Slide
Slide
Slide
previous arrow
next arrow

ಬೇಸಿಗೆ ಶಿಬಿರ: ಮಕ್ಕಳಿಂದ ಜಾನಪದ ಕಲಾ ಪ್ರಕಾರ ಪ್ರದರ್ಶನ

300x250 AD

ಶಿರಸಿ: ಇಂದಿನ ಮಕ್ಕಳು ನಾಳೆಯ ಪ್ರಜೆಗಳು ಎನ್ನುತ್ತಾ ಮಕ್ಕಳ ಅವಕಾಶಗಳನ್ನು ತಪ್ಪಿಸಬಾರದು ಎಂದು ಖ್ಯಾತ ವೈದ್ಯೆ ರೋ. ಡಾ|ಸುಮನ್ ಹೆಗಡೆ ಅಭಿಪ್ರಾಯಪಟ್ಟರು. ನಗರದ ರಂಗಧಾಮದಲ್ಲಿ ಸ್ಕೊಡ್‌ವೆಸ್ ಸಂಸ್ಥೆ ಹಾಗೂ ದೇಸಾಯಿ ಫೌಂಡೇಶನ್‌ರವರ ಸಹಯೋಗದಲ್ಲಿ ನಡೆದ ಮಕ್ಕಳ ಬೇಸಿಗೆ ಶಿಬಿರಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಇಂದಿನ ಮಕ್ಕಳು ಆಧುನಿಕತೆ ಹಾಗೂ ತಂತ್ರಜ್ಞಾನದ ವ್ಯಾಪ್ತಿಗೆ ಒಳಪಟ್ಟವರಾಗಿದ್ದು ಸಾಮಾಜಿಕ ಬದಲಾವಣೆಯ ಕಾಲಘಟ್ಟದಲ್ಲಿ ನಿರ್ಣಾಯಕ ಪಾತ್ರ ವಹಿಸಬಲ್ಲ ಸಾಮರ್ಥ್ಯವನ್ನು ಹೊಂದಿದವರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಮಕ್ಕಳ ಬೇಡಿಕೆ ಮತ್ತು ಅವಶ್ಯಕತೆಗಳನ್ನು ಪೂರೈಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳುತ್ತಾ ಗ್ರಾಮೀಣ ಪ್ರದೇಶದ ಮಕ್ಕಳ ಬೆಳವಣಿಗೆಗಾಗಿ ಸ್ಕೊಡ್‌ವೆಸ್ ಸಂಸ್ಥೆ ಮಾಡುತ್ತಿರುವ ಸಮಾಜಮುಖಿ ಕಾರ್ಯ ಅಭಿನಂದನಾರ್ಹ ಎಂದರು.

300x250 AD

ಮುಖ್ಯ ಅತಿಥಿಗಳಾಗಿದ್ದ ಸಾಮಾಜಿಕ ಕಾರ್ಯಕರ್ತ ರಾಮು ಕಿಣಿ ಮಾತನಾಡುತ್ತಾ ಮಕ್ಕಳನ್ನು ಸನಾತನ ಸಂಸ್ಕೃತಿಯ ವ್ಯಾಪ್ತಿಯಲ್ಲಿ ಸುಸಂಸ್ಕೃತರನ್ನಾಗಿ ಮಾಡುವಲ್ಲಿ ಬೇಸಿಗೆ ಶಿಬಿರಗಳು ಪ್ರಮುಖ ಪಾತ್ರ ವಹಿಸುತ್ತವೆ. ಮಕ್ಕಳಲ್ಲಿ ಸಂಸ್ಕಾರವನ್ನು ಬೆಳೆಸುವುದರಿಂದ ಸ್ವಸ್ಥ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕರವರು ಬೇಸಿಗೆ ಶಿಬಿರ ಆಯೋಜಿಸುವ ಹಿಂದಿನ ಆಶಯವನ್ನು ತಿಳಿಸುತ್ತಾ ಈ ಸಾರಿ 4 ಸಾವಿರಕ್ಕಿಂತ ಹೆಚ್ಚು ಮಕ್ಕಳಿಗೆ ಬೇಸಿಗೆ ಶಿಬಿರವನ್ನು ಆಯೋಜಿಸಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಕ್ಕಳಿಗೆ ಬೇಸಿಗೆ ಶಿಬಿರದ ಜೊತೆಯಲ್ಲಿ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಸಂಘಟಿಸುವ ಉದ್ದೇಶ ಹೊಂದಲಾಗಿದೆ ಎಂದರು.
ವೇದಿಕೆಯಲ್ಲಿದ್ದ ಶಿಕ್ಷಣ ತಜ್ಞ ಪ್ರೊ.ಕೆ.ಎನ್.ಹೊಸಮನಿ, ಸಂಸ್ಥೆಯ ಕಾನೂನು ಸಲಹೆಗಾರ ವಕೀಲರೂ ಆದ ದಯಾನಂದ ಅಗಾಸೆಯವರು ಸಂದರ್ಭೋಚಿತವಾಗಿ ಮಾತನಾಡಿದರು.
ಸಮಾರೋಪ ಸಮಾರಂಭದ ಆರಂಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಸರಸ್ವತಿ ಎನ್. ರವಿ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆ ನಡೆದು ಬಂದ ಹಾದಿ, ಮುಂದಿನ ದಿನಗಳಲ್ಲಿ ಕೈಗೊಳ್ಳುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಎಲ್ಲರನ್ನೂ ಸ್ವಾಗತಿಸಿದರು. ಕೊನೆಯಲ್ಲಿ ತಂಡದ ಹೆಚ್.ಎಫ್.ಹೆಚ್. ಯೋಜನೆಯ ಮುಖ್ಯಸ್ಥ ಉಮೇಶ ಮರಾಠಿ ವಂದಿಸಿದರು. ಕಾರ್ಯಕ್ರಮಾಧಿಕಾರಿ ಮಾಲತಿ ಕರ್ಕಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿದರು. ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಂದ ಆಯ್ಕೆಗೊಂಡ 50 ಕ್ಕೂ ಹೆಚ್ಚು ಮಕ್ಕಳ ತಂಡಗಳು ಶಿಬಿರದಲ್ಲಿ ಕಲಿತ ಕರಾಟೆ, ಯೋಗ, ಯಕ್ಷಗಾನ, ನೃತ್ಯ, ಸಂಗೀತ, ಚಿತ್ರಕಲೆ, ಕರಕುಶಲ ವಸ್ತುಗಳ ತಯಾರಿಕೆ, ಭಾಷಣ, ಏಕಪಾತ್ರಾಭಿನಯ ಮುಂತಾದ ಕಲಾ ಪ್ರದರ್ಶನಗಳನ್ನು ನೀಡಿದರು. ಸಮಾರೋಪ ಸಮಾರಂಭದಲ್ಲಿ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಪಾಲಕರು ಭಾಗವಹಿಸಿದ್ದರು.

Share This
300x250 AD
300x250 AD
300x250 AD
Back to top