವ್ಯವಸ್ಥೆ ಮತ್ತು ಬಹುತೇಕ ಸಹಕಾರಿ ನಾಯಕರು ಸ್ವಾರ್ಥ, ಆಸೆಯ ಕಾರಣಕ್ಕೆ ತಮ್ಮ ಹೊಳಪು ಕಳೆದುಕೊಳ್ಳುತ್ತಿದ್ದಾರೆವೆಂದರೆ ಸುಳ್ಳಾಗಲಾರದು. ತಮ್ಮ ಅಧಿಕಾರದ ದಾಹ, ದುರಾಸೆಗಾಗಿ ಎಂತಹ ನೀಚ ಕೃತ್ಯವನ್ನೂ ಮಾಡುವ ಮಟ್ಟಿಗೆ ಬಂದಿರುವುದು ಸಹಕಾರಿ ವ್ಯವಸ್ಥೆಯ ದುರಾಡಳಿತ ಮತ್ತು ಜನರ ವಿಶ್ವಾಸ ಕಳೆದುಕೊಳ್ಳುವ ಸಮಯ ಎಂದರೆ ತಪ್ಪಾಗಲಾರದು.

ಇನ್ನು, ರಾಜ್ಯ ಪ್ರಸಿದ್ಧ ಪ್ರತಿಷ್ಟಿತ ಟಿಎಸ್ಎಸ್ ಗೆ ಸಂಬಂಧಿಸಿ ಹೇಳುವುದಾದರೆ, ಕಳೆದ 40 ವರ್ಷಗಳಿಂದ ಕಡವೆ ಕಟುಂಬದ ಅಧಿಪತ್ಯದಲ್ಲಿಯೇ ಆಡಳಿತ ಇತ್ತೆಂಬುದು ಬಹುತೇಕರ ನಂಬಿಕೆ. ಆದರೆ ದಿವಂಗತ ಕಡವೆ ಹೆಗಡೆಯವರ ನಂತರದಲ್ಲಿ ಅವರ ಅಳಿಯ ಶಾಂತಾರಾಮ ಹೆಗಡೆ ಶೀಗೇಹಳ್ಳಿ ಸಂಸ್ಥೆಯ ಅಧ್ಯಕ್ಷರಾಗಿ ಸಂಸ್ಥೆಯನ್ನು ಮುನ್ನಡೆಸಿದರು. ಆರಂಭದಲ್ಲಿ ಕಡವೆ ಕುಟುಂಬದ ಅಳಿಯ ಎನ್ನುವ ಕಾರಣಕ್ಕೆ ಸದಸ್ಯ ರೈತರು ಶಾಂತಣ್ಣನನ್ನು ಒಪ್ಪಿ ಅಪ್ಪಿದ್ದರು. ಹಾಗೆ ನೋಡಿದರೆ ಕಡವೆ ಕುಟುಂಬ ಸೊಸೈಟಿಯ ಅಧಿಕಾರದಿಂದ ದೂರವೇ ಇತ್ತು. ಆದರೆ ಜನರ ಪ್ರೀತಿ ಮಾತ್ರ ಕಡವೆ ಕುಟುಂಬದ ಮೇಲೆ ಸದಾ ಹೆಚ್ಚುತ್ತಲೇ ಇತ್ತು. ಅದಕ್ಕೆ ಕಾರಣ ದಿವಂಗತ ಕಡವೆ ಹೆಗಡೆಯವರು ನಡೆದಿದ್ದ ಸಹಕಾರಿ ತತ್ವ ಆಧಾರಿತ ಜೀವನ ಮತ್ತು ಅವರ ಪುತ್ರ ರಾಮಕೃಷ್ಣ ಹೆಗಡೆ ಕಡವೆಯವರ ಜನಪರ ಕಾಳಜಿ, ರೈತಪರ ನಿಲುವು, ಪ್ರಾಮಾಣಿಕತೆ ಮತ್ತು ಪರಿಶುದ್ಧತೆ. ಈ ಕಾರಣದಿಂದಲೇ ಕಳೆದ ಆಗಸ್ಟ್ ನಲ್ಲಿ ನಡೆದ ಟಿಎಸ್ಎಸ್ ಚುನಾವಣೆಯಲ್ಲಿ ಅಬ್ಬರದ ಅಪಪ್ರಚಾರ, ಸುಳ್ಳುಗಳ ನಡುವೆ ಹಳೆಯ ಆಡಳಿತ ಮಂಡಳಿಯ ಎಲ್ಲರನ್ನೂ ಸೋಲಿಸಿದ್ದ ಜನತೆ ಕಡವೆ ಕುಟುಂಬದ ರಾಮಕೃಷ್ಣ ಹೆಗಡೆ ಕಡವೆ ಅವರನ್ನು ಗೆಲ್ಲಿಸಿರುವುದು. ಸಂಸ್ಥೆಯ ರೈತ ಸದಸ್ಯರಿಗೆ ಕಡವೆ ಕಟುಂಬದ ಬಗ್ಗೆ ಇರುವ ಗೌರವ, ಕಳಕಳಿ, ಕಾಳಜಿಯನ್ನು ತೋರಿಸುತ್ತದೆ. ಅದೇ ರೀತಿ ಕಡವೆಯವರೂ ಸಹ ರೈತರಿಗೆ ದ್ರೋಹವೆಸಗುವ ಯಾವ ಕಾರ್ಯವನ್ನೂ ಮಾಡಿಲ್ಲವೆಂಬುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ.

ಅಧಿಕಾರ ಶಾಶ್ವತ ಬೇಕೆಂದರೆ ‘ಕಡವೆ’ಗೆ ಮಸಿ ಬಳಿಯಬೇಕು:

300x250 AD

ಅಭಿವೃದ್ಧಿ, ಪಾರದರ್ಶಕತೆ ಹೆಸರಿನಲ್ಲಿ ಅಧಿಕಾರಕ್ಕೆ ಏರಿರುವ ಹೊಸ ಅಧ್ಯಕ್ಷರಿಗೆ ಸಂಸ್ಥೆಯ ಆಡಳಿತ ಈಗ ನುಂಗಲಾರದ ತುತ್ತಾಗಿದೆ. ಇವರ ಆಡಳಿತ ದರ್ಪದ ಕಾರಣಕ್ಕೆ ನುರಿತ ಸಿಬ್ಬಂದಿಗಳು ನೂರಾರು ಸಂಖ್ಯೆಯಲ್ಲಿ ಕೆಲಸ ಬಿಡುತ್ತಿದ್ದು, ಜನತೆಯ ಕೇಂದ್ರ ಬಿಂದು ಅಡಿಕೆ ಧಾರಣೆ ನೆಲಕಚ್ಚಿದೆ. ಅಭಿವೃದ್ಧಿ ಎಂಬುದು ನಿಂತ ನೀರಾಗಿದೆ. ಇವರ ಅಧಿಕಾರದ ದರ್ಪ, ವಿರೋಧಿಗಳನ್ನು ಶಾಶ್ವತವಾಗಿ ಹತ್ತಿಕ್ಕುವ ಮನೋಭಾವ, ಪರಮ ಸ್ವಾರ್ಥ ಯಾವ ಕೆಲಸಕ್ಕಾದರೂ ಇಳಿಯುವಂತೆ ಮಾಡುತ್ತಿದೆ ಎಂಬುದು ಸಂಸ್ಥೆಯ ಬಹುತೇಕ ಸದಸ್ಯರ ಅಭಿಪ್ರಾಯವಾಗಿದೆ. ಕಳೆದ 50 ವರ್ಷಗಳಿಂದ ಸಂಸ್ಥೆಯ ಹಳೆಯ ರೈತರೊಬ್ಬರ ಅನಿಸಿಕೆ ಹೇಳಬೇಕೆಂದರೆ, ಹಾಲಿ ಅಧ್ಯಕ್ಷರು ತಮ್ಮ ಆಡಳಿತದ ನಂತರ ಮತ್ತೆ ಅಧಿಕಾರಕ್ಕೆ ಬರಬೇಕೆಂದರೆ ಈ ಬಾರಿ ಮಾಡಿದಂತೆ ಅಪಪ್ರಚಾರದ ಸರಕು ಬಾಳಿಕೆಗೆ ಬರುವುದಿಲ್ಲ. ಹಾಗಾಗಿ ಬೇರೆಯದೇ ಕುತಂತ್ರ ಪ್ರಯೋಗಿಸಬೇಕೆಂದು ಎದುರಾಳಿಯನ್ನು ಶಾಶ್ವತವಾಗಿ ವ್ಯವಸ್ಥೆಯಿಂದ ದೂರವಿಡುವ ಪ್ರಯತ್ನ ಕಾಣುತ್ತಿದೆ. ಹಾಗಾಗಿ ತಮ್ಮ ಅಧಿಕಾರದ ಆಸೆಗೆ ಮುಳ್ಳಾಗಿರುವ ಕಡವೆ ಕುಟುಂಬದ ರಾಮಕೃಷ್ಣ ಹೆಗಡೆಯವರ ಮೇಲೆ ಭ್ರಷ್ಟಾಚಾರ, ಅವ್ಯವಹಾರ, ಚೀಟಿಂಗ್ ಇತ್ಯಾದಿ ಕೇಸ್ ಗಳನ್ನು ಸಂಸ್ಥೆಯ ಮೂಲಕ ದಾಖಲಿಸಿ ಜನತೆಯ ದೃಷ್ಟಿಯಲ್ಲಿ ಅವರನ್ನು ಹೊರಗಿಡಬೇಕು ಎಂಬ ಕೊನೆಯ ಅಪಪ್ರಚಾರದ ಅಸ್ತ್ರವನ್ನು ಪ್ರಯೋಗಿಸಿದಂತೆ ಕಂಡು ಬರುತ್ತಿದೆ. ಆದರೆ ಸಂಸ್ಥೆಯ ಜನರಿಗೆ ಕಡವೆ ಕುಟುಂಬದ ಬಗ್ಗೆ ಯಾರೂ ತಿಳಿಸುವ ಅವಶ್ಯಕತೆಯಿಲ್ಲ. ಕಡವೆಯವರ ಆದರ್ಶ ಉಳಿದವರಂತೆ ಕೇವಲ ಸಹಕಾರಿ ಸಾಕ್ಷರತೆಯ ಪುಸ್ತಕದಲ್ಲಲ್ಲ. ಬದಲಾಗಿ ಜನರ ಸಂಕಷ್ಟಕ್ಕೆ ಸ್ಪಂದಿಸುವ ಮಾನವೀಯತೆಯ ಗುಣದಲ್ಲಿದೆ ಎಂಬುದು ಕಡವೆಯವರ ಒಡನಾಡಿಗಳಿಗೆ ಸದಾ ತಿಳಿದಿದೆ. ಹಾಗಾಗಿ ಯಾರು ಎಷ್ಟೇ ಕೇಸ್ ಹಾಕಲಿ, ಅದೆಲ್ಲವನ್ನೂ ನೈತಿಕತೆಯ ಕಾರಣಕ್ಕೆ ಧೈರ್ಯದಿಂದ ಎದುರಿಸಿ ಕಡವೆಯವರು ಬರುತ್ತಾರೆ. ಮತ್ತು ಅಪಪ್ರಚಾರದ ಕೇಸ್ ಹಾಕಿದಷ್ಟು ಜನ ಅವರಿಗೆ ಇನ್ನಷ್ಟು ಹತ್ತಿರವಾಗುತ್ತಾರೆ ಎಂಬುದು ಯಾವತ್ತಿನ ಸತ್ಯ.

ಕಡವೆ ಕುಟುಂಬದ ವ್ಯವಹಾರದ ಪಾರದರ್ಶಕತೆಯನ್ನು, ಜನಪರ ನಿಲುವನ್ನು ನಾನು ಕಳೆದ ನಾಲ್ಕೈದು ದಶಕಗಳಿಂದ ನೋಡಿದ್ದೇನೆ. ಮಾತು ಕಡಿಮೆ, ಕೆಲಸ ಜಾಸ್ತಿ. ಕಷ್ಟದಲ್ಲಿರುವ ರೈತರು ಮರುಗಿದರೆ ಆಂತರ್ಯದಲ್ಲಿ ಕಣ್ಣೀರಾಕುವ ರಾಮಕೃಷ್ಣ ಹೆಗಡೆಯವರು ರೈತರ ಸಂಕಷ್ಟ ನಿವಾರಣೆಗೆ ತಮ್ಮಿಂದಾಗುವ ಪ್ರಯತ್ನ ಯಾವತ್ತಿಗೂ ಮಾಡುತ್ತಾರೆ. ಮುಂದೆಯೂ ಮಾಡುತ್ತಾರೆ. ತನ್ನನ್ನು ನಂಬಿದ ರೈತರಿಗೆ, ಸಹಕಾರಿ ವ್ಯವಸ್ಥೆಗೆ, ಜನರಿಗೆ ದ್ರೋಹ ಮಾಡುವ ಕೆಲಸ ಅವರೆಂದಿಗೂ ಮಾಡಲಾರದು ಎಂಬ ದೃಢ ವಿಶ್ವಾಸ ನನ್ನಂತ ಸಾವಿರಾರು ಕುಟುಂಬಕ್ಕಿದೆ. ಈ ವಿಶ್ವಾಸವೇ ಅವರನ್ನು ಕಾಪಾಡುತ್ತದೆ.–ತಿಮ್ಮಯ್ಯ ಸತ್ಯನಾರಾಯಣ ಹೆಗಡೆ, ಅಗಸಾಲ ಬೊಮ್ಮನಳ್ಳಿ, ಟಿಎಸ್ಎಸ್ ಸದಸ್ಯ

ಸಂಸ್ಥೆಯ ಹಾಲಿ ಅಧ್ಯಕ್ಷರು ತಮ್ಮ ಪ್ರಭಾರಿ ಪ್ರಧಾನ ವ್ಯವಸ್ಥಾಪಕನ ಮೂಲಕ ಹಾಕಿಸಿರುವ ಅಪಪ್ರಚಾರದ ಕೇಸ್ ನ ವಿಷಯ ಇದಾವುದು ಸದಸ್ಯ ಜನರಿಗೆ ಹೊಸದಲ್ಲ. ಆ ಎಲ್ಲ ವಿಷಯಗಳನ್ನು ಸಂಸ್ಥೆಯ ಈ ಹಿಂದಿನ ವಾರ್ಷಿಕ ಸಾಧಾರಣ ಸಭೆಯಲ್ಲಿ ಗಂಟೆಗಟ್ಟಲೇ ಈಗಾಗಲೇ ಚರ್ಚೆ ನಡೆಸಿದ್ದೇ ಆಗಿದೆ. ಅದರ ಪೂರ್ಣ ಹೂರಣವು ಎಲ್ಲ ಸದಸ್ಯ ಜನರಿಗೆ ತಿಳಿದೇ ಇದೆ. ಇಷ್ಟು ದಿನದ ಆಂತರಿಕ ಲೆಕ್ಕಪರಿಶೋಧನೆ ಹೆಸರಿನಲ್ಲಿ ಹೊಸದು ಹುಡುಕಿದ್ದು ಏನೂ ಇಲ್ಲವೆಂಬಂತೆ ಕಾಣುತ್ತದೆ. ಹಾಗಾಗಿ ಇಂತಹ ವಿಷಯದ ಮೇಲೆ ಅಪಪ್ರಚಾರದ ಕೇಸ್ ದಾಖಲಿಸಲಾಗಿದೆ. ಮತ್ತು ಅದರನ್ನು ಉದ್ಧೇಶಪೂರ್ವಕವಾಗಿ ತಮ್ಮ ಸ್ವಾರ್ಥ ಸಾಧನೆಗೆ ಕ್ರಿಮಿನಲ್ ಕೇಸ್ ಮಾಡಿದ್ದಾರೆ.

  • ಡಿ.ವಿ.ಹೆಗಡೆ, ಹಳ್ಳಕೊಪ್ಪ
    ನಿವೃತ್ತ ಜನರಲ್ ಮ್ಯಾನೇಜರ್, ಜನತಾ ಬಝಾರ್, ಶಿರಸಿ
Share This
300x250 AD
300x250 AD
300x250 AD
Back to top