ಪ್ರತಿಯೊಂದು ಯಶಸ್ವಿ ಕಾರ್ಯದ ಹಿಂದೆ ಮಹಿಳೆಯರ ಕೊಡುಗೆ ಇರುತ್ತದೆ ಎಂಬ ಮಾತಿನಂತೆ, ಮಹಿಳೆಯರು ಇರುವ ಕಡೆಗಳಲ್ಲಿ ಒಂದು ರೀತಿಯ ಆತ್ಮೀಯ ಮತ್ತು ಆಹ್ಲಾದಕರ ವಾತಾವರಣ ಕಂಡು ಬರುವುದು ಸಾಮಾನ್ಯ, ಅದೇ ರೀತಿ ಉತ್ತರ ಕನ್ನಡ ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಕ್ಕೆ ಸಂಬಂಧಿಸಿದಂತೆ, ಮಹಿಳಾ ಮತಗಟ್ಟೆಗಳಿಗೆ ಬರುವ ಮಹಿಳಾ ಮತದಾರರಿಗೆ, ಮತದಾನ ಕೇಂದ್ರದಲ್ಲಿ ಸಂತಸದ ವಾತಾವರಣ ಮೂಡಿಸಿ, ಅವರನ್ನು ಸ್ವಾಗತಿಸಲು, ಮಹಿಳಾ ಮತಗಟ್ಟೆಗಳಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿರುವ ಮಹಿಳಾ ಸಿಬ್ಬಂದಿಗಳು ಮತಗಟ್ಟೆಗಳಿಗೆ ವಿಶೇಷ ಮತ್ತು ಆಕರ್ಷಕ ರೀತಿಯಲ್ಲಿ ಮೆರುಗು ನೀಡಲಿದ್ದಾರೆ.
ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರ ವಿಶೇಷ ಕಲ್ಪನೆಯಲ್ಲಿ ಮೂಡಿಬಂದಿರುವ ಈ ಚಿಂತನೆಗೆ, ಮಹಿಳಾ ಮತಗಟ್ಟೆ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಮಹಿಳಾ ಸಿಬ್ಬಂದಿಗಳು ಫುಲ್ ಖುಷ್ ಅಗಿದ್ದಾರೆ.
ಮಹಿಳಾ ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಸಿಬ್ಬಂದಿಗಳಿಗೆ ಹಸಿರು ಗಾಜಿನ ಬಳೆಗಳು, ಹಸಿರು ಬಣ್ಣದ ಸೀರೆ ಮತ್ತು ಅದಕ್ಕೆ ಒಪ್ಪುವ ರವಿಕೆಯನ್ನು ನೀಡಿರುವ ಜಿಲ್ಲಾಧಿಕಾರಿಗಳು, ಎಲ್ಲಾ ಮಹಿಳಾ ಮತಗಟ್ಟೆ ಸಿಬ್ಬಂದಿಗಳು ಏಕರೂಪದ ಉಡುಪುಗಳನ್ನು ಧರಿಸಿ, ಮಹಿಳಾ ಮತದಾರರನ್ನು ಮತಗಟ್ಟೆಗಳಿಗೆ ಆಕರ್ಷಿಸಲು ಕಾರ್ಯಕ್ರಮ ರೂಪಿಸಿದ್ದಾರೆ.
ಈ ಕಾರ್ಯಕ್ರಮ ಅಂಗವಾಗಿ, ಬುಧವಾರ ಸಂಜೆ, ಮಹಿಳಾ ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಸಿಬ್ಬಂದಿಗಳಿಗೆ ಹಸಿರು ಗಾಜಿನ ಬಳೆಗಳನ್ನು ತೊಡಿಸುವ ಕುರಿತು ನಡೆದ ಕಾರ್ಯಕ್ರಮದಲ್ಲಿ, ತಾವೇ ಮೊದಲು ಹಸಿರು ಬಳೆಗಳನ್ನು ತೊಟ್ಟುಕೊಳ್ಳುವ ಜಿಲ್ಲಾಧಿಕಾರಿಗಳು ಚಾಲನೆ ನೀಡಿದರು. ನಂತರ ಮಹಿಳಾ ಸಿಬ್ಬಂದಿಗಳ ಹಣೆಗೆ ಅರಿಶಿಣ ,ಕುಂಕುಮ ಇಟ್ಟು , ಆರತಿ ಬೆಳಗಿ, ಹಸಿರು ಸೀರೆ ಮತ್ತು ಅದಕ್ಕೆ ಒಪ್ಪುವ ರವಿಕೆ ಮತ್ತು ಮುಡಿದುಕೊಳ್ಳಲು ಹೂವನ್ನು ನೀಡಿದ ಜಿಲ್ಲಾಧಿಕಾರಿಗಳು, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಮಟ್ಟದ ವಿವಿಧ ಮಹಿಳಾ ಅಧಿಕಾರಿಗಳಿಗೆ ಸಹ ಆರತಿ ಬೆಳಗಿ ಗೌರವಿಸಿದರು.
ಜಿಲ್ಲೆಯಲ್ಲಿ ಲೋಕಸಭಾ ಚುನಾವಣಾ ಪ್ರಯುಕ್ತ 8 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರು ಅಧಿಕವಾಗಿರುವ ಮತಗಟ್ಟೆ ವ್ಯಾಪ್ತಿಯಲ್ಲಿ 3 ಮಹಿಳಾ ಮತಗಟ್ಟೆಗಳನ್ನು ಸ್ಥಾಪಿಸಲಾಗುತಿದ್ದು, ಈ ಮತಗಟ್ಟೆಗಳಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸುವ ಎಲ್ಲಾ ಸಿಬ್ಬಂದಿಗಳು ಮಹಿಳೆಯರೇ ಆಗಿರಲಿದ್ದು, ಪ್ರತಿ ಮಹಿಳಾ ಮತಗಟ್ಟೆಗೆ 4 ರಿಂದ 5 ಮಹಿಳಾ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಉತ್ತರ ಕನ್ನಡ ಲೋಕಸಭಾ ವ್ಯಾಪ್ತಿಯ ಮಹಿಳಾ ಮತಗಟ್ಟೆಗಳಲ್ಲಿ ಸುಮಾರು 120 ಮಹಿಳೆಯರು ಕರ್ತವ್ಯ ನಿರ್ವಹಿಸಲಿದ್ದು, ಈ ಎಲ್ಲಾ ಸಿಬ್ಬಂದಿಗಳಿಗೆ ಹಸಿರು ಗಾಜಿನ ಬಳೆಗಳು, ಹಸಿರು ಬಣ್ಣದ ಸೀರೆ ಮತ್ತು ಅದಕ್ಕೆ ಒಪ್ಪುವ ರವಿಕೆಯನ್ನು ಒದಗಿಸಲಾಗುತ್ತಿದ್ದು, ಇವುಗಳನ್ನು ತೊಟ್ಟ ಮಹಿಳಾ ಸಿಬ್ಬಂದಿಗಳು ಮತಗಟ್ಟೆಗೆ ವಿಶೇಷ ಕಳೆ ನೀಡುವ ಜೊತೆಗೆ ಮಹಿಳಾ ಮತದಾರರನ್ನು ಮತಗಟ್ಟೆಯೆಡೆಗೆ ಸೆಳೆಯಲಿದ್ದಾರೆ.
ಮಹಿಳಾ ಮತಗಟ್ಟೆಗಳಲ್ಲಿ ಆತ್ಮೀಯ ಮತ್ತು ಸಂತಸದ ವಾತಾವರಣ ನಿರ್ಮಾಣ ಮಾಡಲು, ಮಹಿಳಾ ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಸಿಬ್ಬಂದಿಗಳಿಗೆ ಹಸಿರು ಗಾಜಿನ ಬಳೆಗಳು, ಹಸಿರು ಬಣ್ಣದ ಸೀರೆ ಮತ್ತು ಅದಕ್ಕೆ ಒಪ್ಪುವ ರವಿಕೆಯನ್ನು ನೀಡಲಾಗಿದೆ. ಇದು ಮಹಿಳಾ ಅಧಿಕಾರಿಗಳು ಸಂತಸದಿಂದ ಚುನಾವಣಾ ಕರ್ತವ್ಯ ನಿರ್ವಹಿಸಲು ಉತ್ತೇಜಿಸುವ ಜೊತೆಗೆ, ಜಿಲ್ಲೆಯ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಲು ಪ್ರೇರೇಪಣೆ ನೀಡಲಿದೆ. ಮಹಿಳಾ ಮತಗಟ್ಟೆಗಳಲ್ಲಿ ಮಹಿಳೆಯರಿಗೆ ವಿಶ್ರಾಂತಿ ಕೊಠಡಿ ಸೇರಿದಂತೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳ ಜೊತೆಗೆ, ಮಹಿಳೆಯರೊಂದಿಗೆ ಆಗಮಿಸುವ ಚಿಕ್ಕ ಮಕ್ಕಳಿಗೆ ಕಾಳಜಿಗೆ ಸಹ ವಿಶೇಷ ವ್ಯವಸ್ಥೆ ಮಾಡಲಾಗುವುದು : ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ